Urdu   /   English   /   Nawayathi

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ಕರ್ನಾಟಕ ಕಂಪ್ಲೀಟ್ ಲಾಕ್..!?

share with us

ಬೆಂಗಳೂರು: 28 ಜೂನ್ 2020 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿದ ನಂತರ ಲಾಕ್‍ಡೌನ್ ಮತ್ತಷ್ಟು ಕಠಿಣಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಿನ್ನೆ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟ ಕಾರಣ ಜೂನ್ 5ರ ನಂತರ ಲಾಕ್‍ಡೌನ್ ಮತ್ತಷ್ಟು ಬಿಗಿಗೊಳಿಸಬೇಕೆಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ತಜ್ಞರ ಸಮಿತಿಯಲ್ಲಿರುವ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ, ಜಯ ದೇವ ಹೃದ್ರೋಗ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಹಾಗೂ ಇತರರನ್ನೊಳಗೊಂಡ ತಜ್ಞರ ಸಮಿತಿ ರಾಜ್ಯದಲ್ಲಿ ಸೋಂಕು ತಡೆಗಟ್ಟಬೇಕಾದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಸಲಹೆ ನೀಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ಈಗಾಗಲೇ ಎರಡು ವಿಷಯಗಳಿಗೆ ಪರೀಕ್ಷೆ ನಡೆದಿದೆ. ಜು.4ಕ್ಕೆ ಪರೀಕ್ಷೆ ಮುಗಿಯಲಿದ್ದು, ನಂತರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಸಮಿತಿ ಸಲಹೆ ಮಾಡಿದೆ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಯಥೇಚ್ಚವಾಗಿ ಹರಡುತ್ತಿದ್ದು, ವಾರದ ಎರಡು (ಶನಿವಾರ ಹಾಗೂ ಭಾನುವಾರ) ದಿನಗಳಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವಂತೆ ಸಮಿತಿ ಸೂಚಿಸಿದೆ. ಜತೆಗೆ ರೋಗಿಗಳಿಗೆ ಇನ್ನೂ ಹೆಚ್ಚಿನ ಬೆಡ್‍ಗಳ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10ಸಾವಿಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ ಸಿಗಲಿದೆ. ಇದನ್ನು ಬಳಸಿಕೊಳ್ಳುವಂತೆಯೂ ಸಮಿತಿ ಸಲಹೆ ಮಾಡಿದೆ. ಜತೆಗೆ ಸರ್ಕಾರ ನಿರ್ಮಾಣ ಮಾಡಿ ಬಳಕೆಯಾಗದಿರುವ ಅಪಾರ್ಟ್‍ಮೆಂಟ್‍ಗಳಲ್ಲೂ ಬೆಡ್ ವ್ಯವಸ್ಥೆ ಮಾಡುವುದು, ಸಾಧ್ಯವಾದರೆ ಖಾಸಗಿಯವರನ್ನು ಮನವೊಲಿಸಿ ಅಂತಹ ಅಪಾರ್ಟ್‍ಮೆಂಟ್‍ಗಳನ್ನು ಬಾಡಿಗೆ ತೆಗೆದುಕೊಳ್ಳುವಂತೆ ಸಮಿತಿ ಸಲಹೆ ನೀಡಿದೆ. ತಜ್ಞರ ಸಮಿತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಹಂತ ಹಂತವಾಗಿ ಅನುಷ್ಠಾನ ಮಾಡಲು ಮುಂದಾಗಿದೆ.

ನಿನ್ನೆಯ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾರದ ಎರಡು ದಿನದಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಸಲಹೆ ಕೇಳಿದ್ದಾರೆ. ಏಕಾಏಕಿ ಎಲ್ಲವನ್ನೂ ಸಡಿಲಗೊಳಿಸಿ ಪುನಃ ಎರಡು ದಿನ ಲಾಕ್‍ಡೌನ್ ಮಾಡಿದರೆ ಈ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಎಲ್ಲವನ್ನೂ ಕಾನೂನಿನ ಮೂಲಕವೇ ಜಾರಿ ಮಾಡಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಮನವೊಲಿಸುವ ಮೂಲಕ ಸರ್ಕಾರ ಈ ನಿಯಮಗಳನ್ನು ಜಾರಿ ಮಾಡಬೇಕೆಂದು ಸಮಿತಿ ಕಿವಿಮಾತು ಹೇಳಿದೆ. ಕಠಿಣ ನಿಬಂಧನೆಗಳು: ಇನ್ನು ಮುಂದೆ ಸರ್ಕಾರ ಕೆಲವು ಕಠಿಣ ನಿಬಂಧನೆಗಳನ್ನು ಜಾರಿ ಮಾಡಲು ಮುಂದಾಗಿದೆ. ಮುಖ್ಯವಾಗಿ ರಾಜಧಾನಿ ಬೆಂಗಳೂರಿನಿಂದ ಹೊರ ಹೋಗುವವರು ಹಾಗೂ ಬರುವವರಿಗೆ ನಿಬಂಧನೆಗಳನ್ನು ಜಾರಿ ಮಾಡಲಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಹೊರ ಹೋಗುವವರು ಇಲ್ಲವೇ ನಗರಕ್ಕೆ ಆಗಮಿಸುವವರು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಗಾಗಬೇಕೆಂಬ ನಿಯಮ ಜಾರಿಗೆ ಬರಲಿದೆ. ಹೊರಗಿನಿಂದ ಬಂದವರಿಂದಲೇ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಹೋಂ ಕ್ವಾರಂಟೈನ್ ಜಾರಿ ಮಾಡುವುದು ಅನಿವಾರ್ಯವಾಗಿದೆ. ಜತೆಗೆ ಇನ್ನು ಮುಂದೆ ಅಂತರ್ ಜಿಲ್ಲಾ ಪ್ರವಾಸಕ್ಕೂ ಕಡಿವಾಣ ಬೀಳಲಿದೆ. ಅಂತರ್ ಜಿಲ್ಲಾ ಪ್ರವಾಸಕ್ಕೆ ಅನುಮತಿ ನೀಡಿದ್ದರಿಂದಲೇ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಬೆಳೆಸಿದ ಕಾರಣ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಇದನ್ನು ತಡೆಗಟ್ಟಲು ಅಂತರ್ ಜಿಲ್ಲಾ ಪ್ರವಾಸಕ್ಕೆ ಕಡಿವಾಣ ಹಾಕುವಂತೆ ಸಮಿತಿ ಸಲಹೆ ಕೊಟ್ಟಿದೆ. ಈಗಾಗಲೇ ಕಂದಾಯ ಸಚಿವ ಹಾಗೂ ಬೆಂಗಳೂರು ಕೊರೊನಾ ಉಸ್ತುವಾರಿ ಆರ್.ಅಶೋಕ್ ತಜ್ಞರ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ವಾರದ ಮಧ್ಯ ಭಾಗದಲ್ಲಿ ಕಂದಾಯ, ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಉನ್ನತ ಶಿಕ್ಷಣ, ವೈದ್ಯಕೀಯ ಸೇರಿದಂತೆ ಮತ್ತಿತರ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಒಂದು ಮೂಲದ ಪ್ರಕಾರ ಜು.5ರ ನಂತರ ವಾರದ ಎರಡು ದಿನ ಅಗತ್ಯ ಸೇವೆ, ವಸ್ತುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. ರಾಜ್ಯದಲ್ಲಿ ಕಠಿಣ ಲಾಕ್‍ಡೌನ್ ಜಾರಿ ಮಾಡಲು ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದು, ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಭೂತ ಆವರಿಸಲಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا