Urdu   /   English   /   Nawayathi

ಬಿಜೆಪಿ ಸರ್ಕಾರ ಆಪರೇಷನ್​ ಕಮಲದ ಮೂಲಕ ಅನೈತಿಕವಾಗಿ ಹುಟ್ಟಿರುವ ಕೂಸು: ಸಿದ್ದರಾಮಯ್ಯ

share with us

ಬೆಂಗಳೂರು: 20 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಬಂದಿರುವ ಕೂಸು ಈ ಬಿಜೆಪಿ ಸರ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್​​ನಿಂದ 17 ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಂಡಿದ್ದಾರೆ. ಇಲ್ಲವಾದರೆ ಯಡಿಯೂರಪ್ಪ ಮತ್ತೆ ಅಲ್ಪಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಮಾಡುತ್ತಿದ್ದರು. ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಲು ಜನಾದೇಶ ಕಾರಣವಲ್ಲ. 17 ಶಾಸಕರು ರಾಜೀನಾಮೆ ಕೊಟ್ಟ ಕಾರಣದಿಂದ ಬಿಜೆಪಿ ಸರ್ಕಾರ ಬಂದಿದೆ‌. ಹಾಗಾಗಿ ಬಿಜೆಪಿಯವರು ಜನಾದೇಶದಿಂದ ಬಂದಿದ್ದೇವೆ ಎನ್ನಬಾರದು. ಆಪರೇಷನ್ ಕಮಲದಿಂದ ಬಂದಿದ್ದೇವೆ ಎನ್ನಬೇಕು ಎಂದರು. ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಹೆಚ್ಚು ಶಾಸಕರನ್ನು ಹೊಂದಿದ್ದ ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡಿದರು. ಬಿ.ಎಸ್.ಯಡಿಯೂರಪ್ಪ ಮೂರ್ನಾಲ್ಕು ದಿನ ಮುಖ್ಯಮಂತ್ರಿಯಾಗಿದ್ದರು. ಬಹುಮತ ಸಾಬೀತುಪಡಿಸದೆ ಅಧಿಕಾರ ಕಳೆದುಕೊಳ್ಳಬೇಕಾಯಿತು. ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 14 ತಿಂಗಳ ಕಾಲ ನಡೆಯಿತು. ಆನಂತರ ಕಾಂಗ್ರೆಸ್-ಜೆಡಿಎಸ್‍ನ 17 ಶಾಸಕರಿಂದ ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೆಳೆದುಕೊಳ್ಳುವ ಕೆಲಸವಾಯಿತು. ಆ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡುವುದಿಲ್ಲ ಎಂದರು.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಬೇಕು. ಆದರೆ, ಬಿಜೆಪಿ ಸಚಿವರು ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದಾಗಿ ಸತ್ಯಕ್ಕೆ ದೂರವಾದ ಮಾತುಗಳನ್ನಾಡುತ್ತಿದ್ದಾರೆ ಎಂದರು. ಆಗ ಬಿಜೆಪಿ ಶಾಸಕರಾದ ಅರಗ ಜ್ಞಾನೇಂದ್ರ, ಅನಿಲ್ ಬೆನಕಿ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದಾಗ ಕೋಪಗೊಂಡ ಸಿದ್ದರಾಮಯ್ಯ, ನನಗೆ ನೆನಪಿನ ಶಕ್ತಿ ಅಗತ್ಯಕ್ಕಿಂತ ಹೆಚ್ಚಿದೆ. ಅವರು ರಾಜೀನಾಮೆ ಕೊಡದಿದ್ದರೆ ಉಪ ಚುನಾವಣೆ ಎಲ್ಲಿ ನಡೆಯುತ್ತಿತ್ತು ಎಂದು ತಿರುಗೇಟು ನೀಡಿದರು. ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರದ ಯಾವ ಮುನ್ನೋಟವೂ ಇಲ್ಲ ಎಂದು ಟೀಕಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ರೈತರಿಗಾಗಿ ರಾಜ್ಯ ಸರ್ಕಾರ 4 ಸಾವಿರ ನೀಡಿರುವುದನ್ನು ಬಿಟ್ಟರೆ ಉಳಿದೆಲ್ಲವೂ ನಮ್ಮ ಕಾರ್ಯಕ್ರಮಗಳನ್ನೇ ಮುಂದುವರೆಸಲಾಗಿದೆ ಎಂದು ಹೇಳಿದರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸಿದ ಅವರು, ಈ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿವೆ. ಆದರೆ ಇದರ ಸಾಧನೆ ಏನೂ ಇಲ್ಲ ಎಂದು ಆರೋಪಿಸಿದರು. ರೈತರ ಕೃಷಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ. ಅರಣ್ಯ ಬೆಳೆಸುವಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ರಾಜ್ಯವಾಗಿದ್ದು ನಾನು ಮುಖ್ಯಮಂತ್ರಿಯಾಗಿದ್ದಾಗ ಎಂದರು. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಿದರು. ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಾಡಿದ್ದ ಎರಡು ಲಕ್ಷ ರೂ.ಗಳವರೆಗಿನ ಸಾಲ ಮನ್ನಾ ಮಾಡಿದರು ಎಂದು ವಿವರಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا