Urdu   /   English   /   Nawayathi

ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ: ರಾಜ್ಯಾದ್ಯಂತ ಜನಜೀವನ, ವಾಹನ ಸಂಚಾರ ಯಥಾ ಸ್ಥಿತಿ, ಹಲವೆಡೆ ತಿಭಟನೆ

share with us

ಬೆಂಗಳೂರು: 13 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿದ್ದು, ಜನಜೀವನ ಎಂದಿನಂತಿದೆ. ಆದರೆ ವಾಹನಗಳ ಸಂಖ್ಯೆ ಇತರ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಇದೆ. ಹೋಟೆಲ್ಗಳು, ಚಿತ್ರಮಂದಿರಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿವೆ. ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಜನ ನಿಬಿಡ ಪ್ರದೇಶವಾದ ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ, ಮೆಜೆಸ್ಟಿಕ್‌ ನಲ್ಲಿ ವಹಿವಾಟು ಅಬಾದಿತವಾಗಿದ್ದು, ಆಟೋಗಳು, ಖಾಸಗಿ ವಾಹನಗಳು, ಸಾರಿಗೆ ವಾಹನ ಎಂದಿನಂತೆ ಸಂಚರಿಸುತ್ತಿವೆ. ಆದರೆ, ಖಾಸಗಿ ಶಾಲಾ ಬಸ್ ಚಾಲಕರ ಸಂಘ ಈ ಬಂದ್​ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯ ಮಕ್ಕಳನ್ನು ಅವರ ಪೋಷಕರೇ ಇಂದು ಶಾಲೆಗೆ ಕರೆತರುತ್ತಿದ್ದ ದೃಶ್ಯ ಕಂಡುಬಂತು. ಆದರೆ ಯಾವುದೇ ಶಾಲೆ ಅಥವಾ ಕಾಲೇಜು ಬಂದ್ ಪ್ರಯುಕ್ತ ರಜೆ ಘೋಷಿಸಿರಲಿಲ್ಲ. ಡಾ. ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು, ಕನ್ನಡಿಗರಿಗೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರರು 11 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಬೃಹತ್ ಜಾಥಾ ನಡೆಸಿ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಜಾಥಾ ನಡೆಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಫ್ರೀಡಂ ಪಾರ್ಕ್ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ 2 ಎಸಿಪಿ, 5 ಇನ್ಸ್‌ಪೆಕ್ಟರ್‌, 15 ಪಿಎಸ್ಐ ಸೇರಿದಂತೆ 400 ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲೂ ಬಂದ್‌ ಯಾವುದೇ ಪರಿಣಾಮ ಬೀರಿಲ್ಲ. ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಸಾಗಿದೆ. ಬೆಳಗ್ಗೆ ನಿಧಾನ ಗತಿಯಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗಿವೆ. ಖಾಸಗಿ ವಾಹನ ಸೇರಿದಂತೆ ಎಲ್ಲಾ ವಾಹನಗಳು ಸಂಚರಿಸುತ್ತಿವೆ.

ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ವಾಹನ ಸಂಚಾರ ಎಂದಿನಂದಿದೆ. ಜಿಲ್ಲೆಯ ಯಾವುದೇ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಇನ್ನು ಬಾಗಲಕೋಟೆಯಲ್ಲಿ ಎಂದಿನಂತೆ ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ವಾಹನಗಳ ಬಸ್ ಸಂಚಾರ ಆರಂಭಗೊಂಡಿದೆ. ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿದಿವೆ. ಅಂಗಡಿ ಮುಗ್ಗಟ್ಟುಗಳು, ಹೋಟೆಲ್‌ ವ್ಯಾಪಾರ ವಹಿವಾಟು ಆರಂಭಿಸಿವೆ. ಶಿವಮೊಗ್ಗದಲ್ಲೂ ಬಂದ್‌ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಜನಜೀವನ ಸಹಜಸ್ಥಿತಿಯಲ್ಲಿದ್ದು, ಸಾರಿಗೆ ವ್ಯವಸ್ಥೆ ಎಂದಿನಂತಿದೆ. ಶಾಲಾ ಕಾಲೇಜು, ಖಾಸಗಿ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ರಾಮನಗರದಲ್ಲಿ ಜನಜೀವನ ಸಹಜಸ್ಥಿತಿಯಲ್ಲಿದ್ದು, ಬಸ್‌, ಆಟೋಗಳು, ಕ್ಯಾಬ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಹುಬ್ಬಳ್ಳಿಯಲ್ಲಿ ಬಂದ್ ಯಾವುದೇ ಪರಿಣಾಮ ಬೀರಿಲ್ಲ. ಬೆಳಗ್ಗಿನಿಂದಲೆ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಈಗಾಗಲೇ ಜಿಲ್ಲೆಯ ಸಂಘಟನೆಗಳು ಬಂದ್‌ಗೆ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿವೆ. ಆದರೂ ಪ್ರತಿಭಟನೆ ನಡೆಸುವುದಾಗಿ ಅವು ತಿಳಿಸಿವೆ. ಹಾಸನದಲ್ಲೂ ಬಂದ್‌ ಪರಿಸ್ಥಿತಿ ಕಂಡುಬಂದಿಲ್ಲ. ವ್ಯಾಪಾರ ವಹಿವಾಟು ಎಂದಿನಂತಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ‌ಮಾಡಿರಲಿಲ್ಲ. ಆದ್ದರಿಂದ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದುದು ಕಂಡುಬಂತು. ಸರಕಾರಿ ‌ಕಚೇರಿ ತೆರೆದಿದ್ದವು. ಬಂದ್‌ಗೆ ಜೆಡಿಎಸ್ ಬೆಂಬಲ ಸೂಚಿಸಿದ್ದರೂ ಜಿಲ್ಲೆಯಲ್ಲಿ ಬಂದ್ ಅಷ್ಟೇನೂ ಯಶಸ್ವಿಯಾಗಿಲ್ಲ. ಪ್ರತಿಭಟನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ಮನವಿ ಮಾಡಿದ್ದು, ಭದ್ರತೆಗಾಗಿ ಭದ್ರತೆಗಾಗಿ 4 ಡಿವೈಎಸ್ಪಿ, 12 ಸಿಪಿಐ, 29 ಪಿಎಸ್ಐ, 40 ಎಎಸ್ಐ, 500 ಪಿಸಿ, 10 ಡಿಎಆರ್ ತುಕಡಿ ನಿಯೋಜನೆ ಮಾಡಿದ್ದಾರೆ. 

ಬಂದ್ ನೆಪದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದರೆ ಕಠಿಣ ಕ್ರಮದ‌ ಎಚ್ಚರಿಕೆಯನ್ನೂ ನೀಡಿದ್ದಾರೆ. ಗಣಿನಾಡು  ಬಳ್ಳಾರಿಯಲ್ಲಿ ಯಾವುದೇ ರೀತಿಯ ಬಂದ್ ನಡೆದಿಲ್ಲ. ಸದ್ಯ ಜನಜೀವನ ಯಥಾಸ್ಥಿತಿಯಲ್ಲಿದ್ದು, 10 ಗಂಟೆಯ  ನಂತರ ಕೆಲ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಮಾತ್ರ ನಡೆಸಲಿವೆ. ಬಂದ್ ಗೆ ಯಾವುದೇ  ರೀತಿಯ ಅವಕಾಶ ಇಲ್ಲ ಎಂದ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಘೋಷಿಸಿಲ್ಲ.  ವಾಹನ ಸಂಚಾರ, ಸರಕಾರಿ ಬಸ್ ಸೇವೆ ಎಂದಿನಂತಿದ್ದು, ಜನ ಜೀವನ ಯಥಾಸ್ಥಿತಿಯಲ್ಲಿದೆ. ಮೈಸೂರಿನಲ್ಲಿಯೂ ಬಂದ್‌ ನೀರಸವಾಗಿದ್ದು, ಎಂದಿನಂತೆ ಸಾರಿಗೆ ಬಸ್, ಖಾಸಗಿ ಬಸ್ ರಸ್ತೆಗಿಳಿದಿವೆ. ಜಿಲ್ಲೆಯ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೈಸೂರಿನ ಯಾವುದೇ ಹೋಟೆಲ್‌ಗಳು ಮುಚ್ಚುವುದಿಲ್ಲ. ಬಂದ್‌ಗೆ ನಮ್ಮ ನೈತಿಕ ಬೆಂಬಲವಿದೆ. ಮೈಸೂರು ಪ್ರವಾಸಿಗರು ಸ್ವರ್ಗ. ಪ್ರವಾಸಿಗರಿಗೆ ತೊಂದರೆಯಾಗುವ ಹಿನ್ನೆಲೆ ಹೋಟೆಲ್ ಮುಚ್ಚುವುದಿಲ್ಲ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ತಿಳಿಸಿದ್ದಾರೆ. ರಾಯಚೂರು, ಕೊಪ್ಪಳ, ಗದಗ, ಚಿಕ್ಕೋಡಿ, ಕೋಲಾರ, ಹಾವೇರಿ, ಚಿತ್ರದುರ್ಗ, ಬಾಗಲಕೋಟೆ , ತುಮಕೂರು, ಬೆಳಗಾವಿ, ಕೊಡಗು, ದಾವಣಗೆರೆ, ಬೀದರ್, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಬಂದ್ ನೀರಸವಾಗಿದ್ದು, ಜನಜೀವನ ಮತ್ತು ವಾಹನ ಸಂಚಾರ ಸಹಜಸ್ಥಿತಿಯಲ್ಲಿತ್ತು. ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟು ತೆರೆದಿದ್ದವು. ಆನೇಕಲ್‌ನ ಹೊಸೂರು ರಸ್ತೆಯಲ್ಲಿ ಪ್ರತಿಭಟನಕಾರರು ಟೈರ್‌ಗೆ  ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಮಾಗಡಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಕನ್ನಡ ಪರ ಸಂಘಟನೆಗಳು ಮುಚ್ಚಿಸುವ ಮೂಲಕ ಬಂದ್‍ಗೆ ಸಹಕಾರ ನೀಡುವಂತೆ ಕೋರಿವೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا