Urdu   /   English   /   Nawayathi

ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು, ಆದರೆ ಈಗ ಇಲ್ಲ: ಲಂಡನ್ ಕೋರ್ಟ್ ಗೆ ವಕೀಲರ ಹೇಳಿಕೆ

share with us

ಲಂಡನ್: 09 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಒಂದು ಕಾಲದಲ್ಲಿ ಶ್ರೀಮಂತ ಉದ್ಯಮಿಯಾಗಿದ್ದರು. ಆದರೆ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆದ ಹಲವು ವಿನಾಶಕಾರಿ ತಿರುವುಗಳಿಂದ ಅವರು ಇಂದು ಶ್ರೀಮಂತ ಉದ್ಯಮಿಯಾಗಿ ಉಳಿದಿಲ್ಲ ಎಂದು ಲಂಡನ್ ನ ಕೋರ್ಟ್ ನಲ್ಲಿ ಅವರ ವಕೀಲರು ಹೇಳಿಕೆ ನೀಡಿದ್ದಾರೆ. ಚೀನಾ ಮೂಲದ ಉನ್ನತ ಬ್ಯಾಂಕುಗಳು ಅನಿಲ್ ಅಂಬಾನಿಯವರಿಂದ 680 ದಶಲಕ್ಷ ಡಾಲರ್ ಹಣವನ್ನು ಹಿಂಪಡೆಯಲು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದು ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ ಅನಿಲ್ ಅಂಬಾನಿ ಪರ ವಕೀಲರು ಹೇಳಿಕೆ ನೀಡಿದ್ದಾರೆ. 2012ರ ಫೆಬ್ರವರಿಯಲ್ಲಿ ತೆಗೆದುಕೊಂಡ ಸುಮಾರು 925 ದಶಲಕ್ಷ ಡಾಲರ್ ಮರುಹಣಕಾಸು ಸಾಲದ ಮೇಲೆ ವೈಯಕ್ತಿಕ ಖಾತರಿಯನ್ನು ಅನಿಲ್ ಅಂಬಾನಿಯವರು ಉಲ್ಲಂಘಿಸಿದ್ದಾರೆ ಎಂದು ಇಂಡಸ್ಟ್ರಿಯಲ್ ಅಂಡ್ ಕಮರ್ಷಿಯಲ್ ಬ್ಯಾಂಕು ಆಫ್ ಚೀನಾ ಲಿಮಿಟೆಡ್ ನ ಮುಂಬೈ ಶಾಖೆ, ಚೀನಾ ಡೆವೆಲಪ್ ಮೆಂಟ್ ಬ್ಯಾಂಕು ಮತ್ತು ಎಕ್ಸಿಮ್ ಬ್ಯಾಂಕುಗಳು ಕೋರ್ಟ್ ನಲ್ಲಿ ದಾವೆ ಹೂಡಿವೆ. ಬ್ಯಾಂಕುಗಳಿಂದ ತೆಗೆದುಕೊಂಡ ಸಾಲಗಳಿಗೆ ವೈಯಕ್ತಿಕ ಖಾತ್ರಿ ನೀಡಲು ಅನಿಲ್ ಅಂಬಾನಿ ಹಿಂದೇಟು ಹಾಕಿದಾಗ ಸಾಲದ ಒಪ್ಪಂದ ಮುರಿದ ಹಿನ್ನಲೆಯಲ್ಲಿ ಲಂಡನ್ ನ ಹೈಕೋರ್ಟ್ ತನ್ನ ಕಾನೂನು ವ್ಯಾಪ್ತಿಯಲ್ಲಿ ಅಂಬಾನಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ''2012ರ ನಂತರ ಅನಿಲ್ ಅಂಬಾನಿಯವರ ಹೂಡಿಕೆಗಳು ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿತು. ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಭಾರತ ಸರ್ಕಾರ ಮಾಡಿಕೊಂಡ ನೀತಿಗಳ ಬದಲಾವಣೆಯಿಂದ ದೇಶದ ಟೆಲಿಕಾಂ ವಲಯಕ್ಕೆ ಇನ್ನಿಲ್ಲದ ಹೊಡೆತ ಬಿದ್ದಿದೆ. 2012ರಲ್ಲಿ 7 ಶತಕೋಟಿ ಡಾಲರ್ಗೂ ಅಧಿಕ ಇದ್ದ ಅನಿಲ್ ಅಂಬಾನಿ ಹೂಡಿಕೆ ಮೌಲ್ಯ ಇಂದು 89 ದಶಲಕ್ಷ ಡಾಲರ್ ಗೆ ಇಳಿದಿದೆ. ಅವರ ಬಾಧ್ಯತೆಗಳ ಲೆಕ್ಕ ತೆಗೆದುಕೊಂಡರೆ ಅವರ ವ್ಯವಹಾರ ಜಾಲ ಮೌಲ್ಯ ಶೂನ್ಯವಾಗಿರುತ್ತದೆ. 

ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದವರು ಇಂದು ಎಲ್ಲವನ್ನೂ ಕಳೆದುಕೊಂಡಿದ್ದಾರೆ, ಹೀಗಾಗಿ 700 ದಶಲಕ್ಷ ಡಾಲರ್ ನಷ್ಟು ಮೊತ್ತ ಅವರು ನ್ಯಾಯಾಲಯಕ್ಕೆ ಕಟ್ಟಲು ಸಾಧ್ಯವಿಲ್ಲ'' ಎಂದು ಯುಕೆ ಕೋರ್ಟ್ ನಲ್ಲಿ ಅಂಬಾನಿ ಬ್ಯಾರಿಸ್ಟರ್ ರಾಬರ್ಟ್ ಹೊವೆ ಹೇಳಿದ್ದಾರೆ. ಆಗ ಚೀನಾ ಬ್ಯಾಂಕ್ ಪರ ವಕೀಲರು, ಅಂಬಾನಿ ಪರ ವಕೀಲರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎನ್ನುತ್ತಾರೆ, ಹಾಗಾದರೆ ಅನಿಲ್ ಅಂಬಾನಿ ಹೇಗೆ ವೈಭವೋಪೇತ ಜೀವನಶೈಲಿ ನಡೆಸುತ್ತಾರೆ, ಅವರಲ್ಲಿ 11ಕ್ಕೂ ಹೆಚ್ಚು ಐಷಾರಾಮಿ ಕಾರುಗಳು, ಖಾಸಗಿ ವಿಮಾನ, ವಿಹಾರನೌಕೆ, ದಕ್ಷಿಣ ಮುಂಬೈಯಲ್ಲಿ ಬಾಡಿಗೆ ರಹಿತ ಸೌಲಭ್ಯವಿರುವ ಪೆಂಟ್ ಹೌಸ್ ಗಳೆಲ್ಲಾ ಹೇಗೆ ಇವೆ ಎಂದು ಪ್ರಶ್ನಿಸಿದರು. ಹಾಗಾದರೆ ತಾವು ವೈಯಕ್ತಿಕವಾಗಿ ದಿವಾಳಿಯಾಗಿದ್ದಾರೆ ಎಂದು ಅನಿಲ್ ಅಂಬಾನಿಯವರ ಮಾತಿನ ಅರ್ಥವೇ, ಅವರು ದಿವಾಳಿತನದ ಅರ್ಜಿಯನ್ನು ಭಾರತದಲ್ಲಿ ಸಲ್ಲಿಸಿದ್ದಾರೆಯೇ ಎಂದು ಕೋರ್ಟ್ ನ ವಿಚಾರಣೆ ವೇಳೆ ನ್ಯಾಯಾಧೀಶ ಡೇವಿಡ್ ವಾಕ್ಸ್ ಮ್ಯಾನ್ ಕೇಳಿದರು. ಭಾರತದ ದಿವಾಳಿತನ ಮತ್ತು ದಿವಾಳಿತನ ಸಂಹಿತೆ(ಐಬಿಸಿ) ಇತ್ತೀಚೆಗಷ್ಟೆ ಜಾರಿಗೆ ಬಂದಿದೆ ಎಂದು ಅಂಬಾನಿ ಪರ ವಕೀಲ ಖ್ಯಾತ ನ್ಯಾಯಾಧೀಶ ಹರೀಶ್ ಸಾಳ್ವೆ ಕೋರ್ಟ್ ನಲ್ಲಿ ಹೇಳಿಕೆ ನೀಡಿದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا