Urdu   /   English   /   Nawayathi

ಬಡವರನ್ನು ಶಿಕ್ಷಣದಿಂದ ವಂಚಿಸಲು ಯತ್ನ

share with us

ಕೋಲಾರ: 05 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ‘ಶಿಕ್ಷಣ ವ್ಯವಸ್ಥೆಯಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಪದ್ದತಿಯನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಶಿಕ್ಷಣದ ಮೇಲಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ’ ಎಂದು ಎಸ್‌ಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಗುರುರಾಜ ದೇಸಾಯಿ ಆರೋಪಿಸಿದರು. ಎಸ್‌ಎಫ್‌ಐ ಜಿಲ್ಲಾ ಘಟಕದಿಂದ ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ 24ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗಿಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುತ್ತಿದೆ’ ಎಂದು ಅತಂಕ ವ್ಯಕ್ತಪಡಿಸಿದರು. ‘ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಭಾರತ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ, ಇದರ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು. ‘ಹಿಂದಿನ ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಸಬೇಕು ಎಂದು ಬಜೆಟ್‌ನಲ್ಲಿ ಮಂಡನೆ ಮಾಡಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರಿ ಅನುದಾನದ ಕೊರತೆ ನೆಪ ಹೇಳಿ ಕೇವಲ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿದೆ. ಇದನ್ನು ಇತರೆ ಪದವಿ ವಿದ್ಯಾರ್ಥಿಗಳಿಗೆ ವಿಸ್ತರಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಕಡಿಮೆ ವಿದ್ಯಾರ್ಥಿಗಳ ದಾಖಲಾತಿಯ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಲಾಗುತ್ತಿದೆ. ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ’ ಎಂದು ಟೀಕಿಸಿದರು. 

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಒಡ್ಡುವಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿರುವುದು ಮರೆತಿದೆ. ಆದರೆ, ಪ್ರಾಥಮಿಕ ಶಿಕ್ಷಣದ ಬಲವರ್ಧನೆಯ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಮೊದಲು ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು. ‘ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ ರೆಡ್ಡಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಶೈಕ್ಷಣಿಕ ಕ್ಷೇತ್ರವನ್ನು ಖಾಸಗಿಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜಾತ್ಯತೀತ ಮೌಲ್ಯಗಳ ವಿರುದ್ಧ ನೀತಿಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ, ಇದರ ವಿರುದ್ಧ ಹೋರಾಟ ರೂಪಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು. ಪದಾಧಿಕಾರಿಗಳ ಆಯ್ಕೆ: ಎಫ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ಪ, ಕಾರ್ಯದರ್ಶಿಯಾಗಿ ಬಿ.ರಾಜು, ಉಪಾಧ್ಯಕ್ಷರಾಗಿ ಸುರೇಶ್‌ಬಾಬು, ಶ್ರೀಕಾಂತ್, ಅಂಕಿತಾ, ಉದಯ್ ಕುಮಾರ್ , ಸಹಕಾರ್ಯದರ್ಶಿಗಳಾಗಿ ಆನಂದ್‌ಕುಮಾರ್, ಸಂಜಯ್, ಸಂದೀಪ್, ಶಂಕರ್, ಸಂಗೀತಾ, ವೇಗಶ್ರೀ ಆಯ್ಕೆಯಾದರು. ಜೆಎಂಎಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಿ ಕುಮಾರಿ, ಎಸ್‌ಎಫ್‌ಐ ಜಿಲ್ಲಾ ಘಟಕದ ಉಪಾಧ್ಯಕ್ಷೆ ಗಾಯಿತ್ರಿ ಹಾಜರಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا