Urdu   /   English   /   Nawayathi

ಶೂಟ್ ಮಾಡಿದ ವ್ಯಕ್ತಿಯನ್ನು ಆತನ ಬಟ್ಟೆಗಳಿಂದ ಗುರುತಿಸಿ: ಪ್ರಧಾನಿ ಮೋದಿಗೆ ಓವೈಸಿ ಟಾಂಗ್

share with us

ನವದೆಹಲಿ: 30 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ(ಜೆಎಂಐ) ವಿಶ್ವವಿದ್ಯಾಲಯದಿಂದ ರಾಜ್‍ಘಾಟ್‍ಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಆತ ಧರಿಸಿದ್ದ ಬಟ್ಟೆಗಳಿಂದ ಗುರುತಿಸಿ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ. "ಈ ದೇಶದಲ್ಲಿ ತುಂಬಾ ದ್ವೇಷವನ್ನು ಸೃಷ್ಟಿಸಿದ ಅನುರಾಗ್ ಠಾಕೂರ್ ಮತ್ತು ಎಲ್ಲಾ 9 PM ರಾಷ್ಟ್ರೀಯವಾದಿಗಳಿಗೆ ಧನ್ಯವಾದಗಳು. ಪೊಲೀಸರು ಎದುರಿನಲ್ಲೇ ಭಯೋತ್ಪಾದಕನೊಬ್ಬ ವಿದ್ಯಾರ್ಥಿಯ ಮೇಲೆ ಗುಂಡು ಹಾರಿಸುತ್ತಾನೆ. ಹಾಯ್ ಪಿಎಂಒಇಂಡಿಯಾ ಅವನ ಬಟ್ಟೆಗಳಿಂದ ಅವನನ್ನು ಗುರುತಿಸಿ" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ. ಇತ್ತಿಚೀಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ದೇಶ ವಿರೋಧಿಗಳನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಮ್ ಭಗತ್ ಗೋಪಾಲ್ ಎಂಬ ಯುವಕ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಜಾಮಿಯಾ ವಿವಿಯ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಕಳೆದ ತಿಂಗಳು ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿವೆ. ಹಿಂಸಾಚಾರದಲ್ಲಿ ತೊಡಗಿರುವವನ್ನು ಅವರ ಬಟ್ಟೆಗಳಿಂದಲೇ ಗುರುತಿಸಬಹುದು ಎಂದು ಹೇಳಿದ್ದರು. ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ರಾಮ್ ಭಗತ್ ಗೋಪಾಲ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಗಾಯಾಳು ವಿದ್ಯಾರ್ಥಿಯನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೊವೊಂದರಲ್ಲಿ, ಆರೋಪಿ ಬೀದಿಗಳಲ್ಲಿ ಬಂದೂಕು ಹಿಡಿದು ‘ಯೆ ಲೋ ಆಜಾದಿ’ ಎಂದು ಕೂಗುತ್ತಿರುವುದು ಕಂಡುಬಂದಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا