Urdu   /   English   /   Nawayathi

ವಿಷಯಾಂತರಗೊಳಿಸುವಲ್ಲಿ ಬಿಜೆಪಿ ನಂ.1: ಯು.ಟಿ.ಖಾದರ್

share with us

ಬೆಂಗಳೂರು: 24 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬಿಜೆಪಿ ಕೆಲಸದಲ್ಲಿ ನಂ.1 ಅಲ್ಲ, ವಿಷಯಾಂತರ ಮಾಡುವುದರಲ್ಲಿ ನಂ.1. ಆಗಿದೆ. ಜಾರ್ಖಂಡ್ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಜನರ ಭಾವನೆಗಳನ್ನು ಬೇರೆಡೆ ಸೆಳೆಯಲು ಮಂಗಳೂರು ಗಲಭೆ ಪ್ರಕರಣವನ್ನು ಕಾಂಗ್ರೆಸ್ ಮೇಲೆ ಹೊರಿಸಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿರೋಧಿಸಿ ದೇಶದ ಎಲ್ಲೆಡೆ ಧರಣಿ - ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ಹತ್ತಿಕ್ಕಲು ಬಿಜೆಪಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆಯಿಂದ ದೇಶದಲ್ಲಿ ಆರ್ಥಿಕ ಹಿನ್ನಡೆಯಾಗಿದ್ದು, ಪೆಟ್ರೋಲಿಯಂ ಸಂಸ್ಥೆಗಳನ್ನು ಖಾಸಗಿಕರರಣ ಮಾಡುವ ದಯನೀಯ ಸ್ಥಿತಿಗೆ ಎನ್.ಡಿ.ಎ ಸರ್ಕಾರ ಬಂದಿದೆ. ಉದ್ಯೋಗ ವಿಲ್ಲದೆ ಜನ ರೋಸಿಹೋಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಇದನ್ನು ಮರೆಮಾಚಲು ಕೇಂದ್ರದ ಬಿಜೆಪಿ ನಾಯಕರು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇವಲ ಕಾಂಗ್ರೆಸ್ ಮಾತ್ರ ಪ್ರತಿಭಟನೆ ಮಾಡುತ್ತಿಲ್ಲ. ತ್ರಿಪುರಾದಲ್ಲಿ ಬಿಜೆಪಿ ಮತ್ತು ಅಂಗಪಕ್ಷಗಳು ಸಹ ವಿರೋಧ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಆಡಳಿತವಿಲ್ಲದ ಆಂಧ್ರದಲ್ಲಿಯೂ ಸಹ ಬಿಜೆಪಿಯ ನೀತಿಗೆ ವಿರೋಧ ವ್ಯಕ್ತವಾಗಿದೆ‌‌. ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಬಿಹಾರದಲ್ಲಿ ನಿಮ್ಮದೇ ಮೈತ್ರಿ ಸರ್ಕಾರವಿದ್ದು, ಕಾಯ್ದೆ ಜಾರಿ ಮಾಡುವುದಿಲ್ಲ ಎಂದು ಜೆಡಿಯು ಬಹಿರಂಗವಾಗಿ ಹೇಳಿದೆ. ಪಿಡಿಪಿ ಜೊತೆ ಸೇರಿ ಕಾಶ್ಮೀರದಲ್ಲಿ ಅಧಿಕಾರ ನಡೆಸಿದಾಗ ಬಿಜೆಪಿ ನಾಯಕರಿಗೆ ನಾಚಿಕೆಯಾಗಲಿಲ್ಲ.

ನಮ್ಮ ಮೈತ್ರಿ ಪಕ್ಷಗಳ ಬಗ್ಗೆ ಈಗ ಕುಹಕವಾಡುತ್ತಿದೆ. ಬಿಜೆಪಿ ನಾಯಕರು ಕೇವಲ ಕಾಂಗ್ರೆಸ್‌ನ್ನು ಮಾತ್ರ ದೋಷಿಸುತ್ತಿರುವುದಾದರೂ ಏಕೆ ಎಂದು ಖಾದರ್ ಬಲವಾಗಿ ಪ್ರಶ್ನಿಸಿದರು. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿಯೇ ಪೌರತ್ವ ವಿಚಾರದಲ್ಲಿ ಘರ್ಷಣೆ ನಡೆದಿದ್ದು, ಬೇರೆ ಪಕ್ಷಗಳು ಅಧಿಕಾರದಲ್ಲಿರುವ ಕಡೆ ಏನೂ ಆಗಿಲ್ಲ ಅಂದಮೇಲೆ ಪ್ರತಿಭಟನೆಗೆ ಬಿಜೆಪಿ ಪ್ರಚೋದನೆ ಇರುವುದು ಸ್ಪಷ್ಟವಾಗುತ್ತದೆ. ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಸಂವಿಧಾನವನ್ನೇ ಬಿಜೆಪಿ ನಾಯಕರು ತಿರಸ್ಕರಿಸಲು ಹೊರಟಿದ್ದಾರೆ. ಸಂವಿಧಾನವನ್ನು ಗಾಳಿಗೆ ತೂರುತ್ತಿರುವ ಇವರು ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದರು. 144 ಸೆಕ್ಷನ್ ಜಾರಿಗೆ ಅದರದ್ದೇ ಆದ ನಿಯಮಗಳಿವೆ. ರಾಜ್ಯದ 20 ಜಿಲ್ಲೆಗಳಲ್ಲಿ ಯಾವುದೇ ಪ್ರತಿಭಟನೆ ನಡೆದಿರಲಿಲ್ಲ. ಆದರೂ ಅಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಏಕೆ?. ಗಲಭೆ ಸೃಷ್ಟಿಸಲೆಂದೇ ಉದ್ದೇಶಪೂರ್ವಕವಾಗಿ ಇದನ್ನೆಲ್ಲ ಬಿಜೆಪಿ‌ ಮಾಡಿದೆ. ಈ ಬಗ್ಗೆಯೂ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಬೇಕು ಎಂದು ಖಾದರ್ ಆಗ್ರಹಿಸಿದರು. ತಾವು ಮಂಗಳೂರಿನಲ್ಲಿ ಮಾತನಾಡಿದ್ದು ದೇಶ ಶಾಂತಿ, ಸೌಹಾರ್ಧಯುತವಾಗಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಸಮಸ್ಯೆಗಳ ಸುಳಿಗೆ ಸಿಲುಕಿದೆ‌. ಇದಕ್ಕೆಲ್ಲ ಕಾರಣ ಕಾರ್ತರು ಬಿಜೆಪಿಯವರೇ ಎಂದು ಟೀಕಿಸಿದ್ದೆ. ಒಬ್ಬ ಜನಪ್ರತಿನಿಧಿಯಾಗಿ ಜನರ ಮನಸಿನ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ಆದರೆ ತಮ್ಮ ಹೇಳಿಕೆಗಳಿಗೆ ಸ್ಪಷ್ಟ ಉತ್ತರ ನೀಡದೇ ಜನರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡದೇ ಸರ್ಕಾರ ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದಾನಾತ್ಮಕ ಹೇಳಿಕೆ ನೀಡಿತು. ಗಲಭೆ, ಗೋಲಿಬಾರ್ ಗೆ ಬಿಜೆಪಿಯೇ ನೇರ ಕಾರಣವಾಗಿದೆ. ಈ ಘಟನೆ ಬಗ್ಗೆ ಸಿಐಡಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಂಗ ತನಿಖೆ ನಡೆಸದೇ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ತನಿಖೆ ನಡೆಸಿದರೆ ಮಾತ್ರ ಸತ್ಯ ಸಂಗತಿ ಹೊರಬರಲು ಸಾಧ್ಯ ಎಂದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತಕ್ಕೆ ಕಪ್ಪು ಚುಕ್ಕೆ ಇಡಲೆಂದೇ ಅವರ ವಿರುದ್ಧ ಬಿಜೆಪಿಯಲ್ಲಿ ಒಳ ಸಂಚು ನಡೆಯುತ್ತಿದ್ದು, ಇದನ್ನು ಯಡಿಯೂರಪ್ಪ ಗಮನಿಸಬೇಕು. ಕಂಡಲ್ಲಿ ಗುಂಡಿಕ್ಕಿ ಎಂದು ಹೇಳಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದು ಅವರ ಮೇಲೆ ಏಕೆ ಎಫ್ ಐ ಆರ್ ಹಾಕಿಲ್ಲ. ಒಬ್ಬ ಕೇಂದ್ರ ಸಚಿವರೇ ಜನರನ್ನು ಸಾಯಿಸುವಂತೆ ಹೇಳಿಕೆ ಕೊಡುವುದು ಸರಿಯೇ? ಎಂದು ಪ್ರಶ್ನಿಸಿದ ಖಾದರ್,ಮೊದಲು ಸುರೇಶ್ ಅಂಗಡಿ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا