Urdu   /   English   /   Nawayathi

ಅಸಾಂವಿಧಾನಿಕ ಪೌರತ್ವ ಕಾಯ್ದೆ ವಿರುದ್ಧ ಹೋರಾಟ: ಡಿ.ಕೆ.ಶಿವಕುಮಾರ್

share with us

ಬೆಂಗಳೂರು: 18 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರ ಎಲ್ಲಾ ವರ್ಗ, ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೇ ಹೊರತು ಯಾವುದೇ ವರ್ಗ, ಧರ್ಮದವರನ್ನು ಗುರಿಯಾಗಿಸಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಹಿತಾಸಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಯಾವುದೇ ಪ್ರಜೆ ತಾನು ಪ್ರಾರ್ಥನೆ ಮಾಡುವ ದೇವರನ್ನು, ಅನುಸರಿಸುವ ಧರ್ಮವನ್ನು ಆಯ್ಕೆ ಮಾಡುವುದು ಆತನ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ಹೀಗಾಗಿ ಸರ್ಕಾರವಾಗಲೀ, ಯಾವುದೇ ಪಕ್ಷವಾಗಲೀ ದೇಶದ ಜನರನ್ನು ಇಂತಹುದೇ ಧರ್ಮ ಪಾಲಿಸುವಂತೆ ಬಲವಂತ ಹೇರುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ನಾಚಿಕೆಗೇಡಿನ ವಿಚಾರವೆಂದು ಟೀಕಿಸಿದ್ರು. ಅಸ್ಸೋಂ ಹಾಗೂ ದೇಶದ ಇತರೆ ಭಾಗಗಳಲ್ಲಿ ಅಂತರ್ಜಾಲ ಸೌಕರ್ಯವನ್ನು ಕಡಿತಗೊಳಿಸಿ ಪ್ರಧಾನಿಗಳು ಶಾಂತಿ ಕಾಪಾಡುವಂತೆ ಅಂತರ್ಜಾಲದಲ್ಲಿ ಸಂದೇಶ ರವಾನಿಸುತ್ತಾರೆ. ಈ ಸಂದೇಶ ಅವರಿಗೆ ಹೇಗೆ ತಲುಪುತ್ತದೆ? ನನ್ನ ಪ್ರಕಾರ, ದೇಶದ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಅಧಿಕಾರವಿದೆ. ಸಾಮಾನ್ಯ ಪ್ರಜೆ ತನ್ನ ಧ್ವನಿಯನ್ನು ಎತ್ತುವುದೇ ಇಂತಹ ಸಂದರ್ಭದಲ್ಲಿ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ ಎಂದು ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡರು. ಬಿಜೆಪಿ ಸರ್ಕಾರಕ್ಕೆ ಬಹುಮತ ಇದೆ ನಿಜ. ಆ ಸರ್ಕಾರ ಸಮಾಜದ ಎಲ್ಲಾ ವರ್ಗಗಳಿಗೂ ನೆರವಾಗಬೇಕೇ ಹೊರತು ಕೇವಲ ಒಂದು ವರ್ಗ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಬಾರದು. ಹೀಗಾಗಿ ಕೇಂದ್ರದ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ದೇಶದೆಲ್ಲೆಡೆ ನಾವೂ ಕೂಡ ನಮ್ಮ ಹೋರಾಟ ಮಾಡುತ್ತೇವೆ. ಜೊತೆಗೆ ಕರ್ನಾಟಕದಲ್ಲೂ ನಾವು ನಮ್ಮ ಹೋರಾಟ ಮಾಡುತ್ತೇವೆ ಎಂದರು. ಇಂದಿರಾ ಗಾಂಧಿ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ನಾವಿನ್ನೂ ಸತ್ತಿಲ್ಲ. ಅಶೋಕ್ ಕನಸು ಕಾಣುತ್ತಿದ್ದಾರೆ ಎಂದು ಹರಿಹಾಯ್ದರು. ಈ ವಿಚಾರ ಭಾವನಾತ್ಮಕವಾದುದ್ದು, ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ನಾವು ಅಧಿಕಾರದಲ್ಲಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಅನೇಕ ಕಾರ್ಯಕ್ರಮಗಳಿದ್ದವು. ನಾವು ಅದನ್ನು ಬದಲಾಯಿಸಲು ಮುಂದಾಗಲಿಲ್ಲ ಎಂದು ಹೇಳಿದರು. ಆರ್‌.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಅಟಲ್ ಸಾರಿಗೆ, ಪಂಚಾಯತ್​ ಸೇರಿದಂತೆ ಅನೇಕ ಹಂತಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಅನೇಕ ಕಾರ್ಯಕ್ರಮ ತಂದಿದ್ದರು. ಜೆ.ಪಿ. ನಾರಾಯಣ, ಮೊರಾರ್ಜಿ ದೇಸಾಯಿ ಸೇರಿದಂತೆ ಇತರೆ ನಾಯಕರ ಹೆಸರಲ್ಲಿನ ಯೋಜನೆಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಹೆಸರು ಬದಲಾವಣೆಗೆ ಮುಂದಾಗಿಲ್ಲ. ಬಿಜೆಪಿಯ ಈ ನಡೆಯನ್ನು ವಿರೋಧಿಸಿ ನಮ್ಮ ಸ್ನೇಹಿತರಿಗೆ ಈ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸುತ್ತಿದ್ದೇನೆ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا