Urdu   /   English   /   Nawayathi

ಶಿಬಾಜೆ ಗ್ರಾಪಂ ನೀರಿನ ಟ್ಯಾಂಕ್‌ಗೂ ವಿಷ

share with us

ಬೆಳ್ತಂಗಡಿ: 14 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಶಿಬಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಲ ಶಾಲಾ ಬಾವಿಗೆ ವಿಷಪ್ರಾಶನ ಪ್ರಕರಣದ ಆರೋಪಿಗಳ ಪತ್ತೆಯಾಗುವ ಮೊದಲೇ ಗ್ರಾಮ ಪಂಚಾಯಿತಿಯ ಪೆರ್ಲ ಸಮೀಪದ ಬಟ್ಟಾಜೆ ಕಪಿಲಾ ನದಿ ದಡದಲ್ಲಿರುವ ಶಿಬಾಜೆ ಗ್ರಾಪಂ ಕುಡಿಯುವ ನೀರಿನ ಟ್ಯಾಂಕ್‌ಗೂ ವಿಷಬೆರೆಸಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಈ ಟ್ಯಾಂಕ್‌ನಿಂದ ಪಂಪ್ ಮೂಲಕ ನೀರು ಲಿಫ್ಟ್ ಮಾಡಿ ಪೆರ್ಲದಲ್ಲಿರುವ ಇನ್ನೊಂದು ಟ್ಯಾಂಕ್‌ಗೆ ತುಂಬಿಸಲಾಗುತ್ತದೆ. ಈ ಟ್ಯಾಂಕ್‌ನಿಂದ ಪೆರ್ಲ ಹಿ.ಪ್ರಾ.ಶಾಲೆ ಸೇರಿದಂತೆ ಸುತ್ತಲಿನ 70 ಮನೆಗಳಿಗೆ ನೀರು ಪೂರೈಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ಟ್ಯಾಂಕ್‌ನಿಂದ ಪೂರೈಕೆಯಾದ ನೀರು ದುರ್ವಾಸನೆಯಿಂದ ಕೂಡಿರುವುದು ನೀರು ನಿರ್ವಾಹಕ ನಾರಾಯಣ ಪೂಜಾರಿ ಗಮನಕ್ಕೆ ಬಂದಿದ್ದು, ಪರಿಶೀಲಿಸಿದಾಗ ನೀರು ಕಮಟು ವಾಸನೆ ಬರುತ್ತಿದ್ದುದಲ್ಲದೇ ನೊಣಗಳು ಮುತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ಬಳಿಕ ಅವರು ನದಿದಡದ ಟ್ಯಾಂಕ್ ಪರಿಶೀಲಿಸಿದಾಗ ಅದರೊಳಗೆ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಟ್ಯಾಂಕ್‌ನ ನೀರು ಬಣ್ಣ ಕಳೆದುಕೊಂಡಿದ್ದು ನೊಣಗಳು ಹಾರುತ್ತಿರುವುದು ಕಂಡು ಬಂದಿದೆ. ಟ್ಯಾಂಕ್‌ಗೆ ನೀರು ಪೂರೈಸುವ ಪೈಪನ್ನು ನದಿಯಿಂದ ಮೇಲೆತ್ತಿರುವುದು ಹಾಗೂ ನದಿ ದಂಡೆಯಲ್ಲಿ ಹೆಜ್ಜೆ ಗುರುತುಗಳು ಕಾಣುತ್ತಿವೆ. ಪೆರ್ಲ ಶಾಲಾ ಘಟನೆ ಬೆನ್ನಲ್ಲೇ ಈ ಪ್ರಕರಣ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಶಿಬಾಜೆ ಗ್ರಾಪಂ ಅಧ್ಯಕ್ಷೆ ಸುಶೀಲ, ಸದಸ್ಯ ರಮೇಶ್ ಗೌಡ ಕುರುಂಜ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವೃತ್ತ ನಿರೀಕ್ಷಕ ಸಂದೇಶ್, ಧರ್ಮಸ್ಥಳ ಠಾಣಾ ಎಸ್‌ಐ ಓಡಿಯಪ್ಪ ಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶಾಲೆ ಬಾವಿಗೆ ವಿಷವಿಕ್ಕಿದವರ ಬಂಧನಕ್ಕೆ ಪ್ರತಿಭಟನೆ
ಪೆರ್ಲ ಶಾಲೆ ಬಾವಿಗೆ ವಿಷಪ್ರಾಶನ ಪ್ರಕರಣದ ಆರೋಪಿಗಳ ಶೀಘ್ರ ಪತ್ತೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಪಾಲಕರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು. ಕೊನೆಗೆ ತಹಸೀಲ್ದಾರ್ ಹಾಗೂ ವೃತ್ತ ನಿರೀಕ್ಷಕರ ಭರವಸೆಗೆ ಒಪ್ಪಿದ ಪಾಲಕರು ಮಕ್ಕಳನ್ನು ಶಾಲೆಗೆ ಒಪ್ಪಿದರು. ಬೆಳಗ್ಗೆ ಹತ್ತೂವರೆ ಗಂಟೆಗೆ ಪ್ರತಿಭಟನೆ ಆರಂಭಗೊಂಡಿದ್ದು, ಮಧ್ಯಾಹ್ನ 2.30ರ ವೇಳೆಗೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಉಪತಹಸೀಲ್ದಾರ್ ಪ್ರತೀಷ್ ಕುಮಾರ್ ಹಾಗೂ ವೃತ್ತ ನಿರೀಕ್ಷಕ ಸಂದೇಶ್ ಮನವಿ ಸ್ವೀಕರಿಸಿ ಶೀಘ್ರವೇ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನಿಡಿದ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ವಿದ್ಯಾರ್ಥಿಗಳು ಶಿಬಾಜೆ ಪೇಟೆಯಿಂದ ಮೆರವಣಿಗೆ ಆಗಮಿಸಿದ ಶಾಲಾ ಮುಭಾಂಗದಲ್ಲಿ ಜಮಾಯಿಸಿ ಆರೋಪಿಗಳ ಪತ್ತೆಗೆ ಆಗ್ರಹಿಸಿದರು. 12 ದಿನ ಕಳೆದರೂ ಆರೋಪಿಗಳ ಪತ್ತೆಯಾಗದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್, ಶಿಕ್ಷಣ, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು. ಶಿಬಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ಎ.ಸಿ.ಮ್ಯಾಥ್ಯೂ ಮಾತನಾಡಿ, ಶಾಲೆಯ ಕುಡಿಯುವ ನೀರಿನ ಬಾವಿಗೆ ವಿಷಪ್ರಾಶನ ಮಾಡುವ ಮೂಲಕ ಮಕ್ಕಳ ಸಾಮೂಹಿಕ ಹತ್ಯೆಗೆ ದುಷ್ಕರ್ಮಿಗಳು ಮುಂದಾಗಿದ್ದಾರೆ. ಸುಲ್ವಾಡಿ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷಬೆರೆಸಿರುವ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಾಮ್ಯತೆ ಇದೆ. ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡಿದಲ್ಲಿ ಎಸ್‌ಪಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ದ.ಕ.ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಕಲ್ಲುಗುಡ್ಡೆ ಗುರುವಪ್ಪ, ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀಧರ ರಾವ್, ಸ್ತ್ರೀ ಶಕ್ತಿ ಗೊಂಚಲು ಸಮಿತಿ ಅಧ್ಯಕ್ಷೆ ಶೋಭಾ ಅಭ್ಯಂಕರ್, ಅಸ್ವಸ್ಥಗೊಂಡ ಮಗುವಿನ ತಾಯಿ ರೇಣುಕಾವಿಶ್ವನಾಥ ಶಿಬಾಜೆ ಮಾತನಾಡಿ ಆರೋಪಿಗಳ ಶೀಘ್ರ ಪತ್ತೆಗೆ ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ಪೊಲೀಸರು ಸಮಗ್ರ ತನಿಖೆ ನಡೆಸಿ ಆರೋಪಿಗಳು ಯಾವುದೇ ಪಕ್ಷ, ಜಾತಿ, ಧರ್ಮಕ್ಕೆ ಸೇರಿದವರಾಗಿದ್ದರೂ ಶಿಕ್ಷಿಸುವ ಕೆಲಸ ಮಾಡಬೇಕೆಂದು ಹೇಳಿದರು. ಧರ್ಮಸ್ಥಳ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.

ಎಸ್‌ಡಿಎಂಸಿ ಆಧ್ಯಕ್ಷ ಗೈರು
ಡಿ.7ರಂದು ನಡೆದ ಎಸ್‌ಡಿಎಂಸಿ ಹಾಗೂ ಪಾಲಕರ ಸಭೆಯಲ್ಲಿ ಪ್ರತಿಭಟನೆ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರ ಒಂದು ಗುಂಪು ಶುಕ್ರವಾರದ ಪ್ರತಿಭಟನೆಗೆ ಗೈರಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡ, ಪ್ರಕರಣ ತನಿಖೆಯ ಹಂತದಲ್ಲಿದೆ. ಶಾಸಕರು ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ, ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಆದ್ದರಿಂದ ಇಂದಿನ ಪ್ರತಿಭಟನೆಗೆ ಹೋಗಿಲ್ಲ. ಆರೋಪಿಗಳ ಪತ್ತೆಗೆ ನಮ್ಮದೂ ಆಗ್ರಹವಿದೆ ಎಂದರು.

ಸಭೆ ನಂತರ ಶಾಲೆಗೆ ತೆರಳಿದ ಮಕ್ಕಳು
ಮಕ್ಕಳ ಪಾಲಕರ ಜತೆ ಕಂದಾಯ ಇಲಾಖೆ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಸಭೆ ನಡೆಸಿ ಶಾಲಾ ಮಕ್ಕಳಲ್ಲಿ ಧೈರ್ಯ ತುಂಬಿಸಿದ ನಂತರ ಶಾಲೆಗೆ ಮಕ್ಕಳನ್ನು ಕಳುಹಿಸುವುದಾಗಿ ಪಾಲಕರು ತಿಳಿಸಿದರು. ಬಾವಿಯ ನೀರನ್ನು ಪರೀಕ್ಷೆಗೆ ಕಳುಹಿಸಿದ್ದು ಇದರ ವರದಿಯನ್ನು ಕೂಡಲೇ ತರಿಸಬೇಕು ಮತ್ತು ಇದೇ ಬಾವಿಯ ನೀರನ್ನು ಮರು ಬಳಕೆ ಮಾಡಬಹುದೇ ಎನ್ನುವ ಕುರಿತಂತೆ ಸ್ಥಳೀಯರಿಗಿರುವ ಸಂಶಯವನ್ನ ದೂರಗೊಳಿಸುವುದು ಇಲಾಖಾ ಜವಾಬ್ದಾರಿಯಾಗಿದೆ ಎಂದು ಪ್ರತಿಭಟನಾ ಕಾರರು ತಿಳಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا