Urdu   /   English   /   Nawayathi

ಕಾರು ಮತ್ತು ಖಾಸಗಿ ಪ್ರವಾಸಿ ಬಸ್ ಡಿಕ್ಕಿ: ವಿದ್ಯಾರ್ಥಿಗಳ ಸಹಿತ 17 ಮಂದಿಗೆ ಗಾಯ

share with us

ಬೆಳ್ತಂಗಡಿ/ಉಪ್ಪಿನಂಗಡಿ: 08 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ತಿರುವಿನಲ್ಲಿ ಕಾರು ಮತ್ತು ಬೆಳಗಾವಿ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಪ್ರವಾಸದ ಬಸ್ ನಡುವೆ ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿದ್ದ 13 ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕರು, ಬಸ್ ಹಾಗೂ ಕಾರು ಚಾಲಕ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಶ್ರೀ ಗುರುಸಿದ್ದ ಮಹಾಸ್ವಾಮಿಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರವಾಸಕ್ಕೆ ಬಂದಿದ್ದ 3 ಖಾಸಗಿ ಬಸ್‌ಗಳ ಪೈಕಿ ಒಂದು ಬಸ್ ಧರ್ಮಸ್ಥಳದಿಂದ ಬೇಲೂರಿಗೆ ಹೋಗುವ ವೇಳೆ ಘಟನೆ ಸಂಭವಿಸಿದೆ. ಕೊಕ್ಕಡದ ಕಾಪಿನಬಾಗಿಲು ಬಳಿ ತಿರುವಿನಲ್ಲಿ ಎದುರು ಬದಿಯಿಂದ ರಾಂಗ್ ಸೈಡ್‌ನಲ್ಲಿ ಬಂದ ಕಾರೊಂದನ್ನು ತಪ್ಪಿಸುವ ಸಲುವಾಗಿ ಎಡಕ್ಕೆ ತಿರುಗಿಸಿ ಮುಂಭಾಗದಲ್ಲಿದ್ದ ಅಂಗಡಿಗೆ ನುಗ್ಗುವ ಬದಲು ಮತ್ತೆ ಬಲಬದಿಗೆ ತಿರುಗಿಸಿಕೊಂಡಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನ ಬಾನೆಟ್ ಮೇಲೆ ಬಸ್ ಬಿದ್ದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದೆ. ವಿದ್ಯಾರ್ಥಿಗಳಾದ ಐಶ್ವರ್ಯ(13), ಚೈತ್ರಾಶ್ರೀ(12), ಸಂಜನಾ ರಾಜು(12), ಸಾಕ್ಷಿ(12), ಅನುರಾಧಾ(13), ಕಾವ್ಯಾ(13), ವರ್ಷಾ ಗಸ್ತಿ(11), ಶ್ರೇಯಾ(12 ), ಪೂಜಾ ಸತ್ಯಪ್ಪ(13), ಸಂಜನಾ(13), ನಯನಾ(14), ಸುಶಾಂತ್(13), ಬಾಲು(13) ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಅವಲಕ್ಕಿ, ಶಿಕ್ಷಕ ಬಿ.ಹೀರೇಮಠ ಮತ್ತು ಬಸ್ ಚಾಲಕ ರಮೇಶ್ ಪಾಟೀಲ್ ಗಾಯಗೊಂಡವರು. ಗಾಯಾಳುಗಳ ಪೈಕಿ ಶಿಕ್ಷಕ ಬಿ.ಹೀರೇಮಠ ಕೈ ಮುರಿದಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಪೈಕಿ ಬಾಲು ಎಂಬಾತನ ಕೈ ಮುರಿದಿದ್ದು, ಚಾಲಕ ರಮೇಶ್ ಪಾಟೀಲ್ ಅವರ ತಲೆಗೆ ಸಣ್ಣ ಗಾಯಗಳಾಗಿದೆ. ಅಪಘಾತ ವೇಳೆ ತಮಿಳುನಾಡಿನ ಚಿತ್ತೂರು ಜಿಲ್ಲೆ ತಿರುಪತಿಯ ಕಾರು ಬಸ್‌ನಡಿಗೆ ಬಿದ್ದು ಚಾಲಕ ಪ್ರಸಾದ್(38) ಗಾಯಗೊಂಡಿದ್ದಾರೆ. ಗಾಯಗೊಂಡ 8 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಪನಿರೀಕ್ಷಕ ಈರಯ್ಯ, ಉಪ್ಪಿನಂಗಡಿ ಮತ್ತು ನೆಲ್ಯಾಡಿ ಹೊರಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿದ ಭಾರಿ ದುರಂತ: ಬಸ್ ಚಾಲಕನ ಪ್ರಸಂಗಾವಧಾನತೆಯಿಂದ ಬಸ್ ಪಲ್ಟಿಯಾದ ನಾಲ್ಕು ಅಡಿ ದೂರದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಕಾರಣ ಬಸ್‌ನಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು ದುರಂತದಿಂದ ಪಾರಾಗಿದ್ದಾರೆ. ಕಾರಿನ ಬಾನೆಟ್ ಮೇಲೆ ಬಸ್ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯರ ಸಹಕಾರ: ಅಪಘಾತ ನಡೆದ ಸ್ಥಳದಲ್ಲೇ ಇದ್ದ ಗ್ಯಾರೇಜ್‌ನ ಹರೀಶ್ ಆಚಾರ್ಯ, ಸುರೇಂದ್ರ, ಸಾಬು ಮೋನು, ಶ್ರೀಕಾಂತ ಆಚಾರ್ಯ, ಯತೀಂದ್ರ ಶೆಟ್ಟಿ ಮತ್ತು ಇತರರು ಸೇರಿ ಬಸ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ಕೂಡಲೇ ಹೊರಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದರು. ಅಪಘಾತ ಬಗ್ಗೆ ಶಿಕ್ಷಕಿ ಎಸ್.ಸಿ.ತಪೆಲಿ ಎಂಬುವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸೌತಡ್ಕ ದೇಳದಲ್ಲಿ ಆಶ್ರಯ: ಮೂರು ಬಸ್‌ಗಳಲ್ಲಿ ಪ್ರವಾಸಕ್ಕೆ ಬಂದಿದ್ದ ಮಕ್ಕಳು, ಒಂದು ಬಸ್ ಅಪಘಾತಕ್ಕೀಡಾಗಿ ಕೆಲವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಪ್ರವಾಸ ಮುಂದುವರೆಸಲಾಗದೆ ಅತಂತ್ರರಾಗಿದ್ದರು. ಈ ವೇಳೆ ಸ್ಥಳೀಯರು ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಆಶ್ರಯ ಕಲ್ಪಿಸಿದ್ದರು. ದೇವಾಲಯದಲ್ಲಿ ಉಪಹಾರ, ಭೋಜನ ವ್ಯವಸ್ಥೆ ಕಲ್ಪಿಸಲಾಯಿತು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا