Urdu   /   English   /   Nawayathi

ಫ್ಲೈಓವರ್ ಈ ವರ್ಷವೂ ಡೌಟ್

share with us

ಮಂಗಳೂರು: 21 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಪಂಪ್‌ವೆಲ್ ಫ್ಲೈ ಓವರ್‌ಗೆ ಪೂರ್ಣಗೊಳಿಸಲು ಇನ್ನೊಂದು ಗಡುವು ಸಿಕ್ಕಿದೆ. ವರ್ಷಾಂತ್ಯದೊಳಗೆ ಕೆಲಸ ಮುಗಿಸಿ, ಜನವರಿಯಲ್ಲಿ ಉದ್ಘಾಟನೆಗೆ ವ್ಯವಸ್ಥೆ ಮಾಡಬೇಕು ಎಂದು ಸಂಸದರು ಗುತ್ತಿಗೆ ವಹಿಸಿಕೊಂಡಿರುವ ನವಯುಗ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಬಾಕಿ ಇರುವ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲು ಸಾಧ್ಯವೇ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ. ಈಗಲೂ ಬೆರಳೆಣಿಕೆ ಕಾರ್ಮಿಕರು, ಒಂದೆರಡು ಜೆಸಿಬಿ ಹಾಗೂ ಟಿಪ್ಪರ್, ಕ್ರೇನ್‌ಗಳು ಫ್ಲೈಓವರ್‌ನ ಎರಡೂ ಬದಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಗಮನಿಸಿದರೆ ಇನ್ನೂ ಚುರುಕು ಪಡೆದಂತೆ ಕಾಣುವುದೇ ಇಲ್ಲ.

ಏನಾಗಿದೆ- ಏನಾಗುತ್ತಿದೆ?
ಹಿಂದೆ ಮಹಾವೀರ ವೃತ್ತವಿದ್ದ ಜಾಗದಲ್ಲಿ ಎಂಟು ಸಮಾನಾಂತರ ಪಿಲ್ಲರ್‌ಗಳನ್ನು ಸ್ಥಾಪಿಸಿ ಗರ್ಡರ್ ಅಳವಡಿಸಿ ಸ್ಲಾೃಬ್ ನಿರ್ಮಿಸಿ ವರ್ಷ ಕಳೆದಿದೆ. ಇದಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ಎಕ್ಕೂರು ಭಾಗದಲ್ಲಿ ರೀಟೇನಿಂಗ್ ವಾಲ್ ಜೋಡಣೆ ಮಾಡಲಾಗಿದ್ದು, ಭಾಗಶಃ ಪೂರ್ಣಗೊಂಡಿದ್ದು ಮಣ್ಣು ತುಂಬಿಸುವ ಕೆಲಸ ನಡೆಯುತ್ತಿದೆ.
ನಂತೂರು ಭಾಗದ ಇನ್ನೊಂದು ತುದಿಯಲ್ಲಿ ಬಾಕ್ಸ್ ಕಲ್ವರ್ಟ್ ರಚನೆ ಕೆಲಸ ನಡೆಯುತ್ತಿದ್ದು, ಒಂದು ಪೂರ್ಣಗೊಂಡಿದೆ ಇನ್ನೊಂದರ ಕೆಲಸ ಆರಂಭವಾಗಬೇಕಿದೆ. ಉಜ್ಜೋಡಿಯಲ್ಲಿ ಫ್ಲೈಓವರ್ ಒಂದು ತುದಿ ಕೊನೆಯಾಗಲಿದ್ದು, ಅಲ್ಲಿನ ಬ್ರಹ್ಮಮುಗೇರ ಮಹಾಕಾಳಿ ದೇವಸ್ಥಾನ ಬಳಿ ಅಂಡರ್‌ಪಾಸ್ ನಿರ್ಮಾಣವಾಗಿದೆ. ಅದರ ಪೂರಕ ಕೆಲಸಗಳು ನಡೆಯಬೇಕಿದೆ. ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಬಳಿ ಫ್ಲೈ ಓವರ್‌ನ ಇನ್ನೊಂದು ತುದಿ ಕೊನೆಯಾಗಲಿದ್ದು, ಅಲ್ಲಿ ರೀಟೇನಿಂಗ್ ವಾಲ್ ಅಳವಡಿಸುವ ಕೆಲಸ ನಡೆಯುತ್ತಿದೆ. ಒಟ್ಟಾರೆ ಫ್ಲೈ ಓವರ್‌ನ ಸದ್ಯದ ಚಿತ್ರಣ ಗಮನಿಸಿದರೆ ಪೂರ್ಣಗೊಳ್ಳಲು ಇನ್ನೂ 5-6 ತಿಂಗಳು ಬೇಕು.

ಡೆಡ್‌ಲೈನ್ ಗೊಡವೆಯೇ ಇಲ್ಲ!
ಒಟ್ಟು 600 ಮೀ. ಉದ್ದ ಹಾಗೂ 20 ಮೀ. ಅಗಲದ ಪಂಪ್‌ವೆಲ್ ಫ್ಲೈ ಓವರ್ ನಿರ್ಮಾಣ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ, ರಾಜಕೀಯ, ತಾಂತ್ರಿಕ, ಆರ್ಥಿಕ ಮೊದಲಾದ ಕಾರಣಗಳಿಂದ ಆರು ವರ್ಷ ಕಾಮಗಾರಿ ಪ್ರಗತಿಯನ್ನೇ ಕಂಡಿರಲಿಲ್ಲ. 2016ರಲ್ಲಿ ಕಾಮಗಾರಿ ಚುರುಕು ಪಡೆಯಿತಾದರೂ ಮತ್ತೆ ಕುಂಟುತ್ತ ಸಾಗಿತು. ಇದು ಜನರಿಂದ ತೀವ್ರ ಆಕ್ರೋಶ, ಟೀಕೆ, ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಮುಗಿಸಲು ಜಿಲ್ಲಾಡಳಿತ- ಸಂಸದರು ಹಲವು ಡೆಡ್‌ಲೈನ್ ನೀಡಿದರೂ ಕೆಲಸ ಮಾತ್ರ ಮುಗಿದಿಲ್ಲ.

ಮತ್ತೆ ಮಳೆ ಸಮಸ್ಯೆ
ಮಳೆ ಕಡಿಮೆಯಾಯಿತೆಂದು ಕೆಲಸ ಆರಂಭಿಸಲಾಗಿದೆ. ಆದರೆ ಮಧ್ಯಾಹ್ನ ಬಳಿಕ ಮಳೆಯಾಗುತ್ತಿದ್ದು, ದಿನವಿಡೀ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಷಾಂತ್ಯದಲ್ಲಿ ಕೆಲಸ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ. ಎಲ್ಲ ಕೆಲಸಗಾರರನ್ನು ಪಂಪ್‌ವೆಲ್‌ಗೆ ಕರೆಸಲಾಗಿದ್ದು, ಕಾಮಗಾರಿ ವೇಗ ಪಡೆಯುತ್ತಿದೆ ಎನ್ನುತ್ತಾರೆ ಸ್ಥಳದಲ್ಲಿರುವ ಸಂಸ್ಥೆಯ ಇಂಜಿನಿಯರ್‌ಗಳು.

ಪಂಪ್‌ವೆಲ್ ಫ್ಲೈ ಓವರ್ ಕೆಲಸ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಗುತ್ತಿಗೆ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ಆದರೆ ಮತ್ತೆ ಮಳೆ ಅಡ್ಡಿ ಉಂಟುಮಾಡುತ್ತಿದ್ದು, ದಿನವಿಡೀ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಎಗ ತೆಗೆದುಕೊಂಡವರು ಹೇಳುತ್ತಿದ್ದಾರೆ. ವರ್ಷಾಂತ್ಯದಲ್ಲಿ ಪೂರ್ಣಗೊಳಿಸುತ್ತಾರೋ ಕಾದು ನೋಡೋಣ.
ಶಿಶು ಮೋಹನ್, ಯೋಜನಾ ನಿರ್ದೇಶಕರು, ಎನ್‌ಎಚ್‌ಎಐ

ವಿ, ವಾ ವರದಿ     

Prayer Timings

Fajr فجر
Dhuhr الظهر
Asr أسر
Maghrib مغرب
Isha عشا