Urdu   /   English   /   Nawayathi

ಬಿಪಿಎಲ್ ಅನರ್ಹರ ಪತ್ತೆ ಕಸರತ್ತು

share with us

ಮಂಗಳೂರು: 14 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಒಂದು ಹಂತದಲ್ಲಿ ಎಲ್ಲ ಅರ್ಹರಿಗೂ ಬಿಪಿಎಲ್ ಪಡಿತರ ಚೀಟಿ ಒದಗಿಸುವುದಕ್ಕಾಗಿ ಅಭಿಯಾನವನ್ನೇ ಹಮ್ಮಿಕೊಂಡು ಬೇಕಾಬಿಟ್ಟಿ ಪಡಿತರ ಚೀಟಿ ನೀಡಿ ಬೇಸ್ತುಬಿದ್ದ ಇಲಾಖೆಯೀಗ ಅದನ್ನು ಸರಿಪಡಿಸಲು ನಾನಾ ಕಸರತ್ತು ನಡೆಸುತ್ತಿದೆ. ಬಿಪಿಎಲ್ ಕಾರ್ಡ್ ಆಧಾರವಾಗಿರಿಸಿ ಹಲವು ವಿಧದ ಯೋಜನೆಗಳು ಸರ್ಕಾರದಿಂದ ಅನುಷ್ಠಾನಕ್ಕೆ ಬರುತ್ತವೆ, ಅನರ್ಹರಿಂದಾಗಿ ವಿನಾಕಾರಣ ಸರ್ಕಾರಕ್ಕೆ ನಷ್ಟ ಆಗುತ್ತಿರುವುದರಿಂದ ಅದನ್ನು ತಡೆಯುವುದಕ್ಕೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 2.68 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 1.59 ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಕಳೆದ ವರ್ಷ ತತ್ಕಾಲ್ ಬಿಪಿಎಲ್ ಕಾರ್ಡ್ ಹೆಸರಿನಲ್ಲಿ ಕೇವಲ ಆದಾಯ ಪ್ರಮಾಣ ಪತ್ರವನ್ನಷ್ಟೇ ತೋರಿಸಿದರೂ ಇತರ ಯಾವುದೇ ಮಾಹಿತಿ ಪರಿಶೀಲಿಸದೆ ಬಿಪಿಎಲ್ ಕಾರ್ಡ್ ಕೊಡಲಾಗುವುದು, ವೆರಿಫಿಕೇಶನ್ ಆ ಬಳಿಕ ಎಂದು ಹೇಳಲಾಗಿತ್ತು. ಸಚಿವ ಯು.ಟಿ.ಖಾದರ್ ಈ ಕುರಿತು ವಿಶೇಷ ಆಸ್ಥೆಯನ್ನೂ ವಹಿಸಿ ಯಾವುದೇ ಅರ್ಹ ಬಿಪಿಎಲ್ ಗ್ರಾಹಕರಿಗೂ ಕಾರ್ಡ್ ಸಿಗದ ಹಾಗೆ ಆಗಬಾರದು ಎಂದು ಹೇಳಿಕೆ ನೀಡಿದ್ದರು. ಯಾರಿಗೆ ಬಿಪಿಎಲ್ ಕಾರ್ಡ್ ಬೇಕಾದರೂ ತಕ್ಷಣ ಸಿಗುವಂತಹ ಪದ್ಧತಿಯನ್ನು ಅವರೇ ಜಾರಿಗೆ ತಂದಿದ್ದರು. ಈ ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಆಗಿದ್ದರೂ ಅನೇಕ ಮಂದಿ ಅನರ್ಹರೂ ಬಿಪಿಎಲ್ ಕಾರ್ಡ್ ಪಡೆದಿರುವುದು ಸದ್ಯ ಇಲಾಖೆಗೆ ಸವಾಲು. ಅದಕ್ಕಾಗಿ ಸರ್ಕಾರ ಸೆ.30ರೊಳಗೆ ಯಾವುದೇ ಅನರ್ಹರು ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಿ, ಎಪಿಎಲ್‌ಗೆ ಬದಲಾಯಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಅದರಂತೆ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಒಟ್ಟು 294 ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಜನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಹಿಂತಿರುಗಿಸಿದ್ದಾರೆ. ಮಂಗಳೂರು ಗ್ರಾಮಾಂತರ 50, ಮಂಗಳೂರು ನಗರ 48, ಬಂಟ್ವಾಳ 54, ಬೆಳ್ತಂಗಡಿ 56, ಪುತ್ತೂರು 51, ಸುಳ್ಯ 35 ಅನರ್ಹ ಪಡಿತರ ಚೀಟಿಗಳನ್ನು ಹಿಂತಿರುಗಿಸಿದ್ದಾರೆ. ಇದರಲ್ಲಿ ಸ್ವ ಆಸಕ್ತಿಯಿಂದ ನೀಡಿದವರು ಹಾಗೂ ಕಚೇರಿಗೆ ಬಂದಿದ್ದಾಗ ಅವರಿಗೆ ತಿಳುವಳಿಕೆ ನೀಡಿ ಅವರಲ್ಲಿದ್ದ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 110 ಮಂದಿ (ಉಡುಪಿ 63, ಕಾರ್ಕಳ 35, ಕುಂದಾಪುರ 12) ತಮ್ಮ ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಿದ್ದಾರೆ.

ಮರಳಿಸಲು ಮತ್ತೆ ಅವಕಾಶ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಪಡೆದ ಅನರ್ಹರ ಸಂಖ್ಯೆ 30 ಸಾವಿರಕ್ಕೂ ಹೆಚ್ಚಿರಬಹುದು ಎನ್ನುವುದು ಅಧಿಕಾರಿಗಳ ಅಂದಾಜು. ಆದರೆ ಈಗ ಪತ್ತೆ ಮಾಡಿ, ಎಪಿಎಲ್‌ಗೆ ಬದಲಾದವರ ಸಂಖ್ಯೆ ಕೇವಲ 500ರ ಆಸುಪಾಸು ಅಷ್ಟೇ. ಹಾಗಾಗಿ ಮತ್ತೆ ಅನರ್ಹರಿಗೆ ಬಿಪಿಎಲ್ ಕಾರ್ಡ್ ಮರಳಿಸಲು ಅವಕಾಶ ಒದಗಿಸಲಾಗಿದೆ. ಇದಾದ ಬಳಿಕವೂ ಬಿಪಿಎಲ್ ಕಾರ್ಡಿನಲ್ಲೇ ಮುಂದುವರಿದರೆ, ಅಂತಹ ಕುಟುಂಬಗಳನ್ನು ಪತ್ತೆ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡುವುದು; ಮಾತ್ರವಲ್ಲದೆ ಮುಕ್ತ ಮಾರುಕಟ್ಟೆ ದರದಲ್ಲಿ ಪಡಿತರ ಸಾಮಗ್ರಿಯ ದರವನ್ನು ವಸೂಲಿ ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ಮನೆಯಲ್ಲಿ ಎರಡೆರಡು ಕಾರ್ಡ್!: ಕೆಲವು ಪಡಿತರ ಚೀಟಿದಾರರು ಒಂದೇ ಮನೆಯಲ್ಲಿ 2 ಪಡಿತರ ಚೀಟಿ ಹೊಂದಿದ್ದಾರೆ. ಯಾರು ದುಡಿಯುತ್ತಿದ್ದಾರೋ ಅವರು ಎಪಿಎಲ್ ಕಾರ್ಡ್ ಪಡೆದರೆ ಉಳಿದವರಿಗೆ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಅವರನ್ನು ಪ್ರಾವಿಡೆಂಟ್ ಫಂಡ್ ಹಾಗೂ ಇಎಸ್‌ಐ ಡೇಟಾದೊಂದಿಗೆ ತಾಳೆ ಮಾಡಿ ಒಂದೇ ಕುಟುಂಬ ಎಂದು ಕಂಡುಬಂದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ.

ಆರ್‌ಟಿಒದಿಂದ ಪಟ್ಟಿ: ಆರ್‌ಟಿಒ ಕಚೇರಿಯಿಂದ ಆಹಾರ ಇಲಾಖೆಯವರು ಕಾರು ಹೊಂದಿದ ಎಲ್ಲರ ಡಾಟಾವನ್ನು ಆಧಾರ್ ಸಂಖ್ಯೆಯೊಂದಿಗೆ ನೀಡುವಂತೆ ಆಹಾರ ಇಲಾಖೆ ಕೋರಿಕೆ ಸಲ್ಲಿಸಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಒಂದು ಹಂತದ ಮಾಹಿತಿ ಸಿಕ್ಕಿದೆ, ಇನ್ನೆರಡು ದಿನದಲ್ಲಿ ಮತ್ತಷ್ಟು ಮಾಹಿತಿ ಇಲಾಖೆಗೆ ಸಿಗಲಿದೆ. ಸದ್ಯ ಸಿಕ್ಕಿರುವ ಮಾಹಿತಿಯಲ್ಲಿ ಕಾರು ಹೊಂದಿದ ಬಿಪಿಎಲ್ ಕಾರ್ಡ್‌ದಾರರ ಸಂಖ್ಯೆ 74. ಅದೇ ರೀತಿ 16 ಮಂದಿ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ವಿಳಾಸದಲ್ಲಿ ವಾಸವಿಲ್ಲದ 12 ಮಂದಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದೆ. ಉಡುಪಿ ಜಿಲ್ಲೆಯಲ್ಲಿ ಕಾರು ಹೊಂದಿರುವ 163 ಮಂದಿಯ (ಉಡುಪಿ 59, ಕುಂದಾಪುರ 53, ಕಾರ್ಕಳ 51) ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ.

  • ಯಾರೆಲ್ಲ ಅನರ್ಹರು?:  ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರು.
    – ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು, ತಮ್ಮ ಪಡಿತರ ಚೀಟಿಯಿಂದ ಉದ್ದೇಶ ಪೂರ್ವಕ ಅಂತಹ ಕುಟುಂಬ ಸದಸ್ಯರ ಹೆಸರು ತೆಗೆಸಿರುವವರು.
    – ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿ, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್‌ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು.
    -ಸ್ವಂತ ಉಪಯೋಗಕ್ಕೆ ಕಾರ್/ಲಾರಿ/ಜೆಸಿಬಿ ಇತ್ಯಾದಿ ವಾಹನ ಹೊಂದಿದವರು.
    – ಅನುದಾನಿತ ಶಾಲೆ, ಕಾಲೇಜು ನೌಕರರು, ಮನೆ, ಮಳಿಗೆ, ಕಟ್ಟಡ ಬಾಡಿಗೆ ನೀಡಿ ಆದಾಯ ಪಡೆಯುತ್ತಿರುವವರು, ನಿವೃತ್ತಿ ವೇತನ ಪಡೆಯುತ್ತಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು.

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا