Urdu   /   English   /   Nawayathi

ಮಂಗಳೂರು.. ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಇಂದಿನಿಂದ ಆರಂಭ

share with us

ಮಂಗಳೂರು: 13 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಇಂದಿನಿಂದ ಆರಂಭಗೊಂಡಿದೆ. ಅಕ್ಟೋಬರ್ 15ರವರೆಗೆ ನಡೆಯುವ ಈ ಅಂಚೆ ಚೀಟಿ ಪ್ರದರ್ಶನದಲ್ಲಿ ವೈವಿಧ್ಯಮಯ ಅಂಚೆಚೀಟಿ, ಲಕೋಟೆಗಳ ಪ್ರದರ್ಶನ ಏರ್ಪಡಿಸಿದೆ. ನಗರದ ಟಿಎಂಎಪೈ ಕನ್ವೆನ್ಷನ್ ಸೆಂಟರ್ ಹಾಲ್‌ನಲ್ಲಿ ಏರ್ಪಡಿಸಿರುವ ಪ್ರದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯ ಹೋರಾಟಗಾರರು ಮುಂತಾದ ಇತಿಹಾಸ ಸಾರುವ ಅಂಚೆ ಚೀಟಿಗಳು, ಅಂಚೆ ಲಕೋಟೆಗಳು ರಾಮಾಯಣ, ಮಹಾಭಾರತದ ಪುರಾಣ ಕಥೆಗಳನ್ನು ಸಾರುವ ಅಂಚೆ ಲಕೋಟೆಗಳು, ಚಿಟ್ಟೆಯ ಜೀವನ ಕ್ರಮವನ್ನು ಸಾರುವ ಅಂಚೆ ಲಕೋಟೆಗಳು, ಭಾರತದ ದೇವಾಲಯಗಳು, ಸ್ಮಾರಕಗಳ ಬಗೆಗಿನ ಅಂಚೆ ಚೀಟಿಗಳು ಎಲ್ಲರ ಆಕರ್ಷಣೆಗೊಳಗಾಗಿದ್ದವು. ಅಲ್ಲದೆ ಇತಿಹಾಸ ಪುರುಷರು, ದಾಸರು, ಸಂತರು, ವಿಜ್ಞಾನಿಗಳು, ಸಿನಿಮಾನಟರಿಗೆ ಸಂಬಂಧಿಸಿದ ಅಂಚೆ ಚೀಟಿ, ಲಕೋಟೆಗಳು ಆಸಕ್ತರಿಗೆ ಅಂಚೆ ಚೀಟಿಯಲ್ಲಿನ ಅಗಾಧ ಮಾಹಿತಿಯನ್ನು ಉಣಬಡಿಸಿತು. ಒಂದಕ್ಕಿಂತಲೂ ಒಂದು ವಿಭಿನ್ನವಾಗಿರುವ ಅಗಾಧ ವಸ್ತು ವೈವಿಧ್ಯವುಳ್ಳ ಅಂಚೆ ಚೀಟಿಗಳು ಪ್ರದರ್ಶನದಲ್ಲಿದ್ದವು. ಈ ಸಂದರ್ಭ ದ.ಕ. ಜಿಲ್ಲಾ ರೀಜನ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಮಾತನಾಡಿ, ಕರ್ನಾಫೆಕ್ಸ್ ಪ್ರದರ್ಶನದಲ್ಲಿ 600 ಫ್ರೇಮ್ ಅಂಚೆ ಚೀಟಿಗಳು ಪ್ರದರ್ಶನಗೊಂಡಿವೆ. ವಿವಿಧ ವಿಭಾಗಗಳ ಅಂಚೆ ಚೀಟಿಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ. ಅಲ್ಲದೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳಿಸಿದವರ ಅಂಚೆ ಚೀಟಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅಲ್ಲದೆ, ಇಂದು ಜಾರ್ಜ್ ಫರ್ನಾಂಡೀಸ್, ಅನಂತ ಪೈ, ಗಿರೀಶ್ ಕಾರ್ನಾಡ್ ಇವರ ಮೂರು ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ ಮಾಡಲಾಗಿದೆ. ಅಲ್ಲದೆ 30 ಚಿತ್ರವಿರುವ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉಡುಪಿ ಹಾಗೂ ದ.ಕ.ಜಿಲ್ಲೆಯ 10 ದೇವಸ್ಥಾನಗಳು, 10 ಇಗರ್ಜಿಗಳು ಹಾಗೂ 10 ಜೈನ ಬಸದಿಗಳ ಚಿತ್ರಗಳಿವೆ ಎಂಬ ಮಾಹಿತಿ ನೀಡಿದರು. ಅಂಚೆ ಚೀಟಿ ಪ್ರದರ್ಶನ ಒಂದು ಕಲೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಸ್ಪರ್ಧೆ. ಇದರ ಬಗ್ಗೆ ಎಲ್ಲರಿಗೂ ತಿಳಿಯಬೇಕು. ಹಾಗೆಯೇ ಆಸಕ್ತರಿಗೆ ಅಂಚೆ ಚೀಟಿ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು ಅನ್ನುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ. ಅಂಚೆ ಇಲಾಖೆಯು ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗಿನ ಪ್ರದರ್ಶನವನ್ನು ಏರ್ಪಡಿಸುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ಈ ರೀತಿಯ ರಾಜ್ಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಏರ್ಪಡಿಸಲಾಗುತ್ತದೆ ಎಂದು ರಾಜೇಂದ್ರ ಕುಮಾರ್ ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا