Urdu   /   English   /   Nawayathi

ನರಹಂತಕ ಹುಲಿಗಾಗಿ ತೀವ್ರ ಹುಡುಕಾಟ: ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಬೇಟೆಗಾರ ಶಫತ್ ಅಲಿಗೆ ಸೂಚನೆ

share with us

ಬೆಂಗಳೂರು: 10 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) 2 ರೈತರನ್ನು ಬಲಿ ತೆಗೆದುಕೊಂಡಿದ್ದ ನರಹಂತಕ ಹುಲಿಗಾಗಿ ಗೋಪಾಲಸ್ವಾಮಿ ಬೆಟ್ಟದ ಬಳಿಯಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ತೀವ್ರವಾಗಿ ಹುಡುಕಾಟ ನಡೆಯುತ್ತಿದ್ದು, ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಖಾಸಗಿ ಬೇಟೆಗಾರರಾದ ಶಫತ್ ಅಲಿ ಹಾಗೂ ಅವರ ಪುತ್ರ ಅಸ್ಗರ್ ಅಲಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ಚೌಡಹಳ್ಳಿಯ ಇಬ್ಬರು ರೈತರನ್ನು ಹುಲಿಯೊಂದು ಬಲಿತೆಗೆದುಕೊಂಡಿತ್ತು. ನರಹಂತಕ ಹುಲಿಗಾಗಿ ಅರಣ್ಯ ಇಲಾಖೆ ಬುಧವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹೈಡ್ರಾಮಾ ಶುರುವಾಗಿದೆ. ಹುಲಿ ದಾಳಿಗೆ ಹೆದರುತ್ತಿರುವ ಸ್ಥಳೀಯರು ಹತ್ಯೆ ಮಾಡಲು ಸಾಕಷ್ಟು ಯೋಜನೆ ರೂಪಿಸುತ್ತಿದ್ದಾರೆ. ಈ ನಡುವೆ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲು ಇತ್ತ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಸಿಬ್ಬಂದಿಗೆ ಇದೀಗ ಜನರನ್ನು ತಡೆಹಿಡಿಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾನೂನನ್ನು ಕೈಗೆತ್ತಿಕೊಳ್ಳದಂತೆ ಜನರಿಗೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಈ ನಡುವೆ ಖಾಸಗಿ ಬೇಟೆಗಾರರಾದ ಶಫತ್ ಅಲಿ ಖಾನ್ ಹಾಗೂ ಅವರ ಪುತ್ರ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದು, ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಇಬ್ಬರಿಗೂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ನಡುವೆ ಹುಲಿ ಹಿಡಿಯುವ ಸಲುವಾಗಿ ಸ್ಥಳದ ಕುರಿತು ಅಧ್ಯಯನ ನಡೆಸಲು ನಾಲ್ಕು ತಂಡಗಳು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿವೆ. ಒಂದು ತಂಡ ಹುಲಿಯ ಓಡಾಟಗಳತ್ತ ಗಮನ ಹರಿಸುತ್ತಿದ್ದರೆ, ಮತ್ತೊಂದು ತಂಡ ಕ್ಯಾಮೆರಾಗಳಲ್ಲಿ ಹುಲಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ. ಹುಲಿಯನ್ನು ಯಾವುದೇ ಕಾರಣಕ್ಕೂ ಹತ್ಯೆ ಮಾಡುವುದಿಲ್ಲ. ಸೆರೆಹಿಡಿತ ಬಳಿಕ ಅದನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಹುಲಿ ಹತ್ಯೆ ಮಾಡುವಂತೆ ಯಾವುದೇ ಆದೇಶವನ್ನು ನೀಡಲಾಗಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸಂಜಯ್ ಮೋಹನ್ ಹೇಳಿದ್ದಾರೆ. 

ಶಫತ್ ಅಲಿ ಖಾನ್ ಹಾಗೂ ಅವರ ಪುತ್ರನನ್ನು ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಮಾಡಲು ಸೂಚನೆ ನೀಡಲಾಗಿದೆ. ಶಫತ್ ಅವರನ್ನು ನಾವು ಆಹ್ವಾನಿಸಿಲ್ಲ. ಹುಲಿ ಹಿಡಿಯಲು ನಮ್ಮಲ್ಲಿ ತಜ್ಞರಿದ್ದಾರೆ. ನಿಯಮಗಳು ಹಾಗೂ ಪ್ರಕ್ರಿಯೆಗಳನ್ನು ಅನುಸರಿಸಿಯೇ ಹುಲಿಯನ್ನು ಸೆರೆ ಹಿಡಿಯಲಾಗುತ್ತದೆ ಎಂದು ತಿಳಿಸಿದ್ದಾರೆ. ಹುಲಿ ದಾಳಿ ನಡೆಸಿದ ಬಳಿಕ ಶಫತ್ ಅವರು ಅರಣ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಇದಕ್ಕೆ ಕೆಲ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಸೇರಿದಂತೆ ಹಲವು ಅಧಿಕಾರಿಗಳು ಅರಣ್ಯ ಇಲಾಖೆಗೆ ಕರೆ ಮಾಡಿದ್ದು, ಶಫತ್ ಹಾಗೂ ಅವರ ಪುತ್ರನನ್ನು ಅರಣ್ಯ ಪ್ರದೇಶದಿಂದ ದೂರ ಉಳಿಯುವಂತೆ ಸೂಚಿಸಿ ಎಂದು ಆಗ್ರಹಿಸಿದ್ದರು. ಅಲ್ಲದೆ, ಅನುಮತಿ ಇಲ್ಲದೆಯೇ ಶಸ್ತ್ರಾಸ್ತ್ರಗಳನ್ನು ಹಿಡಿದು ಅರಣ್ಯಕ್ಕೆ ಪ್ರವೇಶ ಮಾಡಿದ ಹಿನ್ನಲೆಯಲ್ಲಿ 1972 ಅರಣ್ಯ ರಕ್ಷಣೆ ಕಾಯ್ದೆಯಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದರು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا