Urdu   /   English   /   Nawayathi

ಬಿಜೆಪಿ ಸರ್ಕಾರದ ಮೊದಲ ಅಧಿವೇಶನ: ಹೋರಾಟಕ್ಕೆ ಜೆಡಿಎಸ್​​​ ಸಿದ್ಧತೆ

share with us

ಬೆಂಗಳೂರು: 08 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯ ವಿಧಾನಮಂಡಲ ಉಭಯ ಸದನಗಳ ಕಲಾಪ ಅಕ್ಟೋಬರ್ 10ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲು ಜೆಡಿಎಸ್ ನಿರ್ಧರಿಸಿದೆ. ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾವಳಿ, ಅತಿವೃಷ್ಟಿ, ಬರ ಪರಿಸ್ಥಿತಿ ಹಾಗೂ ಕೇಂದ್ರದಿಂದ ಪರಿಹಾರ ತರಲು ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಜೆಡಿಎಸ್ ನಾಯಕರು ತೀರ್ಮಾನಿಸಿದ್ದು, ಹೋರಾಟದ ರೂಪುರೇಷಗಳ ಬಗ್ಗೆ ಚರ್ಚಿಸಲು ನಾಳೆ (ಬುಧವಾರ) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಸಭೆ ಕರೆಯುವ ಸಾಧ್ಯತೆ ಇದೆ. ಸರ್ಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಈಗಾಗಲೇ ಮಾಹಿತಿ ನೀಡಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಅ. 10ರಂದು ಮೌರ್ಯ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದಾರೆ. ಸದನದ ಒಳಗೆ ಪಕ್ಷದ ಶಾಸಕರು, ಹೊರಗೆ ಮಾಜಿ ಶಾಸಕರು, ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಗೌಡರು ತಿಳಿಸಿದ್ದಾರೆ. ಅಧಿವೇಶನದಲ್ಲಿ ನೆರೆ-ಬರ, ರೈತರ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಅನುಷ್ಠಾನ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೂರು ದಿನಗಳು (ಅ. 10 -12ರವರೆಗೆ) ಸಾಲುವುದಿಲ್ಲ. ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಅಧಿವೇಶನದಲ್ಲಿ ಬಜೆಟ್ ಅನುಮೋದನೆ ಪಡೆಯಬೇಕಾಗಿದೆ. ಬೆಳಗಾವಿಯಲ್ಲಿ ನಡೆಸಬೇಕಾಗಿದ್ದ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಲಾಗುತ್ತಿದೆ. ಕೇವಲ ಮೂರು ದಿನ ಅಧಿವೇಶನ ನಡೆಸಿ ಬಜೆಟ್​ಗೂ ಒಪ್ಪಿಗೆ ಪಡೆಯುವುದು ಸರಿಯಲ್ಲ. ಪ್ರಸಕ್ತ ಸಾಲಿನ ಆಯವ್ಯಯದ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆಯಾಗಿಲ್ಲ. ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಸಿ ಸರ್ಕಾರದಿಂದ ಉತ್ತರ ಪಡೆಯಬೇಕಿದೆ. ಹೀಗಾಗಿ ಕನಿಷ್ಠ ವಾರ ವಿಸ್ತರಿಸಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಒತ್ತಾಯಿಸಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಸಮರ್ಪಕ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಈಗಾಗಲೇ ಪ್ರತಿಪಕ್ಷಗಳು ಪ್ರತಿಭಟಿಸಿ ಸರ್ಕಾರದ ಗಮನ ಸೆಳೆದಿವೆ. ಇದೇ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಕೂಡ ಕನಿಷ್ಠ ಎರಡು ವಾರಗಳ ಕಾಲ ಅಧಿವೇಶನ ನಡೆಸುವಂತೆ ಸರ್ಕಾರವನ್ನು ಕೋರಿದ್ದರು. ವಿಧಾನ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸದನದ ಕಾರ್ಯ-ಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಸಭಾನಾಯಕರು, ಪ್ರತಿಪಕ್ಷಗಳ ನಾಯಕರು ಭಾಗವಹಿಸಲಿದ್ದು, ಆಗ ಅಧಿವೇಶನ ನಿಗದಿಯಂತೆ ನಡೆಸುವುದು, ಇಲ್ಲವೆ ಅವಧಿ ವಿಸ್ತರಿಸುವ ಕುರಿತು ಚರ್ಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا