Urdu   /   English   /   Nawayathi

404 ಬಿಪಿಎಲ್ ಕಾರ್ಡ್ ವಾಪಸ್

share with us

ಮಂಗಳೂರು/ಉಡುಪಿ: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಅನರ್ಹರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಇಲಾಖೆಗೆ ಹಿಂತಿರುಗಿಸಲು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆ.30ರ ಗಡುವು ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 294 ಹಾಗೂ ಉಡುಪಿ ಜಿಲ್ಲೆಯಲ್ಲಿ 110 ಮಂದಿ ತಮ್ಮ ಬಿಪಿಎಲ್ ಕಾರ್ಡ್ ವಾಪಸ್ ನೀಡಿದ್ದಾರೆ. ಮಂಗಳೂರು ಗ್ರಾಮಾಂತರ 50, ಮಂಗಳೂರು ನಗರ 48, ಬಂಟ್ವಾಳ 54, ಬೆಳ್ತಂಗಡಿ 56, ಪುತ್ತೂರು 51, ಸುಳ್ಯ 35 ಮಂದಿ ಅನರ್ಹ ಪಡಿತರ ಚೀಟಿಗಳನ್ನು ಹಿಂತಿರುಗಿಸಿದ್ದಾರೆ. ಇದರಲ್ಲಿ ಸ್ವ ಆಸಕ್ತಿಯಿಂದ ನೀಡಿದವರೂ ಇದ್ದಾರೆ, ಕಚೇರಿಗೆ ಬಂದವರಿಗೆ ತಿಳಿವಳಿಕೆ ನೀಡಿದ ನಂತರ ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂಪಡೆದಿರುವುದೂ ಇದೆ. ಸಾರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆ ಮೂಲಕ ಬಿಪಿಎಲ್ ಪಡಿತರ ಚೀಟಿದಾರರು ಪತ್ತೆಯಾಗುತ್ತಾರೆ. ಎಷ್ಟು ಮಂದಿ ಪತ್ತೆಯಾಗಿದ್ದಾರೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಪಡೆಯಬೇಕಾಗಿದೆ ಎಂದು ದ.ಕ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪ್ರಸ್ತುತ 23,436 ಅಂತ್ಯೋದಯ, 2,51,111 ಬಿಪಿಎಲ್ ಹಾಗೂ 1,51,729 ಅಂತ್ಯೋದಯ ಕಾರ್ಡ್‌ಗಳಿವೆ. 

ಉಡುಪಿ 11 ಕಾರ್ಡು: ಉಡುಪಿ ಜಿಲ್ಲೆಯಲ್ಲಿ 110 ಮಂದಿ ತಮ್ಮ ಬಿಪಿಎಲ್ ಕಾರ್ಡ್ ಸರೆಂಡರ್ ಮಾಡಿದ್ದಾರೆ. ಕಾರು ಹೊಂದಿರುವ 163 ಮಂದಿ ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಿಕೊಂಡಿದ್ದಾರೆ. ಉಡುಪಿ ತಾಲೂಕಿನಲ್ಲಿ 63, ಕುಂದಾಪುರದಲ್ಲಿ 12, ಕಾರ್ಕಳದಲ್ಲಿ 35 ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ತಾಲೂಕು ಕಚೇರಿಗೆ ವಾಪಸ್ ನೀಡಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ಕಾರಿನ ಮಾಲೀಕರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಂತವರನ್ನು ಪತ್ತೆ ಹಚ್ಚಿ ಎಪಿಎಲ್ ಕಾರ್ಡ್ ವಿತರಿಸಲಾಗಿದೆ. ಈ ರೀತಿಯಾಗಿ ಉಡುಪಿ ತಾಲೂಕಿನಲ್ಲಿ 59, ಕುಂದಾಪುರದಲ್ಲಿ 53 ಹಾಗೂ ಕಾರ್ಕಳದಲ್ಲಿ 51 ಮಂದಿ ಅನರ್ಹರನ್ನು ಪತ್ತೆ ಹಚ್ಚಲಾಗಿದೆ. ಜಿಲ್ಲೆಯಲ್ಲಿ 28,908 ಅಂತ್ಯೋದಯ, 1,59,792 ಬಿಪಿಎಲ್ ಕಾರ್ಡ್, 16,463 ಎಪಿಎಲ್ ಕಾರ್ಡ್‌ಗಳಿವೆ.

ಭಾರಿ ದಂಡ, ಕ್ರಿಮಿನಲ್ ಕೇಸ್ ಎಚ್ಚರಿಕೆ: ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ ಅಡಿಗಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕೆಲವು ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಶಿಕ್ಷಣ (ಅನುದಾನಿತ ಶಾಲಾ ಕಾಲೇಜು ನೌಕರರು), ಸಾರಿಗೆ, ವಿದ್ಯುತ್, ರೈಲ್ವೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ತೆಗೆದು ಕುಟುಂಬದ ಸದಸ್ಯರ ಹೆಸರಿನಲ್ಲಿ ಕಾರ್ಡು ಹೊಂದಿರುವಂತಿಲ್ಲ. ಸಹಕಾರಿ ಸಂಘಗಳ ನೌಕರರು, ನಿಗಮ ಮತ್ತು ಮಂಡಳಿ ನೌಕರರು, ಬ್ಯಾಂಕ್, ಆಸ್ಪತ್ರೆ ನೌಕರರು, ಆಡಿಟರ್ಸ್‌ ದೊಡ್ಡ ಮತ್ತು ಹೋಟೇಲ್ ಮಾಲೀಕರು, ವರ್ತಕರು, ಸ್ವಂತ ಕಾರು, ಲಾರಿ, ಜೆಸಿಬಿ ಮೊದಲಾದ ವಾಹನ ಹೊಂದಿರುವವರು, ಗುತ್ತಿಗೆದಾರರು, ಕಮಿಷನ್ ಏಜೆಂಟರು, ಮನೆ, ಮಳಿಗೆ, ಕಟ್ಟಡ ಬಾಡಿಗೆ ನೀಡಿರುವವರು, ಬಹುರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಇಲ್ಲ. ಬಿಪಿಎಲ್ ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಆದಾಯ ಮಿತಿ ನಿಗದಿ ಇದೆ. ಇದನ್ನು ಮೀರಿದ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ ಪತ್ತೆ ಹಚ್ಚಿ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ. ಅನರ್ಹರು ಕಾರ್ಡುಗಳನ್ನು ಒಪ್ಪಿಸದಿದ್ದರೆ ದಂಡ, ಕ್ರಿಮಿನಲ್ ಮೊಕದ್ದಮೆ ಎಚ್ಚರಿಕೆಯನ್ನೂ ನೀಡಲಾಗಿದೆ. ಪ್ರಸಕ್ತ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಮಾಡಲಾಗುತ್ತಿದ್ದು, ಆಧಾರ್ ಲಿಂಕ್ ಸಂದರ್ಭ ಅನರ್ಹರು ಪತ್ತೆಯಾದರೆ ಬಿಪಿಎಲ್ ಕಾರ್ಡು ರದ್ದುಗೊಳ್ಳಲಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا