Urdu   /   English   /   Nawayathi

ಪುತ್ತೂರು ಸರ್ವೇಯರ್ ಎಸಿಬಿ ಬಲೆಗೆ

share with us

ಉಪ್ಪಿನಂಗಡಿ: 05 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಭೂಮಿ ಪೋಡಿ ವಿಭಜನೆ(ಪ್ಲಾಟಿಂಗ್) ಮಾಡಿಕೊಡಲು ಲಂಚಕ್ಕೆ ಬೇಡಿಕೆಯೊಡ್ಡಿ ಮೊದಲ ಕಂತು ಪಡೆಯುತ್ತಿದ್ದ ಪುತ್ತೂರು ತಾಲೂಕು ಕಚೇರಿ ಭೂಮಾಪನ ಇಲಾಖೆ ಭೂಮಾಪಕ ಎಂ.ಶಿವಕುಮಾರ್ ಎಂಬಾತನನ್ನು ಭ್ರಷ್ಟಾಚಾರ ನಿಗ್ರಹದಳ ಉಪ್ಪಿನಂಗಡಿಯಲ್ಲಿ ಶುಕ್ರವಾರ ಮಧ್ಯಾಹ್ನ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ. ಹಿರೇಬಂಡಾಡಿ ಗ್ರಾಮ ನಿವಾಸಿ, ಕೂಲಿ ಕಾರ್ಮಿಕ ಗೋಪಾಲ ಮೊಗೇರ ಎಂಬುವರು ತನ್ನ ತಾಯಿ ಹಾಗೂ ಅಣ್ಣನ ಜಂಟಿ ಖಾತೆಯಲ್ಲಿದ್ದ ಜಮೀನಿನ ಪೋಡಿ ವಿಭಜನೆಗೆ 2015 ಜ.21ರಂದು ಅರ್ಜಿ ಸಲ್ಲಿಸಿದ್ದರು. ಆದರೆ 4 ವರ್ಷವಾದರೂ ಭೂಮಾಪನ ಇಲಾಖೆ ಸ್ಪಂದಿಸಿರಲಿಲ್ಲ. ಈ ಬಗ್ಗೆ ಗೋಪಾಲ ಮೊಗೇರ ಅವರು ಭೂಮಾಪಕ ಎಂ.ಶಿವಕುಮಾರ್ ಬಳಿ ವಿಚಾರಿಸಿದಾಗ ಆತ, ಇದಕ್ಕೆ ಹಲವರಿಗೆ ಹಣ ಕೊಡಬೇಕಿದ್ದು, 30 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಗೋಪಾಲ ಮೊಗೇರ ಅವರು, ನನ್ನಲ್ಲಿ ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಾಗ, 20 ಸಾವಿರ ರೂ. ಆದರೂ ಕೊಡಲೇಬೇಕು. ಇಲ್ಲದಿದ್ದರೆ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎಂದಿದ್ದ. ಅಲ್ಲದೆ, ಒಂದೇ ಕಂತಿನಲ್ಲಿ 20 ಸಾವಿರ ರೂ. ಕೊಡಲು ಸಾಧ್ಯವಿಲ್ಲದಿದ್ದಲ್ಲಿ ಹಂತಹಂತವಾಗಿ ಕಂತಿನ ಪ್ರಕಾರ ನೀಡಲು ಸೂಚಿಸಿದ್ದ ಎಂದು ಗೋಪಾಲ ಮೊಗೇರ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಹಣ ಸ್ವೀಕರಿಸುವಾಗ ವಶಕ್ಕೆ: ಗೋಪಾಲ ಮೊಗೇರ ಅವರು ಮೊದಲ ಕಂತು 5 ಸಾವಿರ ರೂ.ನ್ನು ಶುಕ್ರವಾರ ನೀಡುವುದಾಗಿ ಶಿವಕುಮಾರ್‌ಗೆ ತಿಳಿಸಿದ್ದರು. ಅವರನ್ನು ಉಪ್ಪಿನಂಗಡಿ ಹೋಟೆಲೊಂದರ ಬಳಿ ಬರಹೇಳಿದ ಶಿವಕುಮಾರ್, ಅಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಆತನನ್ನು ಬಂಧಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು, ತೀವ್ರ ವಿಚಾರಣೆ ನಡೆಸಿದ್ದಾರೆ.
ಎಸಿಬಿ ಪ್ರಭಾರ ಎಸ್ಪಿ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಬಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶ್ಯಾಮಸುಂದರ್, ಯೋಗೀಶ್, ಸಿಬ್ಬಂದಿ ಹರಿಪ್ರಸಾದ್, ಉಮೇಶ, ಕೆ.ರಾಧಾಕೃಷ್ಣ, ಡಿ.ರಾಧಾಕೃಷ್ಣ, ಪ್ರಶಾಂತ, ವೈಶಾಲಿ, ರಾಕೇಶ, ರಾಜೇಶ ಹಾಗೂ ಗಣೇಶ ಭಾಗವಹಿಸಿದ್ದರು.

ಚಾಲಾಕಿತನ ಮೆರೆದ ಸರ್ವೇಯರ್:  ಆರೋಪಿ ಶಿವಕುಮಾರ್ ಹಣ ನೀಡಲು ಗೋಪಾಲ ಮೊಗೇರ ಅವರನ್ನು ಉಪ್ಪಿನಂಗಡಿಗೆ ಬರ ಹೇಳಿದ್ದನು. ಅಲ್ಲಿ ಬಸ್ ನಿಲ್ದಾಣದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಜತೆಯಾಗಿ ಚಾ ಕುಡಿದು, ಮಾತನಾಡುತ್ತಾ ಯಾರಾದರೂ ತಮ್ಮ ಮೇಲೆ ನಿಗಾ ಇಟ್ಟಿದ್ದಾರೆಯೇ ಎಂದು ಪರಿಶೀಲಿಸಿದ್ದಾನೆ. ಅಲ್ಲಿ ಹಣ ಪಡೆಯದೆ ಪೇಟೆ ಹೊರವಲಯದಲ್ಲಿರುವ ಹೋಟೆಲ್ ಬಳಿ ಗೋಪಾಲ ಮೊಗೇರ ಅವರನ್ನು ಬರ ಹೇಳಿ ಅಲ್ಲಿ ಹಣ ಪಡೆದುಕೊಂಡಿದ್ದಾನೆ. ಆದರೆ ಶಿವಕುಮಾರ್‌ನ ಎಲ್ಲ ಚಟುವಟಿಕೆ ಬಗ್ಗೆ ನಿಗಾ ವಹಿಸಿದ್ದ ಎಸಿಬಿ ಅಧಿಕಾರಿಗಳು ಆತ ಹಣ ಸ್ವೀಕರಿಸಿದ್ದು ಖಚಿತವಾಗುತ್ತಲೇ ರೆಡ್‌ಹ್ಯಾಂಡ್ ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا