Urdu   /   English   /   Nawayathi

4.30 ಲಕ್ಷ ರೂ. ಸಹಿತ ಸೇಫ್ ಲಾಕರ್ ಕಳವು

share with us

ವಿಟ್ಲ: 03 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಕಲ್ಲಡ್ಕ-ಕಾಞಂಗಾಡು ಹೆದ್ದಾರಿ ಬದಿ ಕಳ್ಳತನ ಪ್ರಕರಣ ಮುಂದುವರಿದ್ದು, ಬುಧವಾರ ಬೆಳಗ್ಗಿನ ಜಾವ ಕುದ್ದುಪದವಿನಲ್ಲಿ ಪೆಟ್ರೋಲ್ ಪಂಪ್ ಕಚೇರಿಗೆ ನುಗ್ಗಿದ ಕಳ್ಳರು 4.30 ಲಕ್ಷ ರೂ. ಸಹಿತ ಸೇಫ್ ಲಾಕರನ್ನೇ ಹೊತ್ತೊಯ್ದಿದ್ದಾರೆ. ಅಲ್ಲದೆ ಸೇಫ್ ಲಾಕರ್ ಕೊಂಡೊಯ್ಯಲು ಕಾಶಿಮಠದ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಗೂಡ್ಸ್ ರಿಕ್ಷಾವನ್ನೂ ಕಳವುಗೈದಿದ್ದಾರೆ. ದುಬೈಯ ಶಟಫ್ ಗ್ರೂಫ್ ಆಪ್ ಕಂಪನಿ ಫೈನಾನ್ಸ್ ಡೈರೆಕ್ಟರ್ ದೇವಸ್ಯ ರಾಜಶೇಖರ ಚೌಟ ಮಾಲೀಕತ್ವದ ಪ್ರಥಮ್ ಪೆಟ್ರೋಲ್ ಪಂಪ್‌ನ ಕಚೇರಿ ಶಟರ್ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಅಲ್ಲಿದ್ದ ಸೇಫ್ ಲಾಕರ್ ಒಡೆಯಲಾಗದೆ, ಅದನ್ನೇ ಹೊತ್ತೊಯ್ದಿದ್ದಾರೆ. ಲಾಕರ್‌ನಲ್ಲಿದ್ದ ಸುಮಾರು 4.30 ಲಕ್ಷ ರೂ. ಸಹಿ, ಸೀಲ್ ಮಾಡಿದ 10 ಬ್ಯಾಂಕ್ ಚೆಕ್, ಬೆಂಝ್ ಕಾರಿನ ಕೀ ಕಳವಾಗಿದೆ ಎಂದು ಬಗ್ಗೆ ಪಂಪ್ ವ್ಯವಸ್ಥಾಪಕ ಜಗದೀಶ ಶೆಟ್ಟಿ ಮುಳಿಗುತ್ತು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದು, ಸಿಸಿ ಕ್ಯಾಮರಾದಲ್ಲಿ ಇಬ್ಬರು ಕೃತ್ಯ ನಡೆಸಿದ ಬಗ್ಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಬೆರಳಚ್ಚು ವಿಭಾಗ ಡಿವೈಎಸ್‌ಪಿ ಎಸಿ ಗೌರೀಶ್, ವಿಟ್ಲ ಪೊಲೀಸ್ ಠಾಣೆ ಎಸ್‌ಐ ಯಲ್ಲಪ್ಪ, ಪ್ರೊಬೆಷನರಿ ಎಸ್‌ಐ ರಾಜೇಶ್ ಕೆವಿ, ಸಿಬ್ಬಂದಿ ರವೀಶ್ ಪಿ, ಬಾಲಕೃಷ್ಣ, ಲೋಕೇಶ್, ಅನುಕುಮಾರ್, ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಹಿತಿ ಇತ್ತೇ?: ಮಂಗಳವಾರ ಪ್ರಥಮ್ ಪೆಟ್ರೋಲ್ ಬಂಕ್‌ನಲ್ಲಿ ಸಂಗ್ರಹವಾದ ಹಣವನ್ನು ಬ್ಯಾಂಕ್‌ಗೆ ಹಾಕಲಾಗಿರಲಿಲ್ಲ ಮತ್ತು ವ್ಯಾಪಾರವೂ ಹೆಚ್ಚು ಇತ್ತು ಎನ್ನಲಾಗಿದೆ. ಈ ಎಲ್ಲ ಮಾಹಿತಿ ಪಡೆದುಕೊಂಡ ವ್ಯಕ್ತಿಯೇ ಈ ಕಳವು ಕೃತ್ಯ ಮಾಡಿರಬಹುದೆಂದು ಅಂದಾಜಿಸಲಾಗಿದೆ.

ಒಂದೇ ತಂಡದ ಕೃತ್ಯ?: ಕೆಲದಿನ ಹಿಂದೆ ಅಡ್ಯನಡ್ಕ ಪೇಟೆಯ ಐದು ಅಂಗಡಿಗಳ ಬಾಗಿಲು ಹಾಗೂ ಶಟರ್ ಬೀಗ ಮುರಿದು ಲಕ್ಷ ರೂ. ನಗದು ಮತ್ತು ಸಾವಿರಾರು ಮೌಲ್ಯದ ಸಿಗರೇಟ್‌ಗಳನ್ನು ಕಳವುಗೈಯಲಾಗಿತ್ತು. ಈ ಕೃತ್ಯಗಳು ಒಂದೇ ತಂಡ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಕೆಲದಿನದ ಹಿಂದೆ ಪುತ್ತೂರು ಸಮೀಪದ ಮುರ ಹಾಗೂ ಕಬಕದಲ್ಲೂ ಇದೇ ಶೈಲಿಯ ಪ್ರಕರಣ ನಡೆದಿದೆ ಎನ್ನಲಾಗಿದೆ. ಅಡ್ಯನಡ್ಕದಲ್ಲಿ ಕಳ್ಳತನ ಮಾಡಿದ ಸಮಯದಲ್ಲಿ ಐದು ಅಂಗಡಿಗಳ ಬೀಗದ ಪಲ್ಲೆಯನ್ನು ಹೊತ್ತೊಯ್ದಿದ್ದು, ಇಲ್ಲಿಯೂ ಮರುಕಳಿಸಿದೆ. ಜತೆಗೆ ಹೆಜ್ಜೆ ಗುರುತು ಮೂಡಿಸಿ ಹೋಗುವ ಕಾರ್ಯ ಇಲ್ಲಿಯೂ ನಡೆದಿದೆ. ಸಿಸಿ ಟಿವಿಯಲ್ಲಿ ಕಾಣಿಸುವ ಚಲನವಲನಗಳಲ್ಲಿ ಒಬ್ಬನೇ ಇದ್ದು, ಆತನ ಹಿಂದೆ ದೊಡ್ಡ ಜಾಲ ಇರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕ್ಯಾಮರಾ ಅಳವಡಿಸಿದರೂ ಕಳವು
ಅಡ್ಯನಡ್ಕದಲ್ಲಿ ಅಂಗಡಿ ಮಾಲೀಕರು ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂಬ ಕಾರಣಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿ, ತಕ್ಷಣ ಕ್ಯಾಮರಾ ಅಳವಡಿಸಲು ಸೂಚಿಸಿದ್ದಾರೆ. ಕುದ್ದುಪದವಿನಲ್ಲಿ ಸಂಪೂರ್ಣ ಸಿಸಿ ಕ್ಯಾಮರಾ ಹಾಕಿದ ಅಂಗಡಿಯಲ್ಲಿ ಕಳವು ನಡೆಯುತ್ತಿದ್ದಂತೆ ಪೊಲೀಸರು ವರಸೆ ಬದಲಿಸಿ, ಸೆಕ್ಯುರಿಟಿ ಗಾರ್ಡ್ ಏಕೆ ಇಟ್ಟಿಲ್ಲ ಎಂದು ಪ್ರಶ್ನಿಸಿ ಕೃತ್ಯಕ್ಕೆ ಪಂಪ್ ಮಾಲೀಕರನ್ನೇ ಹೊಣೆಯಾಗಿಸಲಾಗಿದೆ.

ಲಾಕರ್ ಕೊಂಡೊಯ್ಯಲು ಆಟೋ ಕಳವು!
ಕಾಶಿಮಠದ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಮುರಳಿ ವಿಟ್ಲ ಎಂಬುವರಿಗೆ ಸೇರಿದ ಗೂಡ್ಸ್ ರಿಕ್ಷಾವನ್ನು ಬೆಳಗ್ಗೆ 4 ಗಂಟೆ ಸುಮಾರಿಗೆ ಕಳವು ಮಾಡಲಾಗಿದೆ. ಸಿಸಿ ಟಿವಿಯಲ್ಲಿ ಈ ದೃಶ್ಯ ಪತ್ತೆಯಾಗಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ರಿಕ್ಷಾ ಕೊಂಡೊಯ್ದಿದ್ದಾರೆ. ಸುಮಾರು 3.30ರ ಸುಮಾರಿಗೆ ಪಂಪ್‌ನಿಂದ ಇಬ್ಬರು ಬೈಕ್ ಹತ್ತಿ ವಿಟ್ಲ ಕಡೆಗೆ ಹೋಗುವ ದೃಶ್ಯ ಹಾಗೂ ಕೆಲಸಮಯ ಬಳಿಕ ಗೂಡ್ಸ್ ರಿಕ್ಷಾದಲ್ಲಿ ಪೆಟ್ರೋಲ್ ಪಂಪ್‌ಗೆ ಬಂದು ಲಾಕರ್ ತುಂಬಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಅರ್ಧ ಕಿ.ಮೀ ಓಡಿದ ಶ್ವಾನದಳ
ಪೆಟ್ರೋಲ್ ಪಂಪ್ ಶಟರ್ ಹಾಗೂ ಆಸುಪಾಸಿನಲ್ಲಿ ಪರಿಶೀಲನೆ ನಡೆಸಿದ ಶ್ವಾನದಳ ಮುಖ್ಯ ರಸ್ತೆ ಮೂಲಕ ಕುದ್ದುಪದವು ಪೇಟೆಯಲ್ಲಿರುವ ಬಳಕೆಯಲ್ಲಿರದ ಬಸ್ ನಿಲ್ದಾಣದವರೆಗೂ ಓಡಿದೆ. ಈ ನಡುವೆ ಎರಡು ಅಂಗಡಿ ಕಟ್ಟಡಗಳಿದ್ದು, ಅದರ ಬಳಿಯೂ ಸುತ್ತು ಹಾಕಿ ತೆರಳಿದೆ.

ಮೂರು ತಂಡಗಳಾಗಿ ತನಿಖೆ
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಮೂರು ತಂಡಗಳಾಗಿ ಬೇರೆ ಬೇರೆ ಕಡೆಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا