Urdu   /   English   /   Nawayathi

ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ಸುಲಿಗೆ ಆರೋಪದಡಿ ಸಂತ್ರಸ್ಥೆ ಬಂಧನ, 14 ದಿನ ನ್ಯಾಯಾಂಗ ವಶಕ್ಕೆ

share with us

ಲಖನೌ: 25 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬಿಜೆಪಿ ಮುಖಂಡ ಚಿನ್ಮಯಾನಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಸಂತ್ರಸ್ಥೆ ಕಾನೂನು ವಿದ್ಯಾರ್ಥಿನಿಯನ್ನು ಎಸ್ಐಟಿ ಅಧಿಕಾರಿಗಳು ಸುಲಿಗೆ ಆರೋಪದಡಿಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯನ್ನು ವಿಚಾರಣೆಗೆ ಒಳಪಡಿಸಿದ್ದ ವಿಶೇಷ ತನಿಖಾ ದಳ ಅಧಿಕಾರಿಗಳು ಇಂದು ಸುಲಿಗೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಚಿನ್ಮಯಾನಂದ್ ನಿಂದ ಪ್ರಕರಣ ಹಿಂಪಡೆಯಲು ವಿದ್ಯಾರ್ಥಿ ಹಣ ಕೇಳಿದ್ದಳು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನ ಪರ ವಕೀಲರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಮುಖ ಅಂಶವೆಂದರೆ ನಾಳೆ ವಿದ್ಯಾರ್ಥಿನಿಯ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಅದಕ್ಕೂ ಮೊದಲೇ ಅಧಿಕಾರಿಗಳು ಬಂಧಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಿನ್ನೆ ಕೂಡ 23 ವರ್ಷದ ಸಂತ್ರಸ್ಥ ಯುವತಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಎಸ್ಐಟಿ ಅಧಿಕಾರಗಳ ವಿಚಾರಣೆ ಎದುರಿಸಿದ್ದರು. 

14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಸಂತ್ರಸ್ಥೆ
ಇನ್ನು ಎಸ್ಐಟಿ ಅಧಿಕಾರಿಗಳ ಬಂಧನದಲ್ಲಿರುವ ಸಂತ್ರಸ್ಥ ವಿದ್ಯಾರ್ಥಿನಿಯನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದೆ. ಸಂತ್ರಸ್ಥ ವಿದ್ಯಾರ್ಥಿನಿ ಪ್ರಕರಣ ವಾಪಸ್ ಪಡೆಯಲು 5 ಕೋಟಿ ರೂ ಹಣ ಕೇಳಿದ್ದರು ಎಂದು ಆರೋಪಿಸಲಾಗಿದೆ. 

ಬಂಧನ ವೇಳೆ ಸಂತ್ರಸ್ಥೆ ಕುಟುಂಬಸ್ಥರ ಮೇಲೆ ಅಧಿಕಾರಿಗಳ ಹಲ್ಲೆ
ಇನ್ನು ಸಂತ್ರಸ್ಥೆಯನ್ನು ಆಕೆಯ ಚೌಕ್ ಕೊಟ್ವಾಲಿ ಮನೆಯಿಂದಲೇ ಬಂಧಿಸಿದ ಎಸ್ಐಟಿ ಅಧಿಕಾರಿಗಳು ಬಂಧನ ವೇಳೆ ಆಕೆ ಮತ್ತು ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧನ ವಿಚಾರವಾಗಿ ಸಂತ್ರಸ್ಛೆಯ ಮನೆಗೆ ಬಂದ ಅಧಿಕಾರಿಗಳು ಆಕೆಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಸಂತ್ರಸ್ಥ ಯುವತಿ ಸುಲಿಗೆ ಪ್ರಕರಣದ ಸಂಬಂಧ ತಮ್ಮ ಅರ್ಜಿ ಕೋರ್ಟ್ ನಲ್ಲಿದ್ದು, ನಾಳೆ ಅದರ ವಿಚಾರಣೆ ನಡೆಯಲಿದೆ. ಆಗ ನ್ಯಾಯಾಲಯವೇ ಬಂಧನದ ಕುರಿತು ನಿರ್ಣಯ ಕೈಗೊಳ್ಳಲಿದೆ. ಅಲ್ಲಿಯವರೆಗೂ ಕಾಯಿರಿ. ಬಂಧನ ಕುರಿತಂತೆ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಅದಾವ ನಿಯಮದಡಿಯಲ್ಲಿ ಬಂಧಿಸುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಅಧಿಕಾರಿಗಳು ಆಕೆಯನ್ನು ಬಲವಂತವಾಗಿ ಬಂಧಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ಥೆಯ ಪೋಷಕರು, ಬಂಧನದ ವೇಳೆ ಅಧಿಕಾರಿಗಳು ಕ್ರೂರವಾಗಿ ನಡೆದುಕೊಂಡರು. ಆಕೆಯನ್ನು ಅಮಾನವೀಯವಾಗಿ ಥಳಿಸಿ ತಡೆಯಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದರು. ಮನೆಯಲ್ಲಿದ್ದ ಆಕೆಯನ್ನು ಅಧಿಕಾರಿಗಳು ಹೊರಗೆ ಎಳೆದುಕೊಂಡು ಬಂದರು. ಕನಿಷ್ಠ ಪಕ್ಷ ಆಕೆ ತನ್ನ ಚಪ್ಪಲಿ ಹಾಕಿಕೊಳ್ಳಲು ಕೂಡ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಅಂತೆಯೇ ಇದೇ ವಿಚಾರವಾಗಿ ತಾವು ಎಸ್ಐಟಿ ಅಧಿಕಾರಿಗಳ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا