Urdu   /   English   /   Nawayathi

ಬಂಟ್ವಾಳದಲ್ಲಿ ಕ್ರೀಡಾ ಸಂಕೀರ್ಣ

share with us

ಬಂಟ್ವಾಳ: 17 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಹಾಗೂ ಕ್ರೀಡಾ ಚಟುವಟಿಕೆ ಉತ್ತೇಜಿಸುವ ದೃಷ್ಟಿಯಿಂದ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಕನಸೊಂದು ಗರಿಗೆದರುತ್ತಿದೆ. ತಾಲೂಕಿನಲ್ಲಿ ಕ್ರೀಡಾ ಸಂಕೀರ್ಣ ಸ್ಥಾಪಿಸುವ ಬಗ್ಗೆ ಶಾಸಕ ರಾಜೇಶ್ ನಾಕ್ ಆಸಕ್ತಿ ತೋರಿದ್ದು, ಕನಸು ನನಸು ಮಾಡುವ ಪ್ರಯತ್ನ ಮುಂದುವರಿಸಿದ್ದಾರೆ. ತಾಲೂಕಿನ ಕ್ರೀಡಾಪಟುಗಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ ಕ್ರೀಡಾ ಸಂಕೀರ್ಣ ನಿರ್ಮಾಣ ಅತಿ ಅಗತ್ಯವೂ ಆಗಿದೆ. ಸದ್ಯ ಕ್ರೀಡಾ ಸಂಕೀರ್ಣ ಸ್ಥಾಪಿಸಲು ಬೇಕಾಗುವ ಸೂಕ್ತವಾದ ವಿಶಾಲ ಜಮೀನಿನ ಹುಡುಕಾಟ ನಡೆಯುತ್ತಿದೆ.

ಯಾಕೆ ಕ್ರೀಡಾ ಸಂಕೀರ್ಣ?: ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದರಿಂದ ಕ್ರೀಡಾಕೂಟಗಳನ್ನು ಆಯೋಜಿಸಲು ಮತ್ತು ಕ್ರೀಡಾಪಟುಗಳಿಗೆ ಪೂರಕ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಮಂಗಳೂರು, ಬೆಳ್ತಂಗಡಿ, ಪುತ್ತೂರು, ಮೂಡುಬಿದಿರೆಯಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣವಿದ್ದರೆ ಬಂಟ್ವಾಳ ಹಾಗೂ ಸುಳ್ಯದಲ್ಲಿ ಇಲಾಖೆಯ ಕ್ರೀಡಾಂಗಣವಿಲ್ಲ. ಇಲ್ಲಿನ ಕ್ರೀಡಾಪಟುಗಳು ಹೆಚ್ಚಿನ ತರಬೇತಿಗಾಗಿ ಮಂಗಳೂರು ಅಥವಾ ಇತರ ಕಡೆಗಳಿಗೆ ಹೋಗಬೇಕಿದೆ. ಇಲ್ಲೊಂದು ಕ್ರೀಡಾ ಸಂಕೀರ್ಣ ನಿರ್ಮಿಸಿದಲ್ಲಿ ಎಲ್ಲ ವಿದಧ ಕ್ರೀಡೆಗಳಿಗೂ ಕ್ರೀಡಾಂಗಣ ಸಿಗಲಿದೆ. ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಪಡೆಯಲು ಸಾಧ್ಯವಾಗಲಿದೆ.

ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಏನೇನಿರಲಿವೆ?: ಇಲ್ಲಿ ಎಲ್ಲ ವಿಧದ ಕ್ರೀಡೆಗಳಿಗೆ ಬೇಕಾದ ವ್ಯವಸ್ಥೆಗಳು ಸಿಗಲಿವೆ. ಸಿಂಥೆಟಿಕ್ ಟ್ರಾೃಕ್, ಸ್ವಿಮ್ಮಿಂಗ್ ಪೂಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಟೆನಿಸ್, ಕಬಡ್ಡಿ, ಷಟ್ಲ್ ಬ್ಯಾಡ್ಮಿಂಟನ್, ಕೋರ್ಟ್‌ಗಳು, ಸ್ಕೇಟಿಂಗ್ ಟ್ರಾೃಕ್ ಹೀಗೆ ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ಬೇಕಾದ ಪೂರಕ ಸೌಲಭ್ಯಗಳು ಲಭ್ಯವಿರುತ್ತವೆ.

ಬೇಕಿದೆ ವಿಶಾಲ ಭೂ ಪ್ರದೇಶ: ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳಬೇಕಾದರೆ ವಿಶಾಲ ಜಾಗ ಬೇಕು. ತಾಲೂಕಿನಲ್ಲಿ ಅಷ್ಟು ಸ್ಥಳಾವಕಾಶ ಇರುವ ಸ್ಥಳದ ಹುಡುಕಾಟದಲ್ಲಿ ಶಾಸಕ ರಾಜೇಶ್ ನಾಕ್ ಗಮನ ಹರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತುಂಬೆ ತೋಟಗಾರಿಕಾ ಕ್ಷೇತ್ರದಲ್ಲಿ ಸುಮಾರು 28 ಎಕರೆ ಜಮೀನಿದ್ದು ಆ ಸ್ಥಳವನ್ನು ಕ್ರೀಡಾ ಸಂಕೀರ್ಣಕ್ಕೆ ಬಳಸಿಕೊಂಡು ತೋಟಗಾರಿಕಾ ಕ್ಷೇತ್ರವನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆಯೂ ಇದೆ. ಈ ಬಗ್ಗೆ ಕಳೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಇಲಾಖಾ ಅಧಿಕಾರಿಯಿಂದ ಮಾಹಿತಿ ಪಡೆದಿದ್ದರು. ಎಕರೆಗಟ್ಟಲೆ ಜಮೀನು ಬೇಕಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಜಮೀನಿನ ಹುಡುಕಾಟ ಮುಂದುವರೆದಿದೆ.

ಕ್ರೀಡಾಕೂಟ ಸ್ಥಳಾಂತರ: ಎರಡು ವರ್ಷಗಳ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾಮಟ್ಟದ ಕ್ರೀಡಾಕೂಟ ಬಂಟ್ವಾಳದ ಎಸ್‌ವಿಎಸ್ ದೇವಳ ಶಾಲಾ ಮೈದಾನದಲ್ಲಿ ನಡೆದಿತ್ತು. ಕ್ರೀಡಾಕೂಟದ ಮೊದಲ ದಿನ ಮಳೆ ಸುರಿದ ಪರಿಣಾಮ ಕೆಸರು ತುಂಬಿದ್ದ ಮೈದಾನದಲ್ಲಿ ಕ್ರೀಡಾಕೂಟ ಮುಂದುವರಿಸಲು ಸಮಸ್ಯೆಯೂ ಉಂಟಾಯಿತು. ಆದರೂ ಕಾರ್ಯಕ್ರಮ ಸಂಘಟಕರು ಕೆಸರು ಇದ್ದ ಜಾಗಕ್ಕೆ ಮರದ ಹುಡಿ ಹಾಕಿ ಮೈದಾನ ಸಜ್ಜುಗೊಳಿಸುವ ಪ್ರಯತ್ನ ನಡೆಸಿದ್ದರು. ಆದರೆ ಕೆಲ ಪೋಷಕರು ಹಾಗೂ ಕ್ರೀಡಾ ತರಬೇತುದಾರರು ಈ ಅವ್ಯವಸ್ಥೆ ಬಗ್ಗೆ ಸ್ಥಳದಲ್ಲೇ ಪ್ರತಿರೋಧ ತೋರಿದ ಹಿನ್ನ್ನೆಲೆಯಲ್ಲಿ ಇಡೀ ಕ್ರೀಡಾಕೂಟವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಬಂಟ್ವಾಳದಲ್ಲಿ ಸುಸಜ್ಜಿತ ಕ್ರೀಡಾಂಗಣವಿದ್ದಿದರೆ ಈ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದನ್ನು ಈಗಲೂ ಕಾರ್ಯಕ್ರಮ ಸಂಘಟಕರು ನೆನೆಪಿಸಿಕೊಳ್ಳುತ್ತಾರೆ.

ತಾಲೂಕಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಸಂಕೀರ್ಣ ಅಗತ್ಯವಿದೆ. ಇದಕ್ಕೆ ವಿಶಾಲ ಜಮೀನು ಬೇಕಾಗಿದ್ದು ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ.
ರಾಜೇಶ್ ನಾಕ್ ಉಳಿಪ್ಪಾಡಿ
ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ

ಪುತ್ತೂರು, ಸುಳ್ಯ, ಮೂಡುಬಿದಿರೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣ ಇದೆ. ಆದರೆ ಬಂಟ್ವಾಳದಲ್ಲಿ ಇಲಾಖೆಯ ಕ್ರೀಡಾಂಗಣ ಇಲ್ಲ. ಇಲ್ಲಿನ ಕ್ರೀಡಾಪಟುಗಳು ಅಥ್ಲೆಟಿಕ್ಸ್ ಅಥವಾ ಇತರ ಕ್ರೀಡೆಗಳಲ್ಲಿ ಹೆಚ್ಚಿನ ತರಬೇತಿ ಪಡೆಯಬೇಕಾದರೆ ಮಂಗಳೂರಿಗೆ ಹೋಗಬೇಕು.
ನವೀನ್ ಪಿ.ಎಸ್. ಯುವ ಸಬಲೀಕರಣ ಹಾಗೂ ಕ್ರೀಡಾಧಿಕಾರಿ, ಬಂಟ್ವಾಳ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا