Urdu   /   English   /   Nawayathi

ಕುಸಿಯುತ್ತಿದೆ ಗುಡ್ಡ, ಹೆಚ್ಚುತ್ತಿದೆ ಆತಂಕ

share with us

ಕಾರವಾರ: 12 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾಳಿ ಜಲವಿದ್ಯುತ್ ಯೋಜನೆಯ ಭಾಗವಾಗಿರುವ ಕೊಡಸಳ್ಳಿ ಅಣೆಕಟ್ಟೆಯ ಸಮೀಪ ಗುಡ್ಡ ಕುಸಿತ ಉಂಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಅಣೆಕಟ್ಟೆಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಕುಸಿತ ಮುಂದುವರಿದಲ್ಲಿ ಅಣೆಕಟ್ಟೆಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕೊಡಸಳ್ಳಿ ಅಣೆಕಟ್ಟೆಯ ಬಲ ಭಾಗದಲ್ಲಿ ಕಟ್ಟಿದ ಪಿಚ್ಚಿಂಗ್ ಒಡೆದಿದೆ. ಗುಡ್ಡದ ಮೇಲೆ ಬೆಳೆದ ಮರಗಳು, ಕಲ್ಲು ಬಂಡೆಗಳ ಸಮೇತ ಗುಡ್ಡ ಜಾರಿ ಬರುತ್ತಿದೆ. ಪಕ್ಕದಲ್ಲಿ ನಿರ್ಮಾಣ ಮಾಡಿದ ರಸ್ತೆ ಬಿರುಕು ಬಿಟ್ಟಿದೆ. ಅಣೆಕಟ್ಟೆ ನಿರ್ವಣಕ್ಕೆ ಆಧಾರವಾಗಿರುವ ಗುಡ್ಡ ಇದಾಗಿದೆ. ಅದೇ ಕುಸಿಯುತ್ತಿರುವುದರಿಂದ ಮುಂದೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಡಸಳ್ಳಿ ಅಣೆಕಟ್ಟೆಗೆ ತೊಂದರೆಯಾದಲ್ಲಿ ಕೆಳಗೆ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಕದ್ರಾ ಅಣೆಕಟ್ಟೆಯಿದೆ. ಅವೆಲ್ಲವಕ್ಕೂ ಆತಂಕವಿದೆ. ಅಲ್ಲದೆ, ಕಾರವಾರ ನಗರ ಹಾಗೂ ಕಾಳಿ ನದಿಯ ಇಕ್ಕೆಲದಲ್ಲಿರುವ ನೂರಾರು ಹಳ್ಳಿಗಳ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ವದಂತಿ ಹಬ್ಬಿತ್ತು
ಕೊಡಸಳ್ಳಿ ಅಣೆಕಟ್ಟೆ ಒಡೆದಿದೆ ಎಂಬ ವದಂತಿ ಹರಡಿ ಆತಂಕ ಸೃಷ್ಟಿಯಾಗಿತ್ತು. ಆ. 8ರಂದು ಪ್ರವಾಹದ ಸಂದರ್ಭದಲ್ಲಿ ಜನ ಕಂಗೆಟ್ಟು ಓಡಲಾರಂಭಿಸಿದ್ದರು. ಅಣೆಕಟ್ಟೆಗೆ ಯಾವುದೇ ಹಾನಿಯಾಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ ನಂತರ ಆತಂಕ ದೂರವಾಗಿತ್ತು.

ಮನವಿ
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ್ ಹಾಗೂ ಇತರರು ಈ ಸಂಬಂಧ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಿಲ್ಲಾಧಿಕಾರಿಗೆ ಬುಧವಾರ ದೂರು ನೀಡಿದ್ದಾರೆ. ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಬೇಕು. ಅಲ್ಲಿಯವರೆಗೆ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹಿಸಬಾರದು ಎಂದು ಮನವಿ ಮಾಡಿದ್ದಾರೆ.

ನಾವು ಕೊಡಸಳ್ಳಿಯ ಮೂಲ ನಿವಾಸಿಗಳು. 20 ವರ್ಷದ ಹಿಂದೆ ಅಣೆಕಟ್ಟೆ ನಿರ್ವಣದ ಅವಧಿಯಲ್ಲೇ ಗುಡ್ಡ ಕುಸಿತ ಉಂಟಾಗಿತ್ತು. ಅದೇ ಪ್ರದೇಶದಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಸದ್ಯಕ್ಕೆ ಅಣೆಕಟ್ಟೆಗೆ ಯಾವುದೇ ಹಾನಿಯಾಗದಿದ್ದರೂ ನಿರ್ಲಕ್ಷ್ಯ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ತಕ್ಷಣ ಸುರಕ್ಷತೆಯ ಕಾರ್ಯ ಕೈಗೊಳ್ಳಬೇಕು.
-ಶಿವರಾಮ ಗಾಂವಕರ್ , ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ

ಅಣೆಕಟ್ಟೆಯ ಪಕ್ಕ ಅಲ್ಪಸ್ವಲ್ಪ ಮಣ್ಣು , ಪಿಚ್ಚಿಂಗ್ ಕುಸಿದಿರುವುದು ನಿಜ. ಭೂಗರ್ಭ ಶಾಸ್ತ್ರಜ್ಞರು, ಇಂಜಿನಿಯರ್​ಗಳು ಸೆ.7 ರಂದು ಸ್ಥಳ ಪರಿಶೀಲಿಸಿದ್ದಾರೆ. ಆದರೆ, ಅದರಿಂದ ಅಣೆಕಟ್ಟೆಗೆ ಯಾವುದೇ ಹಾನಿಯಿಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು. ಕುಸಿದ ಪಿಚ್ಚಿಂಗ್ ರಿಪೇರಿ ಮಾಡುವ ಕಾರ್ಯ ಮಾಡಲಾಗುವುದು.
-ಟಿ.ಆರ್.ನಿಂಗಣ್ಣ, ಕೆಪಿಸಿ ಕಾಳಿ ಯೋಜನೆಯ ಮುಖ್ಯ ಇಂಜಿನಿಯರ್

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا