Urdu   /   English   /   Nawayathi

ಲಂಡನ್‌ನಲ್ಲಿ ಕಾಶ್ಮೀರ ಕಿಚ್ಚು

share with us

ಲಂಡನ್‌/ಶ್ರೀನಗರ: 05 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ಖಂಡಿಸಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿಯೂ ಪಾಕಿಸ್ಥಾನ ಕಿಡಿಗೇಡಿತನ ಪ್ರದರ್ಶಿಸಿದೆ. ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಎದುರು ಬ್ರಿಟನ್‌ನಲ್ಲಿರುವ ಪಾಕಿಸ್ಥಾನ ಮೂಲದವರು ಗಲಾಟೆ, ಪ್ರತಿಭಟನೆ ನಡೆಸಿದ್ದಾರೆ. “ಕಾಶ್ಮೀರ್‌ ಫ್ರೀಡಂ ಮಾರ್ಚ್‌’ ಎಂಬ ಹೆಸರಿನಲ್ಲಿ ಈ ಘಾತಕ ಕೃತ್ಯ ನಡೆಸಿದ್ದಾರೆ. ಜತೆಗೆ ಘರ್ಷಣೆಯೂ ನಡೆದಿದೆ. ಈ ಸಂದರ್ಭದಲ್ಲಿ ಹೈಕಮಿಷನ್‌ ಕಚೇರಿಯ ಗಾಜುಗಳು ಒಡೆದು ಹೋಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹೀಗಾಗಿ, ಹೈಕಮಿಷನ್‌ ಕಚೇರಿಗೆ ಸ್ಕಾಟ್ಲೆಂಡ್‌ಯಾರ್ಡ್‌ ಪೊಲೀಸರು ಹೆಚ್ಚಿನ ಬಂದೋಬಸ್ತ್ ನೀಡಲು ಮುಂದಾಗಿದ್ದಾರೆ. ಮಂಗಳವಾರ ಬ್ರಿಟನ್‌ ಸಂಸತ್‌ ಭವನದ ಮುಂಭಾಗದಿಂದ ಭಾರತ ವಿರೋಧಿ ಫ‌ಲಕಗಳನ್ನು ಹಿಡಿದ ನೂರಾರು ಮಂದಿ ಹೈಕಮಿಷನ್‌ ಕಚೇರಿಯತ್ತ ಸಾಗಿದರು. “ಕಾಶ್ಮೀರದಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ’, “ಆಝಾದಿ’ ಎಂಬ ಘೋಷಣೆಗಳನ್ನು ಅವರು ಹಾಕುತ್ತಿದ್ದರು. ಹೈಕಮಿಷನ್‌ ಕಚೇರಿ ಮುಂಭಾಗದಲ್ಲಿ ಇರುವ ಭದ್ರತಾ ಪಡೆಗಳ ಜತೆಗೆ ಅವರು ಗಲಾಟೆ ಎಬ್ಬಿಸಿದರು. ಈ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಕಿಟಕಿ ಗಾಜನ್ನು ಪುಡಿಗಟ್ಟಿದರು. ಈ ಅಂಶವನ್ನು ಹೈಕಮಿಷನ್‌ ಖಚಿತಪಡಿಸಿ ಟ್ವೀಟ್‌ ಮಾಡಿದೆ.

ಪ್ರಮುಖರ ಖಂಡನೆ: ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ ಈ ಘಟನೆಯನ್ನು ಖಂಡಿಸಿದ್ದಾರೆ. ಇಂದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಈ ವಿಚಾರ ಬ್ರಿಟನ್‌ ಸಂಸತ್‌ನಲ್ಲಿಯೂ ಪ್ರಸ್ತಾಪವಾಯಿತು. ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್‌ ರಾಬ್‌ ಖಂಡಿಸಿ ಮಾತನಾಡಿ “ಇಂಥ ಪ್ರತಿಭಟನೆ ಖಂಡನೀಯ ಮತ್ತು ಈ ದೇಶದಲ್ಲಿ ನಡೆಸಲು ತಕ್ಕುದಾಗಿಲ್ಲ. ಪಾಕಿಸ್ಥಾನ ಮತ್ತು ಭಾರತ, ಕಾಶ್ಮೀರದಲ್ಲಿ ಎರಡೂ ಸಮುದಾಯಗಳಲ್ಲಿ ವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕು’ ಎಂದು ಹೇಳಿದ್ದಾರೆ. ಲೇಬರ್‌ ಪಕ್ಷದ ಸಂಸದ ಲಿಯಾಮ್‌ ಬ್ರೈನ್‌ ಘಟನೆ ಖಂಡಿಸಿ ಆನ್‌ಲೈನ್‌ನಲ್ಲಿ ಆಂದೋಲನ ಶುರು ಮಾಡಿದ್ದಾರೆ.

ಆ.15ರಂದು: ಭಾರತದ ವಿರುದ್ಧ ಆ.15ರಂದೂ ಕೂಡ ಪ್ರತಿಭಟನೆ ನಡೆಸಲಾಗಿತ್ತು. ಆ ದಿನ ಭಾರತ ವಿರೋಧಿ ಗುಂಪು ಕಿಡಿಗೇಡಿತನದ ಕೃತ್ಯ ನಡೆಸಿತ್ತು. ಅದು ಬ್ರಿಟನ್‌ ಸಂಸತ್‌ನಲ್ಲಿಯೂ ಪ್ರಸ್ತಾಪವಾಗಿತ್ತು. ಮತ್ತೂಂದೆಡೆ ಸೌರಾ ಎಂಬಲ್ಲಿ ಆ.6ರಂದು ಗಾಯಗೊಂಡಿದ್ದ ಯುವಕ ಬುಧವಾರ ಅಸುನೀಗಿದ್ದಾನೆ. ಪೆಲೆಟ್‌ ಗನ್‌ ಬಳಕೆಯಿಂದ ಯುವಕ ಗಾಯಗೊಂಡಿರಲಿಲ್ಲ ಎಂದು ಸೇನೆ ಹೇಳಿದೆ. ಈ ಘಟನೆಯ ಬಳಿಕ ಶ್ರೀನಗರದ ಕೆಲ ಭಾಗಗಳಲ್ಲಿ ಮತ್ತೆ ನಿಷೇಧ ಹೇರಲಾಗಿದೆ. ಇದೇ ವೇಳೆ ಆ.4ರಿಂದ ಕಾಶ್ಮೀರ ಕಣಿವೆಯಲ್ಲಿ ವಿಧಿಸಲಾಗಿರುವ ನಿರ್ಬಂಧ ಬುಧವಾರವೂ ಮುಂದುವರಿದಿದೆ. ಸರ್ಕಾರಿ ಅಧಿಕಾರಿಗಳ ಪ್ರಕಾರ ಎಲ್ಲವೂ ನಿಯಂತ್ರಣದಲ್ಲಿದ್ದರೂ, ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಗಳು ತಿಳಿಸಿವೆ. ಜತೆಗೆ ಸ್ಥಾನಮಾನ ಹಿಂಪಡೆದ ಬಳಿಕ ಎಲ್‌ಒಸಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರರನ್ನು ಕಾಶ್ಮೀರಕ್ಕೆ ಕಳುಹಿಸಲು ಪಾಕಿಸ್ಥಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ.5ರ ನಂತರದ ಬೆಳವಣಿಗೆಯಲ್ಲಿ ಹೋರಾಟಗಾರರು ಸೇರಿದಂತೆ 140 ಮಂದಿಯನ್ನು ಬೇರೆಡೆ ಸ್ಥಳಾಂತರಿಸಿದೆ ಮತ್ತು 400ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.

ಲಷ್ಕರ್‌ ಉಗ್ರರ ಬಂಧನ
ಕಾಶ್ಮೀರದಲ್ಲಿ ಲಷ್ಕರ್‌-ಎ-ತೊಯ್ಯಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಅವರು ಎಲ್‌ಒಸಿ ಮೂಲಕ ಒಳ ನುಸುಳಲು ಪ್ರಯತ್ನಿಸುತ್ತಿದ್ದರು ಎಂದು ಸೇನೆಯ 15ನೇ ಕಾಪ್ಸ್‌ ìನ ಲೆ|ಜ|ಕೆ.ಜೆ.ಎಸ್‌.ಧಿಲ್ಲೋನ್‌ ಹೇಳಿದ್ದಾರೆ. ಇದರ ಜತೆಗೆ ಇದುವರೆಗೆ ಐವರು ನಾಗರಿಕರು ಅಸುನೀಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪುಟಿನ್‌ಗೆ ಪ್ರಧಾನಿ ವಿವರಣೆ
ವ್ಲಾಡಿವೋಸ್ಟಾಕ್‌: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂಪಡೆದಿರುವ ಕುರಿತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಪಾಕಿಸ್ಥಾನ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ಸಂದೇಶವನ್ನು ಸಾರುತ್ತಿದೆ. ಪುಟಿನ್‌ ಜೊತೆಗಿನ ಮಾತುಕತೆಯ ವೇಳೆ ಪ್ರಧಾನಿ ಮೋದಿಯೇ ಈ ವಿಚಾರವನ್ನು ಎತ್ತಿದರು. ಅಲ್ಲದೆ, ಇದರ ಹಿಂದಿನ ಕಾನೂನು ಹಾಗೂ ತಾಂತ್ರಿಕ ಕಾರಣಗಳನ್ನು ವಿವರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಹೇಳಿದ್ದಾರೆ. ಈ ವಿಷಯದಲ್ಲಿ ಭಾರತದ ಬೆಂಬಲಕ್ಕೆ ನಿಂತಿರುವುದಕ್ಕಾಗಿ ರಷ್ಯಾಗೆ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಕಾಶ್ಮೀರ ವಿಷಯದಲ್ಲಿ ಪ್ರತಿಕ್ರಿಯಿಸಿದ ರಷ್ಯಾ, ಇದು ದ್ವಿಪಕ್ಷೀಯ ವಿಚಾರ ಎಂದು ಸ್ಪಷ್ಟನೆ ನೀಡಿತ್ತು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا