Urdu   /   English   /   Nawayathi

ಪಾಕ್ ಪ್ರವಾಸದ ಬೆನ್ನಲ್ಲೇ ಚೀನಾ ಸಚಿವರ ದೆಹಲಿ ಭೇಟಿ: 'ಬರಲೇ ಬೇಡಿ' ಎಂದ ಭಾರತ

share with us

ನವದೆಹಲಿ: 04 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ತನ್ನ ಮಿತ್ರ ರಾಷ್ಟ್ರ ಪಾಕಿಸ್ತಾನದ ಪ್ರವಾಸದ ಬೆನ್ನಲ್ಲೇ ದೆಹಲಿಗೂ ಭೇಟಿ ನೀಡಲು ಉತ್ಸುಕರಾಗಿದ್ದ ಚೀನಾ ಸಚಿವರಿಗೆ ಭಾರತ ಬಿಸಿ ಮುಟ್ಟಿಸಿದ್ದು, ಪಾಕಿಸ್ತಾನದ ಪ್ರವಾಸದ ಬೆನ್ನಲ್ಲೇ ಭಾರತಕ್ಕೆ ಬರುವುದಾದರೆ ನೀವು ಬರಲೇ ಬೇಡಿ ಎಂದು ಖಡಕ್ ತಿರುಗೇಟು ನೀಡಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು, ಇದೇ ಸೆಪ್ಟೆಂಬರ್ 7ರಂದು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ಕೆಲ ಮಹತ್ವದ ಸಭೆಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದರ ಬೆನ್ನಲ್ಲೇ ವಾಂಗ್ ಯೀ ದೆಹಲಿಗೂ ಭೇಟಿ ನೀಡುವ ಕುರಿತು ಉತ್ಸುಕತೆ ತೋರಿದ್ದು, ಇದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ವಾಂಗ್ ಯಿ ಅವರ ಪ್ರವಾಸವನ್ನು ಮರುನಿಗದಿಪಡಿಸುವಂತೆ ಭಾರತ ಸೂಚಿಸಿದೆ. ಚೀನಾ ವಿದೇಶಾಂಗ ಸಚಿವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ ಜತೆ ಚರ್ಚಿಸಲು ಭಾರತಕ್ಕೆ ಭೇಟಿ ನೀಡಬೇಕಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಭಾರತ ಸರ್ಕಾರವೇ ದಿನಾಂಕ ಬದಲಾವಣೆಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಗಡಿ ವಿಚಾರಗಳ ಮಾತುಕತೆಗಾಗಿ ವಿಶೇಷ ಪ್ರತಿನಿಧಿಯಾಗಿ ವಾಂಗ್‌ ಆಗಮಿಸಬೇಕಿತ್ತು. ಆಗಸ್ಟ್ ಮಧ್ಯಭಾಗದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್‌ 370ನೇ ವಿಧಿ ರದ್ದತಿ ಕುರಿತು ವಿವರಿಸಲು ಬೀಜಿಂಗ್‌ಗೆ ತೆರಳಿದ್ದ ಸಂದರ್ಭ ವಾಂಗ್ ಭೇಟಿ ನಿಗದಿಯಾಗಿತ್ತು.  ಸದ್ಯ ಚೀನಾದ ವಿದೇಶಾಂಗ ಸಚಿವ ವಾಂಗ್‌ ಉತ್ತರ ಕೊರಿಯಾಗೆ ಭೇಟಿ ನೀಡಿದ್ದು, ಶನಿವಾರ ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ. ಶಾಂತಿ ಪ್ರಕ್ರಿಯೆಗಳ ಬಗ್ಗೆ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ತ್ರಿಪಕ್ಷೀಯ ಮಾತುಕತೆ ನಡೆಸಲಿವೆ. ಆ ಬಳಿಕ ಸೋಮವಾರ ಭಾರತಕ್ಕೆ ಆಗಮಿಸುವಂತೆ ಪ್ರವಾಸ ನಿಗದಿಯಾಗಿತ್ತು. ಆದರೆ ಭಾರತದ ಆಂತರಿಕ ವಿಚಾರವಾಗಿರುವ ಕಾಶ್ಮೀರ ವಿಚಾರದಲ್ಲಿ ಅನವಶ್ಯಕವಾಗಿ ತಲೆದೂರಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲವಾಗಿರುವ ಭಾರತ, ಪಾಕಿಸ್ತಾನದ ಪ್ರವಾಸದ ಜೊತೆ ಜೊತೆಯಲ್ಲೇ ಭಾರತ ಪ್ರವಾಸಕ್ಕೆ ಬರುವುದಾರೆ ನಿಮ್ಮ ಪ್ರವಾಸವನ್ನು ರದ್ದುಗೊಳಿಸಿ. ಭಾರತಕ್ಕೆ ಬರಲೇ ಬೇಡಿ ಎಂದು ಭಾರತ ಹೇಳಿದೆ. ಅಲ್ಲದೆ ಭಾರತಕ್ಕೆ ಬರಲೇಬೇಕು ಎಂಬುದು ನಿಮ್ಮ ಆಶಯವಾದರೆ ನಿಮ್ಮ ಪ್ರವಾಸವನ್ನು ಮರು ನಿಗದಿ ಮಾಡಿಕೊಳ್ಳಿ ಎಂದು ಖಡಕ್ ಪ್ರತಿಕ್ರಿಯೆ ನೀಡಿದೆ. ಪ್ರಪಂಚದ ಯಾವುದೇ ದೇಶದ ನಾಯಕರಾಗಲಿ ಭಾರತ ಪ್ರವಾಸಕ್ಕೆ ಮುಕ್ತ ಸ್ವಾಗತವಿದೆ. ಆದರೆ ಪಾಕಿಸ್ತಾನದ ಪ್ರವಾಸದೊಂದಿಗೆ ಭಾರತದ ಪ್ರವಾಸವನ್ನು ಜೊತೆಯಾಗಿಸಿಕೊಂಡು ಬರುವುದಾದರೇ ಯಾವುದೇ ದೇಶದ ನಾಯಕರೂ ಭಾರತಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا