Urdu   /   English   /   Nawayathi

ಚಿಗಳ್ಳಿ ಜಲಾಶಯ ಸೃಷ್ಟಿಸಿದೆ ಭಯ!

share with us

ಮುಂಡಗೋಡ: 14 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡು ಸೋಮವಾರ ಬೆಳಗ್ಗೆ ಒಡೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ. ಇದರಿಂದ ಈ ಭಾಗದ ಅಪಾರ ಬೆಳೆಗೆ ಹಾನಿಯಾಗಿದ್ದು, ಅರಣ್ಯಕ್ಕೆ ಹೋದ ಜಾನುವಾರುಗಳು ನೀರು ಪಾಲಾಗಿ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಒಂದು ಸಾವಿರ ಎಕರೆ ಪ್ರದೇಶಕ್ಕೆ ನೀರು ನುಗ್ಗಿದೆ. ಈ ನೀರು 5000 ಎಕರೆಯಷ್ಟು ಜಮೀನನ್ನು ತನ್ನೊಡಲಿಗೆ ತೆಗೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿಂದೆ 2007ರ ಆಗಸ್ಟ್ 14ರಂದು ಒಡ್ಡು ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿ, ನೀರಿನ ರಭಸಕ್ಕೆ ಕಾತೂರ ಸೇತುವೆಗೆ ಧಕ್ಕೆಯಾಗಿತ್ತು. ನಂತರ ಕೋಟ್ಯಂತರ ರೂ. ಖರ್ಚು ಮಾಡಿ ದುರಸ್ತಿ ಮಾಡಲಾಗಿತ್ತು. ಒಡ್ಡಿನ ಅದೇ ಜಾಗದಲ್ಲಿಯೇ ಈ ಬಾರಿಯೂ ಹಾನಿಯಾಗಿದೆ. ಇದು ಇಲಾಖೆಯ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಈಗ ಒಡ್ಡು ಒಡೆದಿರುವುದರಿಂದ ಹಿರೇಹಳ್ಳಿ, ಕಲ್ಲಳ್ಳಿ, ಹನುಮಾಪುರ, ಅಂದಲಗಿ, ಸುಳ್ಳಳ್ಳಿ, ಕವಲಗಿ, ಕೆರೆಹೊಸಳ್ಳಿ ಭಾಗದ ರೈತರ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಆದರೆ, ಜನವಸತಿ ಇರುವ ಯಾವುದೇ ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆಗಳಿಲ್ಲದಿರುವುದು ಜನತೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ತಾಲೂಕಿನಲ್ಲಿ 7 ಜಲಾಶಯಗಳಿವೆ. ಇದರಲ್ಲಿ ದೊಡ್ಡ ಜಲಾಶಯಗಳ ಪೈಕಿ ಚಿಗಳ್ಳಿ ಕೂಡ ಒಂದಾಗಿದೆ. ಈ ಜಲಾಶಯವು ಈ ಭಾಗದ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಕಳೆದ ಹಲವು ವರ್ಷಗಳಿಂದ ಜಲಾಶಯ ತುಂಬಿರಲಿಲ್ಲ. ಈ ಬಾರಿ ತುಂಬಿದ್ದನ್ನು ನೋಡಿ ಸುತ್ತಮುತ್ತಲಿನ ರೈತರು ಹರ್ಷಗೊಂಡಿದ್ದರು. ಆದರೆ, ರೈತರು ಅಂದುಕೊಂಡದ್ದೇ ಒಂದು, ಈಗ ಆಗಿದ್ದೇ ಇನ್ನೊಂದು.

ಜಲಾಶಯದ ಮಾಹಿತಿ: ಒಡ್ಡು ಒಡೆಯುವ ಸಾಧ್ಯತೆ ಕುರಿತು ರೈತರು ಮತ್ತು ಮಾಧ್ಯಮಗಳು ಅಧಿಕಾರಿಗಳಿಗೆ ಮೊದಲೇ ಮುನ್ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಕಾರಣದಿಂದ ಮತ್ತೆ ಒಡ್ಡು ಒಡೆದಿದೆ. * ಜಲಾಶಯ ಸುಮಾರು 165 ಹೆಕ್ಟೇರ್ ಜಾಗ ಹೊಂದಿದೆ. 20 ಮೀ. ಎತ್ತರ, 830 ಮೀ. ಅಗಲ ಹಾಗೂ 6850 ಕ್ಯೂಸೆಕ್ ನೀರಿನ ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. =25 ಸ್ಕೆ್ವೕರ್ ಮೀಟರ್ ಕ್ಯಾಚ್​ವೆುಂಟ್ ಏರಿಯಾ ಹೊಂದಿದೆ. * ಸ್ಥಳದಲ್ಲಿ ತಹಸೀಲ್ದಾರ್ ಮೊಕ್ಕಾಂ ಹೂಡಿದ್ದು, ಜಿಪಂ ಸಿಇಒ ರೋಷನ್ ಭೇಟಿ ನೀಡಿದ್ದಾರೆ. * ಇದೊಂದು ಚೆಕ್ ಡ್ಯಾಮ್ ಆಗಿದ್ದು, ಯಾವುದೇ ತೊಂದರೆ ಇಲ್ಲ. ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದ್ದಾರೆ. * ಎರಡು ಹಳ್ಳಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಜನರಿಗೆ ಸ್ಥಳಾಂತರಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. *ಜಲಾಶಯದ ನಿರ್ವಹಣೆ ಇಲ್ಲದೇ ಮತ್ತು ಒಡ್ಡು ಒಡೆಯುವ ಬಗ್ಗೆ ಈ ಮೊದಲೇ ಹಲವು ಬಾರಿ ಅಧಿಕಾರಿಗೆ ತಿಳಿಸಿದರೂ ತಕ್ಷಣ ಕ್ರಮ ಕೈಗೊಳ್ಳಲಿಲ್ಲ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಕೆಲಹೊತ್ತು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾರ್ಗ ಮಧ್ಯೆ ನಿಂತ ಬಸ್​ಗಳು: ಶಿರಸಿಯಿಂದ ಹುಬ್ಬಳ್ಳಿಗೆ ನಿತ್ಯ 76 ಬಸ್​ಗಳು ಸಂಚರಿಸುತ್ತವೆ. ಪ್ರತಿ 15 ನಿಮಿಷಕ್ಕೆ ಒಂದರಂತೆ ಬಸ್ ಸೌಲಭ್ಯ ಇದೆ. ಆದರೆ, ಡ್ಯಾಮ್ ಒಡೆದಿದ್ದರಿಂದ ಹಲವು ಬಸ್​ಗಳು ಮಾರ್ಗ ಮಧ್ಯೆಯೇ ನಿಲ್ಲುವಂತಾಯಿತು. ಹೊರ ರಾಜ್ಯ ಮತ್ತು ದೂರದ ಊರಿಗೆ ಶಿರಸಿ ಮೂಲಕ ಸಾಗುವ ಬಸ್​ಗಳು ಮಾರ್ಗ ಬದಲಿಸಿ ಯಲ್ಲಾಪುರ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಜನಪ್ರತಿನಿಧಿ, ಅಧಿಕಾರಿಗಳ ಭೇಟಿ: ಮುಂಡಗೋಡ ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡು ಒಡೆದು ನೀರು ಗದ್ದೆಗಳಿಗೆ ನುಗ್ಗಿ ಅಪಾರ ಹಾನಿಯಾಗಿದೆ. ಹಾನಿಗೊಂಡ ಸ್ಥಳಗಳಿಗೆ ಜಿಪಂ ಸಿಇಒ ಎಂ. ರೋಶನ್, ಮಾಜಿ ಶಾಸಕ ಶಿವರಾಮ ಹೆಬ್ಬಾರ, ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ, ಡಿವೈಎಸ್​ಪಿ ಜಿ.ಟಿ. ನಾಯ್ಕ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಸಿಪಿಐ ಶಿವಾನಂದ ಚಲವಾದಿ, ಮಾಜಿ ಶಾಸಕ ವಿ.ಎಸ್. ಪಾಟೀಲ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಒಡ್ಡು ನೋಡಲು ಜನರ ದಂಡು: ಜಲಾಶಯದ ಒಡ್ಡು ಒಡೆದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕಾತೂರಿನ ಸೇತುವೆ ಹತ್ತಿರ ಹೆಚ್ಚಿನ ನೀರು ಹರಿದು ಹೋಗುತ್ತಿದೆ. ತಾತ್ಕಾಲಿಕವಾಗಿ ಶಿರಸಿ-ಮುಂಡಗೋಡ-ಹುಬ್ಬಳ್ಳಿ ಮಾರ್ಗವನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಜಲಾಶಯ ನೋಡಲು ಶಿರಸಿ ಮಾರ್ಗವಾಗಿ ಬುರುತ್ತಿದ್ದಾಗ ಕಾತೂರ ಸೇತುವೆ ಹತ್ತಿರ ಹೆಚ್ಚಿನ ಪ್ರಮಾಣದ ನೀರು ಬಂದು ರಸ್ತೆ ಮೇಲೆ ನಿಂತಿತು. ಹೀಗಾಗಿ, ಅವರು ಅರ್ಧ ಗಂಟೆ ಕಾಯ್ದು ವಾಪಸಾದರು. ಒಡ್ಡು ಒಡೆದ ಜಲಾಶಯವನ್ನು ನೋಡಲು ಅಪಾರ ಸಂಖ್ಯೆಯ ಜನರು ಆಗಮಿಸಿದರು.ಸಾರ್ವಜನಿಕರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا