Urdu   /   English   /   Nawayathi

ನಾನೂರು ಕೋಟಿಗೂ ಅಧಿಕ ನಷ್ಟ

share with us

ಕಾರವಾರ: 14 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಉತ್ತರ ಕನ್ನಡ ಎಂದರೆ ಮಳೆನಾಡು… ಇಲ್ಲಿಗೆ ಮಳೆ ಹೊಸದಲ್ಲ… ಪ್ರತಿ ವರ್ಷ ಭಾರಿ ಮಳೆಯಾಗುತ್ತದೆ. ಕೆಲವೆಡೆ ನೀರು ತುಂಬುತ್ತದೆ. ಇನ್ನು ಕೆಲವೆಡೆ ಗುಡ್ಡ ಕುಸಿತವಾಗುವುದು ಸಾಮಾನ್ಯ. ಆದರೆ, ಇಡೀ ಜಿಲ್ಲೆ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿ ಹೋಗಿದ್ದು, ಈ ತಲೆಮಾರಿಗೆ ಇದೇ ಮೊದಲು. ‘ನಾನು ಮೂರು ವರ್ಷದವನಿದ್ದಾಗ 1961-62 ರಲ್ಲಿ ಇದೇ ಮಾದರಿಯ ಪ್ರವಾಹ ಬಂದಿತ್ತು’ ಎಂದು ಹಿರಿಯ ನಾಗರಿಕರು ನೆನಪಿಸಿಕೊಳ್ಳುತ್ತಾರೆ. ಒಂದೇ ವಾರದಲ್ಲಿ ಈಗಿನ ತಲೆಮಾರಿನವರಿಗೆ ಕಲ್ಪನೆಯೇ ಇಲ್ಲದಷ್ಟು, ಅಂದರೆ ವಾಡಿಕೆಯ 958 ಮಿಮೀಗಿಂತ ಶೇ. 223ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಣ್ಣಿಗೆ ನಿಲುಕದಷ್ಟು ಹರವಿನಲ್ಲಿ ನದಿಗಳು ಹರಿದಿವೆ. ಜಲಾಶಯಗಳ ಒಳಹರಿವು ನೋಡಿದ ಕೆಪಿಸಿ ಅಧಿಕಾರಿಗಳು ಅಣೆಕಟ್ಟೆ ಉಳಿಸಲು ಅದನ್ನು ಕಟ್ಟಿದ್ದ 95 ವರ್ಷದ ಇಂಜಿನಿಯರರನ್ನು ಕರೆಸಿ ಸಲಹೆ ಕೇಳಿದ್ದಾರಂತೆ. ಒಟ್ಟಾರೆ ಕಳೆದ 5 ದಿನಗಳು ನದಿ ತಟದ ಜನರನ್ನು ಸಾವಿನ ದವಡೆಗೆ ತಂದು ನಿಲ್ಲಿಸಿದೆ. ಸದಾ ಖುಷಿ ನೀಡುತ್ತಿದ್ದ ನೀರೇ ದುಃಸ್ವಪ್ನವಾಗಿ ಕಾಡಿದೆ. ಜನರು ವೈಯಕ್ತಿಕ ಆಸ್ತಿ ಕಳೆದುಕೊಳ್ಳುವ ಜತೆಗೆ ನಾಲ್ಕಾರು ಶಾಸಕರ ಅವಧಿಯಲ್ಲಿ ನಿರ್ವಣವಾದ ಸಾರ್ವಜನಿಕ ಆಸ್ತಿಗಳು ಅವಶೇಷವಾಗಿವೆ. ಕಿರು ಅಣೆಕಟ್ಟೆಗಳು ಒಡೆದಿವೆ. ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಕುಡಿಯುವ ನೀರಿನ ಯೋಜನೆಗಳಲ್ಲಿ ಹೂಳು ತುಂಬಿಕೊಂಡಿವೆ. ಶಾಲೆ, ಅಂಗನವಾಡಿಗಳು ಶಿಥಿಲವಾಗಿವೆ. ಹೀಗೆ ಐದು ದಿನದಲ್ಲಿ ಆದ ಹಾನಿ ಜಿಲ್ಲೆಯ ಒಂದು ವರ್ಷದ ಬಜೆಟ್​ನಷ್ಟೇ ದೊಡ್ಡದಿದೆ. 418.25 ಕೋಟಿ ರೂಪಾಯಿ ಮೊತ್ತದಷ್ಟು ಸಾರ್ವಜನಿಕ ಹಾಗೂ ವೈಯಕ್ತಿಕ ಆಸ್ತಿಗಳು, ಕೃಷಿ, ಮೀನುಗಾರಿಕೆ ವ್ಯವಸ್ಥೆಗೆ ಹಾನಿಯಾಗಿದೆ ಎಂದು ಲೆಕ್ಕ ಹಾಕಲಾಗಿದೆ. ಆದ ಈ ನಷ್ಟವನ್ನು ಮತ್ತೆ ಸರಿಪಡಿಸುವುದು ದೊಡ್ಡ ಸವಾಲು. ನೆರೆ ಸಂರಕ್ಷಣೆಯ ಕಾರ್ಯದ ಬಳಿಕ ಈಗ ಜಿಲ್ಲಾಡಳಿತ ಪರಿಹಾರ ಕಾರ್ಯದತ್ತ ಗಮನ ಹರಿಸಿದೆ. ಕಳೆದ ಎರಡು ದಿನ ಸರ್ವೆ ನಡೆಸಿ ಮುಗಿಸಿದ್ದು, ಈಗ ಪರಿಹಾರ ನೀಡಲಾಗುತ್ತಿದೆ. ಸಾರ್ವಜನಿಕ ಆಸ್ತಿಗಳ ತುರ್ತು ರಿಪೇರಿಗೆ ಮುಂದಾಗಿದೆ. ಹಾನಿಯ ವಿವರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಿಲ್ಲಾಡಳಿತ ಕೂಡ ಇನ್ನೂ ಖಚಿತ ವರದಿಗಾಗಿ ಸಮೀಕ್ಷೆ ಮುಂದುವರಿಸಿದೆ. ಇಲ್ಲಿಯವರೆಗಿನ ತಾತ್ಕಾಲಿಕ ಪಟ್ಟಿ ಇಲ್ಲಿದೆ. ಮುಂದಿನ ದಿನದಲ್ಲಿ ಈ ವಿವರಗಳೂ ಬದಲಾಗಬಹುದು.

ಘಟ್ಟದ ಮೇಲೆ ರಸ್ತೆ ಸೇತುವೆ ಹಾನಿ

ಘಟ್ಟದ ಮೇಲಿನ ತಾಲೂಕುಗಳಲ್ಲಿ ರಸ್ತೆ ಹಾಗೂ ಸೇತುವೆಗಳಿಗೆ ಹೆಚ್ಚು ಹಾನಿಯಾಗಿದೆ ಲೋಕೋಪಯೋಗಿ ಇಲಾಖೆಯ ಲೆಕ್ಕಾಚಾರದಂತೆ ಶಿರಸಿ ವಿಭಾಗಕ್ಕೆ ಸೇರಿದ ಮಲೆನಾಡು, ಅರೆ ಮಲೆನಾಡಿನ 7 ತಾಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ. 142 ಕಿಮೀ ರಾಜ್ಯ ಹೆದ್ದಾರಿಗೆ 26.72 ಕೋಟಿ ರೂ., ಅದರ 53 ಸೇತುವೆ ಹಾಗೂ ಮೋರಿಗಳಿಗೆ 11.36 ಕೋಟಿ ರೂ., 169 ಕಿಮೀ ಜಿಲ್ಲಾ ರಸ್ತೆಗೆ 16.53 ಕೋಟಿ ರೂ., 53 ಸೇತುವೆ ಹಾಗೂ ಮೋರಿಗಳಿಗೆ 11.04 ಕೋಟಿ ರೂ. ಹಾನಿಯಾಗಿವೆ. 30 ಸರ್ಕಾರಿ ಕಟ್ಟಡಗಳಿಗೆ 2.19 ಕೋಟಿ ರೂ. ನಷ್ಟು ನಷ್ಟವಾಗಿದೆ. ಕರಾವಳಿಯ ಐದು ತಾಲೂಕುಗಳನ್ನೊಳಗೊಂಡ ಕಾರವಾರ ವಿಭಾಗದಲ್ಲಿ 16 ಕಿಮೀ ರಾಜ್ಯ ಹೆದ್ದಾರಿಯಲ್ಲಿ 6.19 ಕೋಟಿ ರೂ., 16 ಸೇತುವೆಗಳಿಗೆ 6.26 ಕೋಟಿ ರೂ., 45 ಕಿಮೀ ಜಿಲ್ಲಾ ರಸ್ತೆಗೆ 18.95 ಕೋಟಿ ರೂ., 31 ಸೇತುವೆಗಳಿಂದ 34.34 ಕೋಟಿ ರೂ. ನಷ್ಟವಾಗಿದೆ. 2 ಸರ್ಕಾರಿ ಕಟ್ಟಡಗಳಿಗೆ 40 ಲಕ್ಷ ರೂ. ಹಾನಿಯಾಗಿದೆ. ಜಿಪಂ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 1005 ಕಿಮೀ ರಸ್ತೆಗಳಿಗೆ 53.49 ಕೋಟಿ ರೂ., 89 ಸೇತುವೆ, ಮೋರಿಗಳಿಗೆ 10.33 ಕೋಟಿ ರೂ.ಹಾನಿಯಾಗಿವೆ. 314 ಸರ್ಕಾರಿ ಕಟ್ಟಗಳಿಗೆ 6.13 ಕೋಟಿ ರೂ. ಹಾನಿಯಾಗಿದೆ. ಪಟ್ಟಣ ಪ್ರದೇಶದಲ್ಲಿ 28 ಕಿಮೀ ರಸ್ತೆಗೆ ಸುಮಾರು 4.36 ಕೋಟಿ ರೂ., 27 ಮೋರಿಗಳಿಗೆ 1.29 ಕೋಟಿ ರೂ., ಕುಮಟಾ ಪಟ್ಟಣದಲ್ಲಿ ಅತಿ ಹೆಚ್ಚು ಅಂದರೆ 53, ಹಳಿಯಾಳದಲ್ಲಿ 42, ಯಲ್ಲಾಪುರದಲ್ಲಿ 36, ಮುಂಡಗೋಡಿನಲ್ಲಿ 42, ಕಾರವಾರದಲ್ಲಿ 26, ದಾಂಡೇಲಿಯಲ್ಲಿ 33 ಕಾಮಗಾರಿಗಳಿಗೆ ಹಾನಿಯಾಗಿದೆ. ಬಂದರು ಇಲಾಖೆಗೆ ಸೇರಿದ 3200 ಕಿಮೀ ಮೀನುಗಾರಿಕೆ ರಸ್ತೆಗೆ 3.65 ಕೋಟಿ ರೂ.ಹಾನಿಯಾಗಿದೆ. 18 ಕಡಲ ತೀರಗಳಲ್ಲಿ ಭೂಮಿ, ರಸ್ತೆ, ಕೊರೆತ ಉಂಟಾಗಿದ್ದು, ಶಾಶ್ವತ ಪರಿಹಾರಕ್ಕೆ 58 ಕೋಟಿ ರೂ.ಬೇಕು ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ಇಲಾಖೆಯ 35 ಕಿಮೀ ಕೊಂಡಿ ರಸ್ತೆಗಳಿಗೆ 87.50 ಲಕ್ಷ ರೂ.ಹಾಳಾಗಿವೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا