Urdu   /   English   /   Nawayathi

ಹಲವು ವಿಘ್ನಗಳ ನಡುವೆ ಕೊನೆಗೂ ಮಂಗಳೂರು ತಲುಪಿದ ಕುವೈತ್ ಸಂತ್ರಸ್ತರು

share with us

ಮಂಗಳೂರು: 08 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ಕಳೆದ ಏಳೆಂಟು ತಿಂಗಳುಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಕರಾವಳಿಯ 34 ಸಂತ್ರಸ್ತರು ಹಲವು ವಿಘ್ನಗಳ ನಡುವೆಯೂ ಮಂಗಳೂರು ತಲುಪುವಲ್ಲಿ ಬುಧವಾರ ಯಶಸ್ವಿಯಾಗಿದ್ದಾರೆ. ಸಂತ್ರಸ್ತರ ಪೈಕಿ ಕೊನೆಯ ಹಂತದ ಎಂಟು ಮಂದಿಯ ತಂಡವು ಬುಧವಾರ ನಸುಕಿನ ಜಾವ 1.30ಕ್ಕೆ ನಗರದ ಹಂಪನಕಟ್ಟೆಯಲ್ಲಿ ಬಂದಿಳಿಯಿತು. ಬಸ್‌ನಿಂದ ಕೆಳಗಿಳಿದ ತಕ್ಷಣವೇ ನೂರಾರು ನೋವುಗಳ ಮಧ್ಯೆ ಸಂತ್ರಸ್ತರು ತಮ್ಮನ್ನು ಕರೆದೊಯ್ಯಲು ಬಂದಿದ್ದ ಬಂಧುಗಳನ್ನು ಬಿಗಿದಪ್ಪಿ ಕಣ್ಣೀರಾದರು. ಮುಂಬೈನಿಂದ ಮಂಗಳೂರಿಗೆ ಮಂಗಳವಾರ ಬರುತ್ತಿದ್ದ ಬಸ್ ಬೆಳಗ್ಗೆ 9 ಗಂಟೆ ಸುಮಾರು ಶಿರಸಿ ಘಾಟ್‌ನ ಕೊನೆಯ ತಿರುವಿನ ಬಳಿ ವಿಪರೀತ ಮಳೆಯಿಂದಾಗಿ ಮುಂದಡಿ ಇಡದಂತೆ ಸ್ತಬ್ಧಗೊಂಡ ಪರಿಣಾಮ ಮಂಗಳೂರಿಗೆ ವಿಳಂಬವಾಗಿ ತಲುಪಿದ್ದಾರೆ. ಒಬ್ಬರ ಬಳಿ ಇದ್ದ ಆಹಾರವನ್ನು ಹಂಚಿಕೊಂಡು ತಿಂದಿದ್ದರು. ಮಾರ್ಗ ಮಧ್ಯದಲ್ಲೇ ಸಿಲುಕಿದ್ದ ಸಂತ್ರಸ್ತರನ್ನು ಬಚಾವ್ ಮಾಡಲು ಖಾಸಗಿ ಬಸ್‌ನವರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. ಘಾಟ್ ಪ್ರದೇಶವು ಜನಸಂಪರ್ಕವಿಲ್ಲದ ಸ್ಥಳ. ಪ್ರಕೃತಿಯ ರೌದ್ರತೆ ಮಧ್ಯೆ ವಿಲವಿಲನೆ ಒದ್ದಾಡುತ್ತಿದ್ದ ಸಂತ್ರಸ್ತರ ಕಷ್ಟವನ್ನು ಪ್ರಕೃತಿಯೇ ಅರಿತುಕೊಂಡು ಮಳೆನೀರು ನಿಯಂತ್ರಣಕ್ಕೆ ಬಂತು. ಇದರಿಂದ ಬಸ್ ತೆರಳಲು ಅನುಕೂಲವಾಯಿತು ಎಂದು ಅಝೀಝ್ ತಿಳಿಸಿದ್ದಾರೆ.

ನಮ್ಮ ಹಣ ನಮಗೆ ಕೊಡಿಸಿ
ಕುವೈತ್‌ಗೆ ಉದ್ಯೋಗಕ್ಕೆಂದು ತೆರಳಿ ನರಕಯಾತನೆ ಅನುಭವಿಸಿದೆವು. ಉದ್ಯೋಗ ನೀಡುವುದಾಗಿ ಕರೆದೊಯ್ದಿದ್ದ ಏಜೆನ್ಸಿಯು ನಮಗೆ ಅನ್ಯಾಯ ಮಾಡಿದೆ. ಏಜೆನ್ಸಿಗೆ ಪ್ರತಿ ಸಂತ್ರಸ್ತರು ಸುಮಾರು 60 ಸಾವಿರ ರೂ. ಕೊಟ್ಟಿದ್ದೇವೆ. ಈ ಪೈಕಿ ಹಲವರು ಸಾಲ ಮಾಡಿ ಹಣ ಪಾವತಿಸಿದ್ದರು. ಕಳೆದ ಏಳು ತಿಂಗಳಿಂದ ಒಂದು ರೂಪಾಯಿ ಕೂಡ ದುಡಿಮೆಯಾಗಿಲ್ಲ. ನಾವು ಪಾವತಿಸಿದ ಹಣವನ್ನು ಏಜೆನ್ಸಿಯಿಂದ ವಾಪಸ್ ಕೊಡಿಸಲು ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಮನವಿ ಮಾಡುತ್ತೇವೆ ಎಂದು ಸಂತ್ರಸ್ತ ಅಝೀಝ್ ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا