Urdu   /   English   /   Nawayathi

ಮೇಘ ಸ್ಪೋಟಕ್ಕೆ ನಡುಗಿತು ಜಿಲ್ಲೆ

share with us

ಕಾರವಾರ: 07 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಭಾನು ಬಿರಿದಂತೆ 48 ಗಂಟೆಗಳಿಂದ ನಿರಂತರ ಸುರಿದ ಮಳೆಗೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಕಾಳಿ, ಗಂಗಾವಳಿ, ಅಘನಾಶಿನಿ ನದಿಗಳು ಎಲ್ಲೆ ಮೀರಿ ತುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಘಟ್ಟದ ಮೇಲಿನ ತಾಲೂಕುಗಳಿಂದ ಕರಾವಳಿ ಸಂಪರ್ಕ ಕಡಿದುಕೊಂಡಿದೆ. ಕರಾವಳಿ ಕಾವಲುಪಡೆ ಹಾಗೂ ನೌಕಾ ಸೇನೆ ಕಾರ್ಯಪ್ರವೃತ್ತವಾಗಿದ್ದು, ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಹೊನ್ನಾವರದಲ್ಲಿ 15, ಕುಮಟಾ-3, ಕಾರವಾರ-16, ಅಂಕೋಲಾದ-12, ಹಳಿಯಾಳದ-1, ಮುಂಡಗೋಡಿನ-2, ಯಲ್ಲಾಪುರದಲ್ಲಿ 1 ಸೇರಿ ಒಟ್ಟು 50 ಗಂಜಿ ಕೇಂದ್ರ ತೆರೆದು 85 ಕುಟುಂಬಗಳ 1886 ಜನರನ್ನು ಸ್ಥಳಾಂತರಿಸಲಾಗಿದೆ. 4666 ಎಕರೆ ಭತ್ತದ ಗದ್ದೆ, 575 ಹೆಕ್ಟೆರ್ ಮೆಕ್ಕೆ ಜೋಳ, 155 ಹೆಕ್ಟೆರ್ ಕಬ್ಬು ಹಾಗೂ 300 ಹೆಕ್ಟೆರ್​ಗೂ ಅಧಿಕ ತೋಟಗಾರಿಕೆ ಬೆಳೆಗೆ ಹಾನಿಯಾಗಿರಬಹುದು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಕೈಗಾ ಉದ್ಯೋಗಿಗಳಿಗೆ ತೊಂದರೆ: ಕದ್ರಾ ಅಣೆಕಟ್ಟೆಯಿಂದ ನೀರು ಬಿಟ್ಟಿದ್ದರಿಂದ ರಾತ್ರಿ ಬೆಳಗಾಗುವುದರ ಒಳಗೆ ಮಲ್ಲಾಪುರ, ಕದ್ರಾ ತುಂಬಿ ಹೋಗಿತ್ತು, ಮಲ್ಲಾಪುರ ಹಿಂದುವಾಡದಿಂದ ಗ್ರಾ.ಪಂ. ಎದುರಿನವರೆಗೆ ಸಂಪೂರ್ಣ ರಸ್ತೆ ಮುಳುಗಡೆಯಾಗಿತ್ತು. ಟೌನ್​ಶಿಪ್ ರಸ್ತೆಯಲ್ಲಿ ಕುರ್ನಿಪೇಟೆಯಿಂದ ಪೊಲೀಸ್ ಠಾಣೆಯವರೆಗೆ, ಇನ್ನೊಂದೆಡೆ ಪೆಟ್ರೋಲ್ ಪಂಪ್​ವರೆಗೆ ನೀರು ತುಂಬಿದೆ. ಕೈಗಾ ಟೌನ್​ಶಿಪ್​ನ ಮಲ್ಟಿ ಸ್ಟೋರೇಜ್ ಬಿಲ್ಡಿಂಗ್, ಹಾಗೂ ಸಿ ಕೆಟಗರಿಯ ಮನೆಗಳ ನೆಲ ಮಹಡಿಯಲ್ಲಿ ನೀರು ನಿಂತಿದೆ. ಇದರಿಂದ ಹಲವು ವಾಹನಗಳು ಮುಳುಗಡೆಯಾಗಿವೆ. ಇದರಿಂದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಉದ್ಯೋಗಕ್ಕೆ ಹೋಗುವವರಿಗೆ ತೊಂದರೆ ಉಂಟಾಯಿತು. ಘಟಕ ನಡೆಯಲು ಅಗತ್ಯವಿರುವ ರಾತ್ರಿ ಪಾಳಿಯ ಸಿಬ್ಬಂದಿಯನ್ನೇ ಮುಂದುವರಿಸಲಾಯಿತು. ತುರ್ತು ಸಿಬ್ಬಂದಿಯನ್ನು ದೋಣಿಯ ಮೂಲಕ ಬಸ್​ಗೆ ಸ್ಥಳಾಂತರಿಸಿ ಘಟಕಕ್ಕೆ ತೆರಳಲು ಅನುವು ಮಾಡಿಕೊಡಲಾಯಿತು. ಸಾಮಾನ್ಯ ಶಿಫ್ಟ್​ನ ನೂರಾರು ಸಿಬ್ಬಂದಿಗೆ ರಜೆ ಘೊಷಿಸಲಾಗಿತ್ತು. ಘಟಕ ನಿರ್ವಹಣೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೈಗಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೈಗಾ ಅಣು ಸ್ಥಾವರ ನಿರ್ವಣವಾದ ನಂತರ ಇದೇ ಮೊದಲ ಬಾರಿಗೆ ಕದ್ರಾ ಹಾಗೂ ಮಲ್ಲಾಪುರದಲ್ಲಿ ನೀರು ತುಂಬಿದೆ ಎಂದು ಜನರು ಹೇಳುತ್ತಿರುವುದು ಕೇಳಿ ಬಂತು.

ವಿದ್ಯುತ್ ಕಡಿತ: ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. ಭಾರಿ ಗಾಳಿಯೂ ಬೀಸುತ್ತಿರುವುದರಿಂದ ವಿದ್ಯುತ್ ಕಂಬಗಳ ಮೇಲೆ ಮರ ಮುರಿದು ಬಿದ್ದಿದ್ದು, ವಿದ್ಯುತ್ ಸ್ಥಗಿತವಾಗಿದೆ. ಕಾರವಾರದ ಮಲ್ಲಾಪುರ, ಕದ್ರಾದಲ್ಲಿ 3 ದಿನಗಳಿಂದ ನೀರಿಲ್ಲ. ಮಲ್ಲಾಪುರ ಟೌನ್​ಶಿಪ್​ನ ಪಂಪ್ ಹೌಸ್ ತುಂಬಿದ್ದು, ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಕೇಬಲ್ ಹಾಗೂ ಇಂಟರ್​ನೆಟ್ ಸೌಲಭ್ಯ ಸ್ಥಗಿತಗೊಂಡಿದೆ. 30 ವರ್ಷಗಳ ನಂತರ ಪ್ರವಾಹ ಪರಿಸ್ಥಿತಿ: ಮಲ್ಲಾಪುರ, ಕದ್ರಾ ಭಾಗದಲ್ಲಿ 30 ವರ್ಷಗಳ ನಂತರ ಈ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ಹಿಂದೆ ನೀರು ಬಿಟ್ಟರೂ ರಸ್ತೆಗಳು ಬಂದಾಗುತ್ತಿರಲಿಲ್ಲ. ಮನೆಗಳಿಗೆ ನೀರು ನುಗ್ಗುತ್ತಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಪ್ರಾಣಿಗಳ ಭೀತಿ: ನದಿ, ಹಳ್ಳಗಳಿಂದ ರಾಶಿ, ರಾಶಿ ಕಸ ಸಮುದ್ರದೆಡೆಗೆ ನುಗ್ಗುತ್ತಿದೆ. ಇದರಿಂದ ಕಡಲ ತೀರದಲ್ಲಿ ಲೋಡ್​ಗಟ್ಟಲೇ ಕಸದ ರಾಶಿ ಬಿದ್ದಿದೆ. ಮಲ್ಲಾಪುರ ಕದ್ರಾ ಭಾಗದಲ್ಲಿ ಸಾಕಷ್ಟು ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಪ್ರವಾಹದಲ್ಲಿ ತೇಲಿ ಬರುವ ಅಪಾಯಕಾರಿ ಹಾವುಗಳ ಮನೆಗಳ ಒಳಗೆ ಬರುವ ಆತಂಕ ಜನರಲ್ಲಿದೆ. ಕೆಲವು ಮನೆಗಳಿಗೆ ನೀರು ನುಗ್ಗದಿದ್ದರೂ ರಾತ್ರಿ ಮಲಗಲು ಜನರು ಹೆದರುವಂತಾಗಿದೆ. ರಾತ್ರಿಯೆಲ್ಲ ಬೆಟ್ಟದ ಮೇಲೆ ಕಾಲ ಕಳೆದೆವು: ರಾತ್ರಿ ಎರಡು ಗಂಟೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಮನೆಯ ಒಳಗೆ ನೀರು ಬರಲಾರಂಭಿಸಿತು. ಹೊರಗೆ ನೋಡಿದರೆ ಎಲ್ಲೆಡೆ ನೀರು ತುಂಬಿಕೊಂಡಿತ್ತು. ಕೆಲವರನ್ನು ಕೈ ಹಿಡಿದು ದಾಟಿಸಲಾಯಿತು. ಗ್ರಾ.ಪಂ. ಸಮೀಪ ಬಂದು ಕೆಲವರು ರಕ್ಷಣೆ ಪಡೆದರೆ ಇನ್ನು ಕೆಲವರು ಬೆಟ್ಟದ ಮೇಲೆ ರಾತ್ರಿ ಕಳೆದರು. ಬೆಳಗ್ಗೆ ದೋಣಿ ಹಾಕಿ ಜನರನ್ನು ಕರೆತರಲಾಯಿತು ಎನ್ನುತ್ತಾರೆ ಮಲ್ಲಾಪುರದ ಪ್ರಸನ್ನ ಬಾಂದೇಕರ್. ವೃದ್ಧರು, ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇನ್ನೊಂದೆಡೆ ಮನೆ ಮುಳುಗಿ ಏನು ಹಾನಿಯಾಗುತ್ತದೋ ಎಂಬ ಆತಂಕದಿಂದ ಮನೆ ಬಿಟ್ಟು ಬರಲೂ ಮುಂದಾಗುತ್ತಿಲ್ಲ. ನಮ್ಮ ಆಯಸ್ಸಿನಲ್ಲಿ ಮಲ್ಲಾಪುರದಲ್ಲಿ ಇಂಥ ಪ್ರವಾಹ ಕಂಡಿದ್ದು ಇದೇ ಮೊದಲು ಎನ್ನುತ್ತಾರೆ ರಾಜೇಶ ಗಾಂವಕರ್.

ರಸ್ತೆಗಳೆಲ್ಲವೂ ಬಂದ್: ಇದೇ ಮೊದಲ ಬಾರಿಗೆ ಅಂಕೋಲಾ-ಯಲ್ಲಾಪುರ ರಸ್ತೆ ಸತತ 48 ಗಂಟೆಯಿಂದ ಬಂದಾಗಿದೆ. ಘಟ್ಟದ ಮೇಲಿನ ತಾಲೂಕುಗಳು, ಕೆಳಗಿನ ತಾಲೂಕುಗಳ ಜೊತೆ ಸಂಪರ್ಕ ಕಡಿದುಕೊಂಡಿವೆ. ಇನ್ನೂ ಮೂರು ದಿನ ಮಳೆ: ಆಗಸ್ಟ್ 9ರವರೆಗೂ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಸಮುದ್ರ ಕಡೆಯಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿರುವುದರಿಂದ ತೀರಗಳಿಗೆ ಪ್ರವಾಸಿಗರು ತೆರಳಲು ನಿರ್ಬಂಧ ಹೇರಲಾಗಿದೆ. ಇನ್ನು ಜಲಪಾತಗಳು, ನದಿಗಳಿಗೂ ಜನರು ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಶಾಲೆ ಕಾಲೇಜ್​ಗಳಿಗೆ ರಜೆ: ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ, ಕಾಲೇಜ್​ಗಳಿಗೆ ಆ. 7ರಂದು ರಜೆ ಘೊಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಮಳೆಯ ಪ್ರಮಾಣ: ಮಳೆಯ ಪ್ರಮಾಣ ದಾಖಲೆ ಬರೆದಿದೆ. 2009ರಲ್ಲಿ ಜಿಲ್ಲೆಯಲ್ಲಿ ಇಷ್ಟು ಮಳೆಯಾಗಿತ್ತು. ಮಂಗಳವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 153.4 ಮಿ.ಮೀ. ಮಳೆಯಾಗಿದೆ. ಅಂಕೋಲಾ-91.2, ಭಟ್ಕಳ-200.2, ಹಳಿಯಾಳ-132.8, ಹೊನ್ನಾವರ-152.2, ಕಾರವಾರ-84.4, ಕುಮಟಾ-140.8, ಮುಂಡಗೋಡ-101.2, ಸಿದ್ದಾಪುರ-182.4, ಶಿರಸಿ-175.5, ಜೊಯಿಡಾ-84.6, ಯಲ್ಲಾಪುರ-242.6 ಮಳೆಯಾಗಿದೆ. ನಿಯಂತ್ರಿಸಲಾರದಷ್ಟು ಒಳ ಹರಿವು: ಕಾಳಿ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸೂಪಾ ಜಲಾಶಯಕ್ಕೆ 71,313 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 564 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ 551.80 ಮೀಟರ್ ನೀರು ಭರ್ತಿಯಾಗಿದೆ. ಬೊಮ್ಮನಹಳ್ಳಿ, ತಟ್ಟಿಹಳ್ಳಿ, ಕೊಡಸಳ್ಳಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಕೊಡಸಳ್ಳಿ ಅಣೆಕಟ್ಟೆಯ ಎಲ್ಲ ಗೇಟ್​ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ಕದ್ರಾ ಜಲಾಶಯಕ್ಕೆ 17 ಸಾವಿರ ಕ್ಯೂಸೆಕ್ ಒಳಹರಿವಿದೆ. ಸತತ 48 ಗಂಟೆಗಳಿಂದ ಜಲಾಶಯದ ಗೇಟ್ ತೆರೆದು ನೀರು ಹೊರಬಿಡಲಾಗುತ್ತಿದೆ. ಸತತ ವಿದ್ಯುತ್ ಉತ್ಪಾದನೆ ಮಾಡಿ ನೀರು ಬಿಡಲಾಗುತ್ತಿದೆ. ಒಟ್ಟಾರೆ 1.40 ಲಕ್ಷ ಕ್ಯೂಸೆಕ್ ನೀರು ಕಾಳಿ ನದಿಗೆ ಹರಿದು ಹೋಗುತ್ತಿದೆ. ಕಾಳಿ ನದಿಯಲ್ಲಿ ಮತ್ತಷ್ಟು ಪ್ರವಾಹ ಪರಿಸ್ಥಿತಿ ಉಂಟಾಗುವ ಹಿನ್ನೆಲೆಯಲ್ಲಿ ಕಾರವಾರ ನಗರದಲ್ಲಿ 3 ಗಂಜಿ ಕೇಂದ್ರ ತೆರೆಯಲಾಗಿದೆ. ಪಂರ್ಚಷಿವಾಡ, ಅಳಿವೆವಾಡ, ತಾಮಸೆವಾಡದ 1 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಕಾಳಿ ನದಿಯ ನಡುವೆ ಇರುವ ಖಾರ್ಗೆಜೂಗ, ಉಮ್ಮಳೆಜೂಗ, ಬೋಡ ಜೂಗ, ಹಣಕೋಣ ಜೂಗ ಗ್ರಾಮಗಳಿಗೆ ನೀರು ನುಗ್ಗಿದೆ. ಕಿನ್ನರದ ಬೋರಿಬಾಗ, ಅಂಬೆಜೂಗಗಳಲ್ಲಿ ಗಂಜಿ ಕೇಂದ್ರ ತೆರೆದು ಒಟ್ಟು 500ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا