Urdu   /   English   /   Nawayathi

ಆರು ತಿಂಗಳಲ್ಲಿ 60 ಜನರ ದುರ್ಮರಣ

share with us

ಕಾರವಾರ: 03 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಭಟ್ಕಳದ ಗೊರಟೆಯಿಂದ ಕಾರವಾರದ ಮಾಜಾಳಿವರೆಗೆ ಹಬ್ಬಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಜನವರಿಯಿಂದ ಜೂನ್​ವರೆಗೆ ನಡೆದ ಅಪಘಾತಗಳ ಸಂಖ್ಯೆ ಇದು. ಹೆದ್ದಾರಿಯನ್ನು ಚತುಷ್ಪಥವನ್ನಾಗಿ ವಿಸ್ತರಿಸುವ ಕಾಮಗಾರಿ ನಡೆದಿದೆ. ಇದರಿಂದ ಯಮ ಕೆಲ ವರ್ಷಗಳಿಂದ ಇದೇ ಹೈವೆಯಲ್ಲಿ ದಿನವಿಡೀ ಓಡಾಟ ನಡೆಸುತ್ತಾನೇನೋ ಎಂಬ ಪರಿಸ್ಥಿತಿ ಇದೆ. ಧುತ್ತನೆ ಎದುರಾಗುವ ರಸ್ತೆ ತಿರುವುಗಳು, ಅಲ್ಲಲ್ಲಿ ಹೊಂಡ, ಹೆದ್ದಾರಿಗೇ ಜರಿದು ಬರುತ್ತದೆ ಎಂಬ ಸ್ಥಿತಿಯಲ್ಲಿರುವ ಗುಡ್ಡಗಳು ಸಂಚಾರವನ್ನು ದುಸ್ತರಗೊಳಿಸಿವೆ. ಹೈವೆಯಲ್ಲಿ ಓಡಾಡುವವರು ಸುರಕ್ಷಿತ ಬರುತ್ತಾರೆ ಎಂಬ ನಂಬಿಕೆ ಇಲ್ಲದಂತಾಗಿದೆ. ಚತುಷ್ಪಥ ಗುತ್ತಿಗೆ ಕಾಮಗಾರಿ ನಡೆಸಿರುವ ಐಆರ್​ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಗಳು, ಅಸಮರ್ಪಕ ನಿರ್ವಹಣೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂಬುದು ನಿರ್ವಿವಾದ. ಕಳೆದ 6 ತಿಂಗಳಲ್ಲಿ ಜಿಲ್ಲೆಯ ಕರಾವಳಿಯ 11 ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 263 ಅಪಘಾತಗಳು ಸಂಭವಿಸಿವೆ. ಅದರಲ್ಲಿ 52 ಅಪಘಾತಗಳಲ್ಲಿ 60 ಜನ ಸತ್ತಿದ್ದಾರೆ. ಇನ್ನು 211 ಅಪಘಾತಗಳಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮಾಹಿತಿ ಹೇಳುತ್ತದೆ. ಭಟ್ಕಳ ತಾಲೂಕೊಂದರಲ್ಲೇ ಜನವರಿಯಿಂದ ಜುಲೈವರೆಗೆ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಂದಾಜು 15 ಮಂದಿ ಮೃತಪಟ್ಟಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 2017ನೇ ಸಾಲಿನಲ್ಲಿ ಸಂಭವಿಸಿದ 487 ಅಪಘಾತಗಳಲ್ಲಿ 103 ಜನ ಮೃತಪಟ್ಟಿದ್ದರು. 2018ರಲ್ಲಿ ಸಂಭವಿಸಿದ 432 ಅಪಘಾತಗಳಲ್ಲಿ 105 ಜನ ಮೃತಪಟ್ಟಿದ್ದಾರೆ.

ಕುಮಟಾ ಪಟ್ಟಣದಲ್ಲಿ ತೊಂದರೆ: ಕುಮಟಾ ಪಟ್ಟಣದಲ್ಲಿ ಬೈಪಾಸ್ ಗೊಂದಲದಿಂದ ಹೆದ್ದಾರಿ ರಿಪೇರಿಯಾಗದೇ ಕುಳಿತಿದೆ. ಸಾಕಷ್ಟು ವಾಹನ ಜಂಗುಳಿ ಇದ್ದು, ಓಡಾಟ ಕಷ್ಟವಾಗಿದೆ. ವಾಹನ ಸವಾರರು ಓಡಾಡಲು ತೊಂದರೆಯಾಗುತ್ತಿದ್ದರೆ, ಪಾದಚಾರಿಗಳು ರಸ್ತೆ ದಾಟಲು ಭಯ ಪಡುವಂಥ ಸ್ಥಿತಿ ಇದೆ. ದೀವಗಿಯಲ್ಲಿ ನಿತ್ಯ ಸಾವಿರಾರು ಜನ ರಸ್ತೆ ದಾಟುತ್ತಿದ್ದು, ಮೇಲ್ಸೇತುವೆ ವ್ಯವಸ್ಥೆ ಮಾಡಬೇಕು ಎಂದು ಜನ ಬೇಡಿಕೆ ಇಟ್ಟಿದ್ದಾರೆ. ಆದರೆ, ಅದಕ್ಕೆ ಸ್ಪಂದನೆ ದೊರೆತಿಲ್ಲ. ಭವಿಷ್ಯದ ಅಪಾಯಗಳಿಗೆ ಬಾಗಿಲು ತೆರೆದಿಡಲಾಗಿದೆ.

ಗುಡ್ಡ ಕುಸಿಯುವ ಭೀತಿ: ಕುಮಟಾ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದಾರೆ. ಪುನಃ ಆದೇ ಜಾಗದಲ್ಲಿ ಮುನ್ನೆಚ್ಚರಿಕೆಯಿಲ್ಲದೆ ಬಂಡೆಗಳನ್ನು ಸ್ಪೋಟಿಸಿದ್ದರಿಂದ ಸಾಕಷ್ಟು ಹಾನಿಯಾಗಿದೆ. ಕಡಿದ ಗುಡ್ಡಕ್ಕೆ ಅವೈಜ್ಞಾನಿಕವಾಗಿ ಸಿಮೆಂಟ್ ಪ್ಲಾಸ್ಟರ್ ಮಾಡಿದ್ದು ಕೂಡಾ ಎಲ್ಲೆಡೆ ವಿಫಲವಾಗಿದ್ದು ಈ ಮಳೆಗಾಲದಲ್ಲಿ ಹೆದ್ದಾರಿಯೇ ಕುಸಿಯುವ ಆತಂಕ ಸೃಷ್ಟಿಸಿದೆ. ಕಾರವಾರದ ಬಿಣಗಾ ಘಟ್ಟ, ಸಂಕ್ರುಬಾಗ, ಮುದಗಾ ಘಟ್ಟದಲ್ಲಿ ಗುಡ್ಡ ಯಾವುದೇ ಕ್ಷಣದಲ್ಲೂ ಕುಸಿಯುವ ಸ್ಥಿತಿ ಇದೆ. ಗುಡ್ಡದಿಂದ ಹರಿದು ಬರುವ ನೀರಿನೊಂದಿಗೆ ಮಣ್ಣು, ಕಲ್ಲು ಸೇರಿ ಹೆದ್ದಾರಿಯಲ್ಲಿ ಸಂಗ್ರಹಗೊಂಡು ವಾಹನಗಳ ಸುಗಮ ಸಂಚಕಾರಕ್ಕೆ ಅಡ್ಡಿಯಾಗುತ್ತಿದೆ.

ಕಾರವಾರದಲ್ಲಿ ಸಮಸ್ಯೆ: ಕಾರವಾರದ ಕೋಡಿಬಾಗದಲ್ಲಿ ಕಾಳಿ ಸೇತುವೆ ನಂತರ ಖಾಪ್ರಿ ದೇವಸ್ಥಾನ ಬಳಿ ರಸ್ತೆಯನ್ನು ಇದ್ದಕ್ಕಿದ್ದಂತೆ ಎತ್ತರಿಸಿ ದ್ದರಿಂದ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ದೇವಸ್ಥಾನ ಕಡೆಯಿಂದ ಹೆದ್ದಾರಿ ಸೇರುವವರು ವಾಹನವನ್ನು ವೇಗದಿಂದ ಕೊಂಡೊಯ್ದು ಮುಂದೆ ನಿಯಂತ್ರಣ ಸಿಗದೇ ಅಪಘಾತಗಳು ಸಂಭವಿಸುತ್ತಿವೆ. ಮೀನು ಮಾರುಕಟ್ಟೆ ಎದುರು ಅಪಾಯ ಸಂಭವಿಸುವಂತಿದೆ.

ಭಟ್ಕಳದಲ್ಲಿ ಸಮಸ್ಯೆ: ತಾಲೂಕಿನ ಗಡಿಭಾಗವಾದ ಗೊರ್ಟೆಯಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಎರಡೂ ಬದಿಯ ಕಾರ್ಯಗಳು ಬಹುತೇಕ ಪೂರ್ಣಗೊಂಡಿದೆ. ಆದರೆ, ವಾಹನ ಸಂಚರಿಸಲು ಒಂದೆ ಕಡೆ ಆಸ್ಪದ ಮಾಡಿಕೋಡಲಾಗಿದೆ. ಸ್ಥಳೀಯರು ಸೇರಿ ಕೆಲವರು ವಾಹನದ ದಟ್ಟಣೆ ತಪ್ಪಿಸಿಕೊಳ್ಳುವ ಸಲುವಾಗಿ ಎರಡು ಬದಿಯಲ್ಲೂ ಸಂಚರಿಸುತ್ತಾರೆ. ಇದರಿಂದ ಗೊಂದಲಕ್ಕೀಡಾಗಿ, ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿ ಮುಗಿದ ಸ್ಥಳದಲ್ಲಾದರೂ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಿ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ. ತಾಲೂಕಿನ ಬೆಳಕೆ ಸೇತುವೆ, ಪಟ್ಟಣದ ಸಿಟಿಲೈಟ್ ಹೋಟೆಲ್, ವೆಂಕಟಾಪುರ ಸೇತುವೆ, ಐಸಿಐಸಿಐ ಅನಂತವಾಡಿಯ ಬಳಿಯ ಸ್ಥಳಗಳನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ. ಅಲ್ಲದೆ, ಸರ್ಪನಕಟ್ಟೆ, ಶಿರಾಲಿ, ಸಾರದ ಹೊಳೆ, ಬೆಂಗ್ರೆ, ಮುರ್ಡೆಶ್ವರ, ಅನಂತವಾಡಿಯಲ್ಲೂ ಅಪಾಯಕಾರಿ ಸ್ಥಳಗಳಿವೆ.

ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಎಚ್ಚರಿಕೆ: ಜಿಲ್ಲಾದ್ಯಂತ ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಅಪಘಾತಗಳು ಮೀತಿ ಮೀರಿವೆ. ಸುರಕ್ಷತಾ ವಿಧಾನ ಕೈಗೊಳ್ಳುವಲ್ಲಿ ಐಆರ್​ಬಿ ವಿಫಲವಾಗುತ್ತಿದೆ. ಕಂಪನಿಗೆ ಎಸ್​ಪಿ ಪತ್ರ ಬರೆದರೂ ಸ್ಪಂದಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಇತ್ತೀಚೆಗೆ ಭಟ್ಕಳಕ್ಕೆ ಆಗಮಿಸಿದಾಗ ಐಆರ್​ಬಿ ಹಿರಿಯ ಅಧಿಕಾರಿ ಮೋಹನದಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸುರಕ್ಷತೆ ವಿಫಲತೆಯಿಂದ ಅಪಘಾತ ಸಂಭವಿಸಿದರೆ ನಿಮ್ಮನ್ನೇ ಹೊಣೆಯಾಗಿಸುತ್ತೇವೆ ಎಂದು ಎಚ್ಚರಿಸಿದ್ದರು.

ಅಜ್ಜಿಕಟ್ಟಾ ಸಮೀಪ ಎದುರಾಗಿದೆ ಅಪಾಯ: ಅಂಕೋಲಾ ತಾಲೂಕಿನಲ್ಲಿ ಪುರ್ಲಕ್ಕಿಬೇಣಕ್ಕೆ ಹೋಗುವ ಪಿಕಾಕ್ ಹೋಟೆಲ್ ಹತ್ತಿರದ ರಸ್ತೆಯನ್ನು ದ್ವಿಚಕ್ರ ವಾಹನದಲ್ಲಿ ದಾಟುವ ಸಂದರ್ಭದಲ್ಲಿ ಅಂಚೆ ನೌಕರನೊಬ್ಬ ಇತ್ತೀಚೆಗೆ ಬಿದ್ದು ಬಲಿಯಾಗಿದ್ದ. ಪಟ್ಟಣ ವ್ಯಾಪ್ತಿಯ ಅಜ್ಜಿಕಟ್ಟಾದಲ್ಲಿಯೂ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಒಂದೇ ರಸ್ತೆಯಲ್ಲಿ ವಾಹನ ಚಲಾಯಿಸುವುದರಿಂದ ಗೊಂದಲ ಉಂಟಾಗಿ ಅಪಘಾತಗಳು ಸಂಭವಿಸುತ್ತಿವೆ. ಪಕ್ಕದಲ್ಲಿನ ಎರಡು ರಸ್ತೆಗಳಲ್ಲಿ ಚೀರೆಕಲ್ಲುಗಳು ಇರುವುದರಿಂದ ವಾಹನ ಸವಾರರು ಜಾರಿ ಬೀಳುತ್ತಿದ್ದಾರೆ. ಇನ್ನು ಭಾರಿ ವಾಹನ ಚಾಲಕರೂ ಇಲ್ಲಿ ಗೊಂದಲಕ್ಕೆ ಈಡಾಗುತ್ತಾರೆ.

ಚತುಷ್ಪಥ ಕಾಮಗಾರಿ ನಡೆದಿರುವುದರಿಂದ ಕೆಲವೆಡೆ ಅಪಘಾತಗಳು ಉಂಟಾಗುತ್ತಿರುವುದು ನಿಜ. ಪೊಲೀಸ್ ಇಲಾಖೆಯಿಂದ ಅಪಾಯಕಾರಿ ಸ್ಥಳ ಗುರುತಿಸಿ ಮುನ್ನೆಚ್ಚರಿಕೆ ಫಲಕ ಹಾಕಲು ಐಆರ್​ಬಿ ಕಂಪನಿಗೆ ತಿಳಿಸಲಾಗಿದೆ. ಕೆಲವು ಬದಲಾವಣೆಗೆ ಸೂಚಿಸಲಾಗಿದೆ. ನಿರಂತರ ನಿಗಾದಿಂದ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ವಾಹನ ಸವಾರರೂ ರಸ್ತೆ ನಿಯಮಗಳ ಕುರಿತು ಎಚ್ಚರಿಕೆ ವಹಿಸಬೇಕು.

| ಡಾ. ಗೋಪಾಲ ಬ್ಯಾಕೋಡ ಹೆಚ್ಚುವರಿ ಎಸ್​ಪಿ

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا