Urdu   /   English   /   Nawayathi

ಬರ್ಗದ್ದೆ ಸೊಸೈಟಿಯಲ್ಲಿ ಅವ್ಯವಹಾರ ಶಂಕೆ

share with us

ಕುಮಟಾ: 23 ಜುಲೈ 2019 (ಫಿಕ್ರೋಖಬರ್ ಸುದ್ದಿ) ತಾಲೂಕಿನ ಬರ್ಗದ್ದೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ (ಸೊಸೈಟಿ)ದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ರೈತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೆಡಿಸಿಸಿ ಬ್ಯಾಂಕಿನ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು. ಸೊಸೈಟಿಯಲ್ಲಿ ಜಮಾಯಿಸಿದ ರೈತರು, ನಮಗೆ ಅನ್ಯಾಯವಾಗುತ್ತಿದೆ. ಬೆಳೆಸಾಲ ಮನ್ನಾ ಆಗುತ್ತಿಲ್ಲ. ಹೊಸದಾಗಿ ಸಾಲವೂ ಸಿಗುತ್ತಿಲ್ಲ. ಸೊಸೈಟಿಯ ಆಡಳಿತ ಮಂಡಳಿಯು ಕಾರ್ಯದರ್ಶಿ ಲಕ್ಷ್ಮಣ ಪಟಗಾರರ ಕೈಗೊಂಬೆಯಾಗಿದೆ. ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರೇ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು. ಬಳಿಕ ಕೆಡಿಸಿಸಿ ಬ್ಯಾಂಕಿನ ಕುಮಟಾ ಶಾಖೆಯ ವ್ಯವಸ್ಥಾಪಕಿ ಶಾಲಿನಿ ಸೊಸೈಟಿಗೆ ಬಂದು ರೈತರ ಅಹವಾಲು ಆಲಿಸಿದರು. ಕೆಲ ತಿಂಗಳ ಹಿಂದೆ ಕೆಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಬರ್ಗದ್ದೆ ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಅವರು ಸಾಲಮನ್ನಾ ಅರ್ಜಿ ಸಲ್ಲಿಸಿದ ರೈತರ ಮನೆಗೆ ತೆರಳಿ ಎರಡು ಸೆಲ್ಪ್ ಚೆಕ್(ವಿತ್​ಡ್ರಾ ಚೆಕ್) ಗಳನ್ನು ನೀಡಿ ಒತ್ತಾಯ ಪೂರ್ವಕ ಸಹಿ ಪಡೆದಿದ್ದಾರೆ. ಬಳಿಕ ಕೆಲ ರೈತರ ಖಾತೆಯಲ್ಲಿ ಮೊದಲಿದ್ದ ಸಾಲದ ಮೊತ್ತಕ್ಕೆ ಹೊಸದಾಗಿ ಲಕ್ಷಾಂತರ ರೂ. ಸಾಲ ಹೆಚ್ಚುವರಿಯಾಗಿ ಸೇರಿಸಿ ಒಟ್ಟು ಮೊತ್ತದ ಹಣವನ್ನೂ ವಿತ್​ಡ್ರಾ ಮಾಡಲಾಗಿದೆ. ಆದರೆ, ನಮಗೆ ಋಣಮುಕ್ತ ಪ್ರಮಾಣಪತ್ರವು ಇಲ್ಲ. ಹೊಸದಾಗಿ ಸಾಲವನ್ನು ಕೊಡುತ್ತಿಲ್ಲ. ಇಲ್ಲದ ಸಬೂಬು ಹೇಳಲಾಗುತ್ತಿದೆ. ಸೊಸೈಟಿಯಲ್ಲಿ ರೈತರ ಮೆಚ್ಯೂರಿಟಿಯಾದ ಫಿಕ್ಸ್ ಡಿಫಾಸಿಟ್ ಮೊತ್ತವನ್ನು ಕೊಡದೇ ಸತಾಯಿಸಲಾಗುತ್ತಿದೆ ಎಂದು ಗೀತಾ ಶಾಸ್ತ್ರಿ, ಗಣಪತಿ, ಎನ್.ಎಸ್. ಹೆಗಡೆ, ನಾರಾಯಣ ಹೆಗಡೆ, ಎಸ್.ಪಿ. ಹಂದೆ ಇತರರು ಆರೋಪಿಸಿದರು. ಸೊಸೈಟಿಯ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಅವರ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು. ಬರ್ಗದ್ದೆ ಸೊಸೈಟಿಯ ಸದಸ್ಯ ರೈತರು ಕುಮಟಾ ಕೆಡಿಸಿಸಿ ಬ್ಯಾಂಕಿನ ಶಾಖೆಯಿಂದ ತಲಾ ಎರಡು ವಿತ್​ಡ್ರಾ ಸ್ಲಿಪ್​ಗಳನ್ನು ಪಡೆದು ಸೊಸೈಟಿಗೆ ಕೊಟ್ಟಿದ್ದು ಮತ್ತು ರೈತರ ಮನೆ ಬಾಗಿಲಿಗೆ ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿಯೊಬ್ಬರು ಹಾಗೂ ಸೊಸೈಟಿ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಹೋಗಿ ವಿತ್​ಡ್ರಾ ಸ್ಲಿಪ್​ಗಳನ್ನು ಕೊಟ್ಟು ಒತ್ತಾಯಪೂರ್ವಕ, ಸುಳ್ಳು ಹೇಳಿ ಸಹಿ ಪಡೆದು ಬಂದಿದ್ದು, ಅನುಮಾನಕ್ಕೆ ಕಾರಣವಾಗಿದೆ.

ಬಹಳಷ್ಟು ರೈತರ ಖಾತೆಯಿಂದ ಲಕ್ಷಾಂತರ ರೂ. ವಿತ್​ಡ್ರಾ ಆಗಿದೆ. ಎಲ್ಲಿ ಹೋಯಿತು ಗೊತ್ತಿಲ್ಲ. ನಮ್ಮಿಂದ ಪಡೆದ ವಿತ್​ಡ್ರಾ ಸ್ಲಿಪ್​ಗಳನ್ನು ಮರಳಿಸಬೇಕು. ಇದಲ್ಲದೆ, ಕೆಲ ರೈತರು ಸಾಲ ಮಾಡಿ ಕಟ್ ಬಾಕಿ ಮಾಡಿರುವುದರಿಂದ ಉಳಿದ ರೈತರಿಗೆ ಸಾಲ ಕೊಡಲು ಬರುವುದಿಲ್ಲ ಎಂದು ಸೊಸೈಟಿಯಲ್ಲಿ ಹೇಳುತ್ತಾರೆ. ತಾಲೂಕಿನಲ್ಲಿ ಉಳಿದ ಸೊಸೈಟಿಗಳಲ್ಲಿ ಇಲ್ಲದ ಕಟ್ಟುಪಾಡು ಇಲ್ಲಿ ಮಾತ್ರ ಯಾಕೆ. ಬ್ಯಾಂಕ್ ಹಾಗೂ ಸೊಸೈಟಿಯವರು ಸೇರಿ ಇಲ್ಲಿನ ರೈತರನ್ನು ಬೀದಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವ್ಯವಸ್ಥಾಪಕಿ ಶಾಲಿನಿಯವರಿಗೆ ಹಾಗೂ ಸೊಸೈಟಿ ಆಡಳಿತ ಮಂಡಳಿಯವರಿಗೆ ರೈತರು ಒತ್ತಾಯಿಸಿದರು. ತಮ್ಮಿಂದಾದ ಲೋಪವನ್ನು ಒಪ್ಪಿಕೊಂಡ ಸೊಸೈಟಿ ಆಡಳಿತ ಮಂಡಳಿ ಅಧ್ಯಕ್ಷ ಮಾದೇವ ಗೌಡ, ಉಪಾಧ್ಯಕ್ಷ ಎಸ್.ಕೆ. ಹೆಗಡೆ ಅವರು ಸೊಸೈಟಿಯಲ್ಲಾದ ರೈತರ ಸಮಸ್ಯೆ ಕೂಡಲೆ ಬಗೆಹರಿಸುವ ಭರವಸೆ ನೀಡಿದರು. ಆದರೆ, ರೈತರ ಯಾವ ಸಂದೇಹಗಳಿಗೂ ಸಮರ್ಪಕ ಉತ್ತರ ನೀಡದೆ, ಬಳಿಕ ಪತ್ರಕರ್ತರ ಪ್ರಶ್ನೆಗಳಿಗೂ ಕೆಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಶಾಲಿನಿ ವರು ಉತ್ತರಿಸಲಿಲ್ಲ.

ತನಿಖೆಗೆ ಒತ್ತಾಯ
ಬ್ಯಾಂಕಿನ ಹೊರಕ್ಕೆ ಉಳಿತಾಯ ಖಾತೆಯ ವಿತ್​ಡ್ರಾ ಸ್ಲಿಪ್(ಸೆಲ್ಪ್ ಚೆಕ್)ಗಳ ಬಳಕೆ ಕಾನೂನು ಬಾಹಿರವಾದರೂ ರೈತರಿಂದ ಸಹಿ ಪಡೆದು ಸೊಸೈಟಿ ಹಾಗೂ ಬ್ಯಾಂಕಿನವರು ರೈತನ ಲಕ್ಷಾಂತರ ಹಣ ಡ್ರಾ ಮಾಡಿದ್ದು ತನಿಖೆಯಾಗಬೇಕು. ರೈತರು ಪಡೆದ ಸಾಲಕ್ಕೂ, ಅವರ ಖಾತೆಯಿಂದ ಋಣಿಸಲಾದ ಮೊತ್ತಕ್ಕೂ ಅಜಗಜಾಂತರವಿದೆ. ಯಾರ ಆದೇಶದ ಮೇರೆಗೆ ಇಂಥ ಕ್ರಮ ಕೈಗೊಳ್ಳಲಾಯಿತು. ಇದರಲ್ಲಿ ಬ್ಯಾಂಕ್ ಹಾಗೂ ಸೊಸೈಟಿಯ ಪಾತ್ರ ಸ್ಪಷ್ಟವಾಗಬೇಕು ಎಂದು ಕೆಲ ರೈತರು ಹಾಗೂ ಸಾರ್ವಜನಿಕರು ತನಿಖೆಗೆ ಒತ್ತಾಯಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا