Urdu   /   English   /   Nawayathi

ಸೈನೈಡ್ ಮೋಹನ್ ಆರೋಪ ಸಾಬೀತು

share with us

ಮಂಗಳೂರು: 13 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕಾಸರಗೋಡು ಪೈವಳಿಕೆಯ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೈನೈಡ್ ಮೋಹನ್ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ನ್ಯಾಯಾಧೀಶೆ ಸೈಯಿದುನ್ನಿಸ ಶುಕ್ರವಾರ ತೀರ್ಪು ಪ್ರಕಟಿಸಿದ್ದು, ಜುಲೈ 18ರಂದು ಶಿಕ್ಷೆ ಪ್ರಮಾಣ ಬಗ್ಗೆ ವಿಚಾರಣೆ ನಡೆಯಲಿದೆ. 

ಪ್ರಕರಣ ಹಿನ್ನೆಲೆ: ಕಾಸರಗೋಡು ಪೈವಳಿಕೆಯ 26 ವರ್ಷದ ಅವಿವಾಹಿತ ಯುವತಿಯೊಬ್ಬರನ್ನು ಸೈನೈಡ್ ಕಿಲ್ಲರ್ ಮೋಹನ್ ಕುಮಾರ್, ಸುಧಾಕರ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದ. ಆಕೆಯನ್ನು ಚಿನ್ನಾಭರಣ ಧರಿಸಿ ಮಂಗಳೂರಿಗೆ ಬರಲು ಹೇಳಿದ್ದ. ಅದರಂತೆ ಆಕೆ ಅತ್ತೆ ಪರಮೇಶ್ವರಿ ಜತೆ 2006 ಮಾರ್ಚ್ 20ರಂದು ಬಂದಿದ್ದರು. ಅತ್ತೆಯನ್ನು ಮನೆಗೆ ಕಳುಹಿಸಿ ಯುವತಿ ಮತ್ತು ಮೋಹನ್ ಮಡಿಕೇರಿಗೆ ತೆರಳಿದ್ದರು. ಅಲ್ಲಿ ಲಾಡ್ಜ್‌ನಲ್ಲಿ ಆಕೆ ಮೇಲೆ ಅತ್ಯಾಚಾರ ಮಾಡಿ ಮರುದಿನ ದೇವಸ್ಥಾನಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಆಕೆಯ ಚಿನ್ನಾಭರಣ ತೆಗೆದಿಟ್ಟು ಮಡಿಕೇರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕರೆ ತಂದಿದ್ದ. ಅಲ್ಲಿ ಗರ್ಭ ನಿರೋಧಕ ಮಾತ್ರೆ ಎಂದು ನಂಬಿಸಿ ಸೈನೈಡ್ ನೀಡಿದ್ದ. ಮಹಿಳೆಯರ ಶೌಚಗೃಹಕ್ಕೆ ತೆರಳಿ ಅದನ್ನು ಸೇವಿಸಿದ್ದ ಯುವತಿ ಅಲ್ಲೇ ಮೃತಪಟ್ಟಿದ್ದರು. ಈತ ಆಕೆಯ ಚಿನ್ನಾಭರಣ ಸಹಿತ ಪರಾರಿಯಾಗಿದ್ದ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮದುವೆಯಾಗಿ ಸುಖವಾಗಿರಬಹುದೆಂದು ನಂಬಿದ್ದ ಆಕೆ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿರಲಿಲ್ಲ. ಸೈನೈಡ್ ಮೋಹನ್ 2009 ಅ.21ರಂದು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆ ಸಂದರ್ಭ ವಿಚಾರಣೆ ವೇಳೆ ಪೈವಳಿಕೆಯ ಯುವತಿಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಬಳಿಕ ಮಂಜೇಶ್ವರ ಪೊಲೀಸ್ ಠಾಣೆಗೆ ಆತನನ್ನು ಕರೆದೊಯ್ದಿದ್ದರು. ಅಲ್ಲಿ ಯುವತಿಯ ಅತ್ತೆ ಪರಮೇಶ್ವರಿ ಆರೋಪಿಯನ್ನು ಗುರುತಿಸಿದ್ದರು.

41 ಸಾಕ್ಷಿ, 50 ದಾಖಲೆ, 42 ಸಾಂದರ್ಭಿಕ ಸಾಕ್ಷಿ
ಪ್ರಕರಣದಲ್ಲಿ 41 ಸಾಕ್ಷಿದಾರರು, 50 ದಾಖಲಾತಿ ಹಾಗೂ 42 ಸಾಂದರ್ಭಿಕ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಯುವತಿಯ ಚಿನ್ನಾಭರಣ ಖರೀದಿಸಿದವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದರು. ಅಪಹರಣ ಮತ್ತು ಅತ್ಯಾಚಾರ ಆರೋಪ ಸಾಬೀತಾಗಿಲ್ಲ. ಮೋಹನನ ಬಲೆಗೆ ಬಿದ್ದಿದ್ದ ಇಬ್ಬರು ಮಹಿಳೆಯರು ಬದುಕುಳಿದಿದ್ದಾರೆ. ಪ್ರತೀ ಪ್ರಕರಣಗಳಿಗೂ ಅವರನ್ನು ಸಾಕ್ಷಿದಾರರನ್ನಾಗಿಸಲಾಗಿದೆ. ವೈದ್ಯರ, ಲಾಡ್ಜ್‌ನವರ ಹೇಳಿಕೆ, ಕರೆ ಮಾಡಿದ ವಿವರ ಆರೋಪ ಸಾಬೀತಾಗಲು ಪ್ರಮುಖ ಕಾರಣವಾಗಿವೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದಿಸಿದ್ದರು.

ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ಆರೋಪಿ ಮೋಹನ್‌ನನ್ನು ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಆರೋಪಿ ಮೋಹನ್, ತಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾನೆ. ಸರ್ಕಾರದ ಪರವಾಗಿ ವಕೀಲರನ್ನು ನೇಮಿಸಿಕೊಳ್ಳುವಂತೆ ನ್ಯಾಯಾಧೀಶರು ಮೋಹನ್ ತಿಳಿಸಿದ್ದಾರೆ. ಅದಕ್ಕೆ ಆತ ನಿರಾಕರಿಸಿದ್ದು, ನಾನೇ ಸ್ವಯಂ ವಾದ ಮುಂದುವರಿಸುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا