Urdu   /   English   /   Nawayathi

‘ರಾಜ್ಯಪಾಲರು ಬಿಜೆಪಿ ಏಜಂಟರಾಗಿದ್ದಾರೆ’ : ಗುಂಡೂರಾವ್ ಗಂಭೀರ ಆರೋಪ

share with us

ಬೆಂಗಳೂರು: 10 ಜುಲೈ 2019 (ಫಿಕ್ರೋಖಬರ್ ಸುದ್ದಿ) ರಾಜ್ಯಪಾಲ ವಜುಬಾಯಿ ವಾಲಾ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ಕುಮಾರ ಕೃಪ ಅತಿಥಿ ಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜಭವನವನ್ನು ತನ್ನ ಪಕ್ಷದ ಕಚೇರಿಯಂತೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜೀನಾಮೆ ನೀಡಿದ ಕಾಂಗ್ರೆಸ್-ಜೆಡಿಎಸ್ ಶಾಸಕರ ಜತೆ ಮಾತುಕತೆ ನಡೆಸುವ ವೇಳೆ ರಾಜ್ಯಪಾಲರು ನಗರ ಪೊಲೀಸ್ ಆಯುಕ್ತರನ್ನು ಕರೆಸಿಕೊಂಡಿದ್ದೇಕೆ ? ರಾಜೀನಾಮೆ ಪತ್ರಗಳನ್ನು ಶೀಘ್ರ ಇತ್ಯರ್ಥಪಡಿಸಿ ಎಂದು ಸ್ಪೀಕರ್ ಅವರಿಗೆ ಪತ್ರ ಬರೆದಿರುವುದೇಕೆ ? ಇದಲ್ಲವನ್ನು ನೋಡಿದರೆ ರಾಜ್ಯಪಾಲರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದನ್ನು ಖಂಡಿಸಿ ನಾವು ಇಂದು ರಾಜಭವನದ ಮುಂದೆ ಪ್ರತಿಭಟಿಸುತ್ತೇವೆ ಎಂದು ಹೇಳಿದರು. 

# ಬಿಜೆಪಿಗೆ ಬಲಿಯಾಗಲಿರುವ ಅತೃಪ್ತ ಶಾಸಕರು: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಬಿಜೆಪಿ ಬಲಿ ತಗೆದುಕೊಳ್ಳುತ್ತಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರು ಅನರ್ಹಗೊಂಡ ನಂತರ ಅವರನ್ನು ಯಾರೂ ಕೇಳುವವರಿಲ್ಲ. ಅಮಿತ್ ಶಾ ಕೂಡ ಕೈಗೆ ಸಿಗುವುದಿಲ್ಲ. ಅನರ್ಹಗೊಂಡ ಬಳಿಕ ಸರತಿ ಸಾಲಿನಲ್ಲಿ ನಿಂತು ಕಷ್ಟ ಹೇಳಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಈಗಲಾದರೂ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ಬಿಜೆಪಿಯ ಸಂಚಿಗೆ ಬಲಿಯಾಗಬೇಡಿ ಎಂದು ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರಿಗೆ ಮನವಿ ಮಾಡಿದರು. 

# ಕೆ.ಜಿ.ಬೋಪಯ್ಯ-ರಮೇಶ್‍ಕುಮಾರ್ ನಡುವೆ ಹೋಲಿಕೆ ಸರಿಯಲ್ಲ:
ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಹಿರಿಯ ಮುತ್ಸದ್ಧಿ ನಾಯಕ. ತಾವು ಸಂವಿಧಾನ ಬದ್ಧವಾಗಿ, ನಿಷ್ಪಕ್ಷಪಾತವಾಗ ನಡೆದುಕೊಳ್ಳುವಲ್ಲಿ ಅವರು ಹೆಸರುವಾಸಿ. ವಿಧಾನಸಭೆ ಅಧಿವೇಶನದಲ್ಲಿ ಸಚಿವರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಪಕ್ಷಪಾತವಿಲ್ಲದೆ ಕಾರ್ಯ ನಿರ್ವಹಿಸಿದ್ದು ಎಲ್ಲರಿಗೂ ಗೊತ್ತಿದೆ. ಈ ಹಿಂದಿನ ಸ್ಪೀಕರ್ ಆಗಿದ್ದ ಕೆ.ಜೆ.ಬೋಪಯ್ಯ ಹಾಗೂ ರಮೇಶ್‍ಕುಮಾರ್ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಬೋಪಯ್ಯ ಅವರು ಸ್ಪೀಕರ್‍ಆಗಿದ್ದಾಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದರು. ಪಕ್ಷೇತರ ಶಾಸಕರನ್ನೂ ಅನರ್ಹಗೊಳಿಸಿದ್ದರು. ಅನರ್ಹಗೊಂಡವರು ಒಂದು ವರ್ಷ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆದ್ದು ಬಂದರು. ಹಾಲಿ ಸ್ಪೀಕರ್ ರಮೇಶ್‍ಕುಮಾರ್ ಅವರು ಯಾವ ಒತ್ತಡಕ್ಕೂ ಮಣಿಯದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ವ್ಯಕ್ತಿ. ಅವರ ವಿರುದ್ಧ ಬಿಜೆಪಿ ಆರೋಪ ಮಾಡುತ್ತಿರುವುದು, ಸುಪ್ರೀಂಕೋರ್ಟ್‍ಗೆ ಹೋಗುವುದಾಗಿ ಹೇಳುತ್ತಿರುವುದು ಹತಾಶದ ಪ್ರತೀಕ ಎಂದು ಟೀಕಿಸಿದರು. ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿರುವುದು ಮತ್ತೊಬ್ಬೆ ಜಗತ್‍ಜ್ಜಾಹೀರವಾಗಿದೆ. ಮುಂಬೈನ ಹೋಟೆಲ್‍ನಲ್ಲಿ ತಂಗಿರುವ ಶಾಸಕರನ್ನು ಭೇಟಿ ಮಾಡಲು ಸಚಿವ ಡಿ.ಕೆ.ಶಿವಕುಮಾರ್ ಅವರು ತೆರಳಿದ್ದಾರೆ. ಅವರಿಗೆ ಅಲ್ಲಿನ ಬಿಜೆಪಿ ಸರ್ಕಾರ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಭಾಗಿಯಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದರ ಹಿಂದಿದ್ದಾರೆ ಎಂದು ಆರೋಪಿಸಿದರು. ದೇಶಾದ್ಯಂತ ಪ್ರತಿಪಕ್ಷಗಳನ್ನು ನಿರ್ನಾಮ ಮಾಡಲು ಮೋದಿ ಅವರು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬ್ಲಾಕ್ ಮೇಲೆ, ಬೆದರಿಕೆ ತಂತ್ರಿಗಾರಿಕೆ ಮೂಲಕ ವಿರೋಧ ಪಕ್ಷದ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಹ್ವಾನವನ್ನು ಒಪ್ಪಿ ಹೋದವರು ಸಾಚಾಗಳು ಎಂಬುವಂತೆ ಬಿಂಬಿಸಲಾಗುತ್ತದೆ. ವಿರೋಧ ಮಾಡುವವರನ್ನು ಆದಾಯ ತೆರಿಗೆ, ಸಿಬಿಐ, ಇಡಿ ಮೂಲಕ ಬೆದರಿಸಲಾಗುತ್ತಿದೆ. ಇದನ್ನು ನೋಡಿದರೆ ದೇಶ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂಬ ಆತಂಕವಾಗುತ್ತಿದೆ. ವ್ಯವಸ್ಥೆಯನ್ನು ಹಾಳು ಮಾಡಿ ಪ್ರಜಾಪ್ರಭೂತ್ವವನ್ನು ನಿರ್ನಾಮ ಮಾಡಲು ಬಿಜೆಪಿ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ರಾಜೀನಾಮೆ ನೀಡಿದ ಶಾಸಕರನ್ನು ಏರ್ ಪೋರ್ಟ್ ನಲ್ಲಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಆಹ್ವಾನಿಸುತ್ತಾರೆ. ಅಲ್ಲಿಂದ ಬಿಜೆಪಿ ನಾಯಕರು ಬುಕ್ ಮಾಡಿದ ವಿಮಾನದ ಮೂಲಕ ಮುಂಬೈಗೆ ಕರೆದುಕೊಂಡು ಹೋಗುತ್ತಾರೆ. ಮುಂಬೈನಲ್ಲಿ ಬಿಜೆಪಿ ನಾಯಕರೇ ಬುಕ್ ಮಾಡಿ ಶಾಸಕರಿಗೆ ಊಟ, ವಸತಿ ವ್ಯವಸ್ಥೆ ಮಾಡುತ್ತಾರೆ. ಆದರೂ ಬಿಜೆಪಿ ನಾಯಕರು ನಮಗೂ ಆಪರೇಷನ್ ಕಮಲಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾರೆ ಎಂದು ಲೇವಡಿ ಮಾಡಿದರು. ಆಪರೇಷನ್ ಕಮಲಕ್ಕೆ ಬಳಕೆಯಾದ ದುಡ್ಡನ್ನು ಕೊಟ್ಟವರು ಯಾರು ಎಂದು ದಿನೇಶ್‍ಗುಂಡೂರಾವ್ ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಮುಂಬೈನ ರಿಸೈನಸ್ಸ್ ಹೋಟೆಲ್‍ನಲ್ಲಿ ರೂಂ ಬುಕ್ ಮಾಡಿಕೊಂಡಿದ್ದಾರೆ. ಆದರೆ ಅವರನ್ನು ಹೋಟೆಲ್ ಒಳಕ್ಕೆ ಬಿಡಲು ಮಹಾರಾಷ್ಟ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಹೋಟೆಲ್ ಹೊರಗೆ ಅಲ್ಲಿನ ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಇದೆಲ್ಲಾ ಬೆಳವಣಿಗೆಗಳು ಸಾಂವಿಧಾನಿಕ ವಿರೋಧಿ ಎಂದು ದಿನೇಶ್ ಆಕ್ರೋಶ ವ್ಯಕ್ತಪಡಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا