Urdu   /   English   /   Nawayathi

ಮುಂದುವರೆದ ಬೃಹನ್ನಾಟಕ, ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ಕೈಗೊಂಡ ನಿರ್ಧಾರವೇನು ಗೊತ್ತೇ..?

share with us

ಬೆಂಗಳೂರು: 09 ಜುಲೈ 2019 (ಫಿಕ್ರೋಖಬರ್ ಸುದ್ದಿ) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 13 ಮಂದಿ ಶಾಸಕರ ಪೈಕಿ ಐವರ ರಾಜೀನಾಮೆ ಕ್ರಮಬದ್ಧವಾಗಿದ್ದು, ಉಳಿದ ಎಂಟು ಶಾಸಕರ ರಾಜೀನಾಮೆಗಳು ಕ್ರಮಬದ್ಧವಾಗಿಲ್ಲ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕ್ರಮಬದ್ಧವಾಗಿರದ ಶಾಸಕರಿಗೆ ತಿಳುವಳಿಕೆಯ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ, ನಾರಾಯಣಗೌಡ, ಗೋಪಾಲಯ್ಯ ಅವರ ರಾಜೀನಾಮೆಗಳು ಕ್ರಮಬದ್ಧವಾಗಿವೆ. ಅವರಿಗೆ ಜುಲೈ 12ರಂದು ಹಾಜರಾಗಿ ರಾಜೀನಾಮೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯ ಅವರಿಗೆ ಜು.15ರಂದು ಹಾಜರಾಗುವಂತೆ ಸೂಚಿಸಲಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ಈಗಾಗಲೇ ನೀಡಿರುವ ಹಳೆಯ ದೂರನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತಿತರರ ವಿರುದ್ದ ನೀಡಿರುವ ದೂರಿನ ವಿಚಾರಣೆಯನ್ನು ಜು.11ರಂದು ನಡೆಸಲಾಗುವುದು ಎಂದರು. ಜು.6ರಂದು ಮಧ್ಯಾಹ್ನ 12 ಗಂಟೆಯವರೆಗೂ ತಾವು ಕಚೇರಿಯಲ್ಲೇ ಇದ್ದುದ್ದಾಗಿ ಹೇಳಿದ ಅವರು, ಅಲ್ಲಿಯವರೆಗೂ ಯಾವ ಶಾಸಕರು ಬಂದಿಲ್ಲ, ಬರುವುದಾಗಿಯೂ ಸಮಯ ಕೇಳಿರಲಿಲ್ಲ. ತಾವು ಕಚೇರಿಯಿಂದ ಹೊರಹೋದ ನಂತರ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗೆ ಕೊಟ್ಟು ಸ್ವೀಕೃತಿ ಪಡೆದಿದ್ದಾರೆ. ಸಾರ್ವಜನಿಕರಿಂದಲೂ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿವೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ದೂರು ನೀಡಿ ರಾಜೀನಾಮೆ ಅಂಗೀಕರಿಸದೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಎಲ್ಲದರ ಬಗ್ಗೆಯೂ ವಿಚಾರಣೆ ನಡೆಸಿದ ನಂತರವೇ ಸಂವಿಧಾನಕ್ಕೆ ಅಪಚಾರವಾಗದಂತೆ ಜನರ ಭಾವನೆಗೆ ತಕ್ಕಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆ ರೀತಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಪಕ್ಷೇತರ ಶಾಸಕರಾದ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಪತ್ರ ಬರೆದಿದ್ದಾರೆ ಹಾಗೆಯೇ ಪಕ್ಷೇತರ ಶಾಸಕರಾಗಿದ್ದ ಆರ್. ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆಯೂ ತಮಗೆ ಪತ್ರ ಬರೆದಿದ್ದಾರೆ. ಸಚಿವರ ರಾಜೀನಾಮೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ರಾಜ್ಯಪಾಲರ ಗಮನಕ್ಕೂ ತರಲಾಗಿದೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 13 ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಪರಿಶೀಲಿಸುವಂತೆ ತಮಗೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ರಾಜ್ಯಪಾಲರಿಗೂ ಪತ್ರ ಬರೆದು ಆ ಶಾಸಕರು ಯಾರು ಕೂಡ ಖುದ್ದಾಗಿ ತಮ್ಮನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ತಿಳಿಸಿದರು. ಶಾಸಕ ರೋಷನ್ ಬೇಗ್ ಅವರು ಖುದ್ದು ತಮ್ಮನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.  ಶಾಸಕ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಅದನ್ನು ಕಾನೂನು ಬದ್ದವಾಗಿಯೇ ಪರಿಶೀಲಿಸಲಾಗಿತ್ತು. ಇದರಲ್ಲಿ ಯಾವುದನ್ನು ಮುಚ್ಚಿಡುವಂಥದ್ದೇನೂ ಇಲ್ಲ ಎಂದರು. ಆರ್.ಶಂಕರ್ ಅವರು ಕಾಂಗ್ರೆಸ್‍ನ ಸಹಸದಸ್ಯತ್ವ ಪಡೆದಿದ್ದಾರೆ ಅವರ ವಿರುದ್ಧವೂ ಪಕ್ಷಾಂತರ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‍ನಿಂದ ದೂರು ಬಂದಿದ್ದು, ಇದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. 12ರಂದು ಅಧಿವೇಶನ ಆರಂಭವಾಗಬೇಕಿದ್ದು, ಅದು ಅದರ ಪಾಡಿಗೆ ನಡೆಯಲಿದೆ ಎಂದು ಅಧಿವೇಶನದ ಬಗ್ಗೆ ರಮೇಶ್‍ಕುಮಾರ್ ಪ್ರತಿಕ್ರಿಯಿಸಿದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا