Urdu   /   English   /   Nawayathi

ವರುಣನ ಆರ್ಭಟಕ್ಕೆ ತತ್ತರಿಸಿದ ಜನ

share with us

ಕಾರವಾರ: 01 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ವಿವಿಧೆಡೆ ಹಾನಿಯೂ ಸಂಭವಿಸಿದೆ. ವಿದ್ಯುತ್ ಕಂಬ, ವಾಹನ, ಮನೆಗಳ ಮೇಲೆ ಮರಗಳು ಮುರಿದು ಬಿದ್ದಿವೆ. ರಸ್ತೆ ಬಿರುಕು ಬಿಟ್ಟಿವೆ. 30 ರಂದು ಬೆಳಗ್ಗೆ 10 ರಿಂದ ಮೂರು ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಕೆಲವೆಡೆ ಮಳೆಯಾಗಿದೆ. ಭಾನುವಾರ ಬೆಳಗಿನ ವರದಿಯಂತೆ ಜಿಲ್ಲೆಯಲ್ಲಿ ಸರಾಸರಿ 47.75 ಮಿ.ಮೀ. ಮಳೆಯಾಗಿದೆ. ಅಂಕೋಲಾದಲ್ಲಿ 52.6, ಹಳಿಯಾಳದಲ್ಲಿ 61.6, ಕಾರವಾರದಲ್ಲಿ 53.2, ಮುಂಡಗೋಡಿನಲ್ಲಿ 50.6, ಶಿರಸಿಯಲ್ಲಿ 19, ಯಲ್ಲಾಪುರದಲ್ಲಿ 85.2, ಭಟ್ಕಳದಲ್ಲಿ 48, ಹೊನ್ನಾವರದಲ್ಲಿ 64.1, ಕುಮಟಾದಲ್ಲಿ 42.6, ಸಿದ್ದಾಪುರದಲ್ಲಿ 40.2, ಜೊಯಿಡಾದಲ್ಲಿ 48.8 ಮಿಮೀ ಮಳೆಯಾಗಿದೆ. ಅಣೆಕಟ್ಟೆಗಳಿಗೆ ಒಳಹರಿವು: ಜಿಲ್ಲೆಯ ಅಣೆಕಟ್ಟೆಗಳಿಗೆ ಉತ್ತಮ ಒಳಹರಿವು ಪ್ರಾರಂಭವಾಗಿದೆ. ಸೂಪಾ ಅಣೆಕಟ್ಟೆಗೆ 28,284 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕದ್ರಾ ಅಣೆಕಟ್ಟೆಗೆ 6,706 ಕ್ಯೂಸೆಕ್, ಕೊಡಸಳ್ಳಿ ಅಣೆಕಟ್ಟೆಗೆ 3,993 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ರಸ್ತೆ ಸಂಚಾರ ಅಸ್ತವ್ಯಸ್ತ: ಯಲ್ಲಾಪುರ ತಾಲೂಕಿನಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಮಳೆ ಜೋರಾಗಿ ಸುರಿದಿದ್ದು, ಹಳ್ಳಗಳಲ್ಲಿ ನೀರಿನ ಹರಿವು ಆರಂಭವಾಗಿದೆ. ಪಟ್ಟಣದ ಉದ್ಯಮ ನಗರದ ತಟಗಾರ ರಸ್ತೆಯ ಮೇಲೆ ಹಳ್ಳದಂತೆ ನೀರು ಹರಿದು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. 

ರಸ್ತೆ ಪಕ್ಕ ಚರಂಡಿ ಸಮರ್ಪಕವಾಗಿ ಇಲ್ಲದೇ ಕೊಳಚೆ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರು ಪರದಾಡುವಂತಾಯಿತು. ಕಳೆದ ವರ್ಷವೂ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಾಗಿತ್ತು. ಸ್ಥಳೀಯರ ಮನವಿ, ಹೋರಾಟದ ನಂತರ ಕಾಟಾಚಾರಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವಚ್ಛತೆ ಹಾಗೂ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಮಾಡಿದ್ದರು. ಈ ವರ್ಷ ಮಳೆಗಾಲದಲ್ಲಿ ಮತ್ತದೇ ಸ್ಥಿತಿ ತಲೆದೋರಿದ್ದು, ಸ್ಥಳೀಯರ ಕಷ್ಟ ಮಾತ್ರ ದೂರವಾಗಿಲ್ಲ. ಆಟೋ ಮೇಲೆ ಬಿದ್ದ ಮರ ಭಟ್ಕಳ ತಾಲೂಕಿನ ಕಾಯ್ಕಿಣಿ ಪಂಚಾಯಿತಿ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಆಟೋ ರಿಕ್ಷಾ ಭಾಗಶಃ ಜಖಂ ಆಗಿದ್ದು, ಚಾಲಕ ಸುರೇಶ ಶೆಟ್ಟಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮರ ಬಿದ್ದ ಪರಿಣಾಮ ಗಂಟೆಗೂ ಅಧಿಕ ಕಾಲ ಸಂಚಾರ ವ್ಯತ್ಯಯವಾಗಿತ್ತು. 11 ಕೆವಿ ವಿದ್ಯುತ್ ತಂತಿ ಮುರಿದು ಬಿದ್ದು ಆತಂಕದ ಸ್ಥಿತಿ ನಿರ್ವಣವಾಗಿತ್ತು. ಪಂಚಾಯಿತಿ ಸಿಬ್ಬಂದಿ ಮರ ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಟ್ರಾನ್ಸ್​ಫಾರ್ಮರ್​ಗೆ ಹಾನಿ: ಮುರ್ಡೆಶ್ವರದ ಆರ್​ಎನ್​ಎಸ್ ಡಿಪ್ಲೊಮಾ ಕಾಲೇಜ್ ಬಳಿ ಮರ ಬಿದ್ದು ಟ್ರಾನ್ಸ್​ಫಾರ್ಮರ್​ಗೆ ಹಾನಿಯಾಗಿದೆ. ಪಟ್ಟಣದ ಕೋಟೇಶ್ವರ ರಸ್ತೆಯ ವಿದ್ಯುತ್ ಕಂಬ ಮುರಿದಿದೆ. ಒಟ್ಟು 5 ಕಂಬ, ವಿದ್ಯುತ್ ಟ್ರಾನ್ಸ್​ಫಾರ್ಮರ್​ಗೆ ಧಕ್ಕೆಯಾಗಿದ್ದು, 2 ಲಕ್ಷ 20 ಸಾವಿರ ರೂ. ಹಾನಿ ಅಂದಾಜಿಸಲಾಗಿದೆ. ಜೊಯಿಡಾ ತಾಲೂಕಿನ ಕುಂಬಾರವಾಡಾ (ಕಾತೇಲಿ) ಗ್ರಾಪಂ ವ್ಯಾಪ್ತಿಯ ಗೊಡಸೇತ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಬುಡ ಸಮೇತ ಕಿತ್ತು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ಅಪಾರ ಹಾನಿ ಸಂಭವಿಸಿದೆ. ಗೋಡಸೇತ ಗ್ರಾಮದ ಪಾಂಡುರಂಗ ವಳಣೊ ಕುಮಗಾಳಕರ ಮತ್ತು ವಿಠಲ ಮಹಾದೇವ ಕುಮಗಾಳಕರ ಅವರ ಮನೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಸ್ತೆ ಮೇಲೆ ಹರಿದ ಗಟಾರ ನೀರು: ಕುಮಟಾ ತಾಲೂಕಿನಾದ್ಯಂತ ಶನಿವಾರ ರಾತ್ರಿ ಹಾಗೂ ಭಾನುವಾರ ಮಧ್ಯಾಹ್ನದ ವರೆಗೂ ಉತ್ತಮ ಮಳೆಯಾಗಿದೆ. ಗಟಾರು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು. ಹೆರವಟ್ಟಾ ಭಾಗದಲ್ಲಿ ಶನಿವಾರದಿಂದಲೇ ಒಳಚರಂಡಿ ಕಾಮಗಾರಿಯ ಪೈಪ್​ಲೈನ್ ಉದ್ದಕ್ಕೂ ಅಲ್ಲಲ್ಲಿ ನೆಲ ಕುಸಿದು ಹೊಂಡ ಉಂಡಾಗಿದ್ದವು. ಗುತ್ತಿಗೆದಾರರು ಜೆಸಿಬಿ ಮೂಲಕ ಮಣ್ಣು, ಜಲ್ಲಿ ತುಂಬಿ ಹೊಂಡ ಮುಚ್ಚಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ಕೃಷಿಕರಲ್ಲಿ ಉತ್ಸಾಹ ಮೂಡಿದ್ದು ಬೇಸಾಯ ಚಟುವಟಿಕೆ ಚುರುಕುಗೊಂಡಿದೆ. ಮಳೆಯಿಂದ ತಾಲೂಕಿನ ತರಕಾರಿ ಬೆಳೆಗಾರರಿಗೂ ಅನುಕೂಲವಾಗಿದೆ.

ಹೆದ್ದಾರಿ ಕುಸಿಯುವ ಅಪಾಯ: ಕುಮಟಾ ತಾಲೂಕಿನ ದಿವಗಿ ಸನಿಹದ ತಂಡ್ರಕುಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾಗಿದ್ದ ಬಿರುಕಿಗೆ ಐಆರ್​ಬಿನವರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಮಳೆ ಜೋರಾದರೆ ಹೆದ್ದಾರಿ ಕುಸಿಯುವ ಅಪಾಯವಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಕೆಲ ದಿನಗಳ ಹಿಂದೆ ತಂಡ್ರಕುಳಿಯಲ್ಲಿ ಚತುಷ್ಪಥಕ್ಕಾಗಿ ಕಡಿದ ಗುಡ್ಡದಿಂದ ಇಳಿದ ಮಳೆ ನೀರು ಹೆದ್ದಾರಿ ಮೇಲೆಯೇ ಹರಿದು ಕೆಳಗಿನ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಈ ಸಂದರ್ಭದಲ್ಲಿ ಹೆದ್ದಾರಿಯ ಅಂಚು ಕೊರೆದು ಹೋಗಿದ್ದು, ವಾಹನ ಸವಾರರು ರಸ್ತೆಯ ಬದಿಗೆ ಸಾಗದಂತೆ ತಡೆ ಹಾಕಲಾಗಿತ್ತು. ಬಳಿಕ ಹೆದ್ದಾರಿಯಲ್ಲಿ ಸಾಕಷ್ಟು ಬಿರುಕುಗಳು ಕಾಣಿಸಿಕೊಂಡಿದ್ದರಿಂದ ಹೆದ್ದಾರಿಯ ಕೆಳಭಾಗದ ಧರೆಗೆ ಕಾಮಗಾರಿ ನಿರ್ವಹಿಸುತ್ತಿರುವ ಐಆರ್​ಬಿನವರು ದೊಡ್ಡ ಕಲ್ಲುಗಳನ್ನು ಆಸರೆಯಾಗಿ ರಾಶಿ ಹಾಕಿ ತಾತ್ಕಾಲಿಕ ದುರಸ್ತಿ ಮಾಡಿದ್ದಾರೆ. ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಸ್ಥಳೀಯರು, ಕಳೆದ ಎರಡು ದಿನಗಳಿಂದ ಮಳೆ ಜೋರಾಗಿ ಬೀಳುತ್ತಿರುವುದರಿಂದ ರಸ್ತೆಯ ಬಿರುಕುಗಳಲ್ಲಿ ಮಳೆ ನೀರು ಇಳಿದು ಕುಸಿಯುವ ಸಾಧ್ಯತೆ ಇದೆ. ಒಂದೊಮ್ಮೆ ಹೆದ್ದಾರಿ ಕುಸಿದರೆ ಇಲ್ಲಿ ಸಂಪೂರ್ಣವಾಗಿ ರಾ.ಹೆ. ಬಂದ್ ಆಗುವ ಸಾಧ್ಯತೆ ಇದೆ. ಸಾಕಷ್ಟು ಸಮಸ್ಯೆ ಸೃಷ್ಟಿಯಾಗಬಹುದು. ಚತುಷ್ಪಥ ಕಾಮಗಾರಿಯಿಂದಾಗಿ ತಂಡ್ರಕುಳಿಯಲ್ಲಿ ನೆಮ್ಮದಿಯ ಬದುಕಿಲ್ಲದಂತಾಗಿದೆ. ಕಾಮಗಾರಿಯ ಅಸಮರ್ಪಕತೆಯಿಂದ ತಂಡ್ರಕುಳಿಯ ಜನ ಮಾತ್ರವಲ್ಲದೇ ಸುತ್ತಮುತ್ತಲಿನ ಜನತೆ ಕೂಡಾ ಸಂಕಟ ಎದುರಿಸಬೇಕಾಗಬಹುದು ಎಂದು ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا