Urdu   /   English   /   Nawayathi

11 ವಾರ್ಡ್​ಗಳಿಗೆ ಇಂದು ಮತದಾನ

share with us

ಭಟ್ಕಳ: 29 ಮೇ 2019 (ಫಿಕ್ರೋಖಬರ್ ಸುದ್ದಿ) ಚುನಾವಣೆ ನಡೆಯುತ್ತಿರುವ ಪುರಸಭೆಯ 23 ವಾರ್ಡ್​ಗಳ ಪೈಕಿ ಈಗಾಗಲೇ 12 ವಾರ್ಡ್ ಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 11 ವಾರ್ಡ್​ಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅಭ್ಯರ್ಥಿಗಳು ಗೆಲುವಿಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ. 29ರಂದು ಮತದಾನ ನಡೆಯಲಿದ್ದು, 31ರಂದು ಫಲಿತಾಂಶ ಬರಲಿದೆ. ಅಭ್ಯರ್ಥಿಗಳಿಗೆ ಒಂದೊಂದು ಮತವೂ ಅಮೂಲ್ಯವಾಗಿದೆ. ಹೀಗಾಗಿ, ಮನೆಮನೆಗೆ ತೆರಳಿ ಜಾತಿ ಆಧಾರದಲ್ಲೂ ಮತ ಯಾಚಿಸುತ್ತಿದ್ದಾರೆ. ಉದ್ಯೋಗ, ವ್ಯಾಸಂಗ ಅಥವಾ ಇತರ ಕಾರಣದಿಂದ ಹೊರ ಊರಿನಲ್ಲಿದ್ದವರನ್ನು ಸಹ ಮತದಾನದ ದಿನ ಊರಿಗೆ ಬರುವಂತೆ ವಿನಂತಿಸಿದ್ದು, ಈ ಮನವಿಗೆ ಓಗೊಟ್ಟು ಸಾಕಷ್ಟು ಜನ ಈಗಾಗಲೇ ಆಗಮಿಸಿದ್ದಾರೆ. ಮತದಾನ ನಡೆಯಲಿರುವ 11 ಸ್ಥಾನಗಳ ಪೈಕಿ ಬಿಜೆಪಿ 9ರಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್- ಜೆಡಿಎಸ್ ತಲಾ 2 ಸ್ಥಾನಗಳಲ್ಲಿ ಪೈಪೋಟಿ ನೀಡುತ್ತಿದೆ.

ಭರವಸೆಯ ಮಹಾಪೂರ: ಚುನಾವಣೆಗೆ ಬಿಜೆಪಿ ಭರ್ಜರಿಯಾದ ಪ್ರಣಾಳಿಕೆ ರೂಪಿಸಿದೆ. ತಂಜೀಂ ಸಂಸ್ಥೆಯ ಏಕಾಧಿಪತ್ಯಕ್ಕೆ ಬ್ರೇಕ್ ಹಾಕಲು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದೆ. ಹಲವು ವರ್ಷಗಳಿಂದ ಹೂಳು ತುಂಬಿರುವ ಚೌಥನಿ, ಮೂಡಭಟ್ಕಳ ನದಿಗಳ ಹೂಳೆತ್ತಿ ಚೆಕ್ ಡ್ಯಾಂ ನಿರ್ವಿುಸುವ, ಶರಾಬಿ ನದಿ ನೀರು ಶುದ್ಧೀಕರಿಸಿ ಕೃಷಿ ಬಳಕೆಗೆ ಯೋಜನೆ ರೂಪಿಸುವ, ಕಾಳಿಕಾಂಬಾ ದೇವಸ್ಥಾನದ ಎದುರಿನ ರಸ್ತೆಗೆ ಒಳಚರಂಡಿ ನಿರ್ವಿುಸುವ, ಜಾತಿ ಮತ ಭೇದವಿಲ್ಲದೆ ಪುರಸಭೆ ವ್ಯಾಪ್ತಿಯ ವಾರ್ಡ್​ಗಳನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಬಿಜೆಪಿ ನೀಡಿದೆ. ಭರವಸೆಗಳನ್ನು ನೀಡುವಲ್ಲಿ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. ಪ್ರಾಮಾಣಿಕ- ಪಾರದರ್ಶಕ ಆಡಳಿತ, ಮೂಲಸೌಕರ್ಯ ಕಲ್ಪಿಸುವಲ್ಲಿ ಆದ್ಯತೆ, ಶುದ್ಧ ಕುಡಿಯುವ ನೀರು, ಬೀದಿ ದೀಪಗಳ ಅಳವಡಿಕೆ, ವ್ಯವಸ್ಥಿತ ರಸ್ತೆ ಮತ್ತು ಚರಂಡಿ ನಿರ್ವಣ, ಹಂದಿ, ಬಿಡಾಡಿ ನಾಯಿಗಳಿಂದ ಮುಕ್ತಿ, ಅಂತರ್ಜಲ ಹೆಚ್ಚಿಸುವಲ್ಲಿ ವಿಶೇಷ ಯೋಜನೆಗಳ ಅನುಷ್ಠಾನ ಮಾಡುವ ಪ್ರಣಾಳಿಕೆ ಸಿದ್ಧಪಡಿಸಿ ಮತದಾರರಿಗೆ ನೀಡಿದೆ. ಪಕ್ಷೇತರರು ತಾವು ಹಿಂದೆ ಮಾಡಿದ ಸಾಧನೆಗಳನ್ನು ಬಿಂಬಿಸಿ ಮುಂದೆಯೂ ನಿರಂತರ ಅಭಿವೃದ್ಧಿ ಮಾಡುವುದಾಗಿ ಮತದಾರರ ಮನ ಗೆಲ್ಲಲು ಶ್ರಮಿಸುತ್ತಿದ್ದಾರೆ. ವಾರ್ಡ್​ಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಜೆಡಿಎಸ್ ಹೇಳುತ್ತಿದೆ.

13 ಮತಗಟ್ಟೆಗಳ ಸ್ಥಾಪನೆ: ಭಟ್ಕಳ ಪುರಸಭೆಯ 11 ವಾರ್ಡ್​ಗಳಿಗೆ 29ರಂದು ಮತದಾನ ನಡೆಯಲಿದೆ. 9 ವಾರ್ಡ್​ಗಳಲ್ಲಿ ತಲಾ ಒಂದು, ವಾರ್ಡ್ ನಂ. 10 ಮತ್ತು 19ರಲ್ಲಿ ಒಂದೊಂದು ಮತಗಟ್ಟೆ ಜತೆಗೆ ತಲಾ ಒಂದು ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 13 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 11 ಮತಗಟ್ಟೆಗಳಲ್ಲಿ 11,226 ಮತದಾರರಿದ್ದು, ಒಟ್ಟು 27 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಾಂತಿಯುತ ಚುನಾವಣೆಗೆ ಆಯೋಗ ಸೂಕ್ತ ಕ್ರಮ ಕೈಗೊಂಡಿದ್ದು, ಮತದಾನ ನಡೆಯುವ ಸ್ಥಳಗಳಲ್ಲಿ ಅಗತ್ಯ ಭದ್ರತೆ ಒದಗಿಸಿದೆ. ಡಿವೈಎಸ್​ಪಿ ವೆಲೈಂಟೆನ್ ಡಿಸೋಜಾ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ಕೈಗೊಂಡಿದ್ದಾರೆ. 31ರಂದು ಭಟ್ಕಳ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا