Urdu   /   English   /   Nawayathi

ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವ

share with us

ಮಡಿಕೇರಿ: 25 ಮೇ 2019 (ಫಿಕ್ರೋಖಬರ್ ಸುದ್ದಿ) ಭೂಕುಸಿತ ಹಾಗೂ ಪ್ರವಾಹದ ನಂತರ ಚೇತರಿಸಿಕೊಳ್ಳುತ್ತಿರುವ ಕೊಡಗಿನಲ್ಲಿ, ಗುರುವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಈ ರೀತಿಯ ಅನುಭವವಾಗಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ನೆಲ್ಯಹುದಿಕೇರಿ, ನಲ್ವತ್ತೆಕ್ರೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಮಳೆಯಾಗಿದ್ದು, ಆ ಸಂದರ್ಭದಲ್ಲಿ ಭೂಮಿಯೂ ಕಂಪಿಸಿದೆ. ಮನೆಯಲ್ಲಿದ್ದ ಪಾತ್ರೆ ಹಾಗೂ ಇತರ ವಸ್ತುಗಳು ಅಲುಗಾಡಿದವು ಎಂದು ಸ್ಥಳೀಯ ನಿವಾಸಿ ಅರ್ಚನಾ ತಿಳಿಸಿದರು. ದಕ್ಷಿಣ ಕೊಡಗು ವ್ಯಾಪ್ತಿಯ ಕುರ್ಚಿ, ಪೊನ್ನಂಪೇಟೆ, ಕಾನೂರು, ಬಾಳೆಲೆ, ಮಾಯಮುಡಿ, ನಾಲ್ಕೇರಿ, ಕಳತ್ಮಾಡು, ಕೋಟೂರು, ಬಲ್ಯಮಂಡೂರು, ತೂಚಮಕೇರಿ ವ್ಯಾಪ್ತಿಯಲ್ಲಿ ರಾತ್ರಿ ಭೂಮಿಯ ಒಳಗಿನಿಂದಲೇ ಜೋರಾದ ಶಬ್ದ ಕೇಳಿಬಂದಿದೆ. ಕುರ್ಚಿ ಗ್ರಾಮದಲ್ಲಿ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾತ್ರಿ 10 ಗಂಟೆಯ ತನಕವೂ ವಿವಿಧೆಡೆ ಹಂತ ಹಂತವಾಗಿ ಶಬ್ದ ಕೇಳಿಸುವ ಜತೆಗೆ ಸಣ್ಣ ಪ್ರಮಾಣದ ಕಂಪನವಾಗಿದೆ. ಇದೇ ಸಮಯದಲ್ಲಿ ದಕ್ಷಿಣ ಕೊಡಗಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯೂ ಸುರಿದಿದೆ. ಬಾಳೆಲೆಯಲ್ಲಿ ಬೇಕರಿ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದಾಗಿ ಸ್ಥಳೀಯರು ತಿಳಿಸಿದರು. ಕಳೆದ ವರ್ಷದ ಜುಲೈ 8ರಂದು ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ, ಶಾಂತಳ್ಳಿ, ಬೆಟ್ಟದಳ್ಳಿ, ಮಕ್ಕಂದೂರು ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಬಳಿಕ ಆಗಸ್ಟ್‌ನಲ್ಲಿ ಮಹಾಮಳೆಗೆ ಕೊಡಗಿನಲ್ಲಿ ಭೂಕುಸಿತದ ದುರಂತ ನಡೆದಿತ್ತು. ‘ಗಾಳಿಬೀಡು, ಕುಶಾಲನಗರ ಸಮೀಪದ ಹಾರಂಗಿ ಜಲಾಶಯ, ಮಂಡ್ಯದ ಕೆಆರ್‌ಎಸ್‌ನಲ್ಲಿ ಅಳವಡಿಸಿರುವ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿಲ್ಲ. 1ಕ್ಕಿಂತ ಹೆಚ್ಚಿನ ತೀವ್ರತೆಯಿದ್ದರೆ ಮಾತ್ರ ದಾಖಲಾಗಲಿದೆ. ಗುಡುಗಿನ ತೀವ್ರತೆಗೆ ಈ ರೀತಿ ಆಗಿರಲೂಬಹುದು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು. ‘ರಾಜ್ಯ ನೈಸರ್ಗಿಕ ವಿಪತ್ತು ಕೇಂದ್ರದ 14 ಭೂಕಂಪನ ವೀಕ್ಷಣಾಲಯದಿಂದ ಮಾಹಿತಿ ಪಡೆದು ಪರಿಶೀಲಿಸಲಾಗಿದ್ದು ಕಂಪನದ ಪ್ರಮಾಣವು ಎಲ್ಲೂ ದಾಖಲಾಗಿಲ್ಲ. ಇದು ಸ್ಥಳೀಯ ಕಂಪನವಾಗಿದ್ದು ಬಹುದೂರದ ತನಕ ವಿಸ್ತರಣೆ ಆಗಿಲ್ಲ. ತೀವ್ರತೆ ಕಡಿಮೆಯಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ. 

ಅಧಿಕಾರಿಗಳ ಭೇಟಿ: ನೆಲ್ಯಹುದಿಕೇರಿ, ನಲ್ವತ್ತೆಕ್ರೆ ಭಾಗದಲ್ಲಿ ಭೂಮಿ ಕಂಪಿಸಿದ ಸ್ಥಳಕ್ಕೆ ಅಮ್ಮತ್ತಿ ಹೋಬಳಿ‌ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಸಹಾಯಕ ಕೃಷ್ಣ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.  

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا