Urdu   /   English   /   Nawayathi

ಹೈಟೆನ್ಷನ್ ತಂತಿಗೆ ಬಾಲಕ ಬಲಿ; ಬಿಬಿಎಂಪಿಯಿಂದ 5 ಲಕ್ಷ ರೂ. ಪರಿಹಾರ

share with us

ಬೆಂಗಳೂರು: 20 ಮೇ (ಫಿಕ್ರೋಖಬರ್ ಸುದ್ದಿ) ಹೈಟೆನ್ಷನ್ ವಿದ್ಯುತ್‍ ತಂತಿ ತಗುಲಿ ಮೃತಪಟ್ಟ ಮತ್ತಿಕೆರೆಯ 14 ವರ್ಷದ ನಿಖಿಲ್ ಎಂಬ ಬಾಲಕನಿಗೆ 5 ಲಕ್ಷ ರೂ. ಪರಿಹಾರ ನೀಡುವ ಜೊತೆಗೆ, ಆಸ್ಪತ್ರೆಯ ವೆಚ್ಚವನ್ನು ಕೂಡ ಬಿಬಿಎಂಪಿಯೇ ಭರಿಸಲಿದೆ ಎಂದು ಬಿಬಿಎಂಪಿ ಆಯುಕ್ತ ಎಂ.ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಹೈಟೆನ್ಷನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ತಂತಿಯಿಂದ 4 ಮೀಟರ್ ಅಂತರ ಕಾಯ್ದುಕೊಂಡು ಕಟ್ಟಡ ನಿರ್ಮಿಸಬೇಕು ಎಂಬ ನಿಯಮವಿದ್ದರೂ, ಹಲವು ಪ್ರದೇಶಗಳಲ್ಲಿ ಈ ನಿಯಮವನ್ನು ಪಾಲಿಸಲಾಗಿಲ್ಲ. ಇದರ ವಿರುದ್ಧ ಶಾಶ್ವತ ಕ್ರಮ ಕೈಗೊಳ್ಳುವ ಸಂಬಂಧ ವಿದ್ಯುತ್ ಪ್ರಸರಣಾ ನಿಗಮ ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು. ಬೆಂಗಳೂರು ನಗರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ತೆರವುಗೊಳಿಸುವ ನೆಲದಡಿಯ ತಂತಿಗಳನ್ನು ಅಳವಡಿಸಲು ಬೆಸ್ಕಾಂಗೆ ಸರ್ಕಾರ ಆದೇಶ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಳ್ಳತ್ತಿದ್ದಂತೆ ಈ ಕಾರ್ಯ ಆರಂಭಗೊಳ್ಳಲಿದೆ . ಆದರೆ, ಹೈಟೆನ್ಷನ್ ತಂತಿಗಳನ್ನು ಕೂಡ ನೆಲದಡಿಯಲ್ಲೇ ಅಳವಡಿಸುವ ಸಾಧ‍್ಯತೆಗಳ ಕುರಿತು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು. ಹೈಟೆನ್ಷನ್ ತಂತಿ ಹಾದು ಹೋಗಿರುವ ಭೂಮಿಯನ್ನು ಸರ್ಕಾರವೇ ಸ್ವಾಧೀನಪಡಿಸಿಕೊಂಡು, ಭೂಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಆಗ ಆ ಭೂಮಿಯನ್ನು ಕಟ್ಟಡ ನಿರ್ಮಾಣ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲು ಸಾಧ್ಯ. ಈ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದರು. ಮತ್ತಿಕೆರೆಯ ನಿವಾಸಿ ರಮಾದೇವಿ ಹಾಗೂ ಅಂಬರೀಶ್ ದಂಪತಿಯ ಪುತ್ರ ನಿಖಿಲ್ 9 ನೇ ತರಗತಿ ಓದುತ್ತಿದ್ದ. ಕಳೆದ ಗುರುವಾರ ಮನೆಯ ಬಳಿ ಸ್ನೇಹಿತರೊಡನೆ ಕ್ರಿಕೆಟ್ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಚೆಂಡು ಹೋಗಿತ್ತು. ಈ ವೇಳೆ ಅದನ್ನು ತರಲು ಹೋಗಿದ್ದ ನಿಖಿಲ್, ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದಿದ್ದ. ತಕ್ಷಣ ಬಾಲಕನನ್ನು ಸ್ಥಳೀಯರು ಹಾಗೂ ಪೋಷಕರು ರಾಮಯ್ಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ನಿಖಿಲ್‍ಗೆ ಶೇ.40 ರಷ್ಟು ಸುಟ್ಟ ಗಾಯಗಳಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಖಿಲ್ ವಾಸಿಸುತ್ತಿದ್ದ ಪ್ರದೇಶ ಸುಮಾರು 40 ರಿಂದ 50 ವರ್ಷ ಹಳೆಯದಾಗಿದ್ದು, ಹೈ ಟೆನ್ಷನ್ ವಿದ್ಯುತ್ ತಂತಿಯ ಕೆಳಭಾಗದಲ್ಲಿನ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮನೆಯ ಟೆರೇಸ್ ಮೇಲೆ 5-6 ಅಡಿಯ ಎತ್ತರದಲ್ಲಿ ಹೈಟೆನ್ಸನ್ ತಂತಿಗಳು ಹಾದು ಹೋಗಿದೆ. ಕೆಪಿಟಿಸಿಎಲ್ ನಿಯಮದ ಪ್ರಕಾರ, ವಿದ್ಯುತ್ ತಂತಿ ಹಾಗೂ ಕಟ್ಟಡದ ನಡುವೆ, ಕನಿಷ್ಠ 20 ಅಡಿಗಳಷ್ಟು ಅಂತರವಿರಬೇಕು. ಈ ಕುರಿತು ನಿಗಮ ಈಗಾಗಲೇ ಕಟ್ಟಡ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿದೆ. ಆದರೆ, ನಿವಾಸಿಗಳಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا