Urdu   /   English   /   Nawayathi

ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ, 95 ಲಕ್ಷ ರೂ ನಗದು ವಶ

share with us

ಬೆಂಗಳೂರು: 15 ಮೇ (ಫಿಕ್ರೋಖಬರ್ ಸುದ್ದಿ) ಶಾಂತಿ ನಗರದ ಲ್ಯಾಂಗ್‌ಪೋರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಮಡಿವಾಳದಲ್ಲಿನ ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಹಾಗೂ ಯಂತ್ರ ಸರಿಪಡಿಸುವ ಸೆಕ್ಯೂರ್ ವಾಲ್ಯೂ ಎಂಬ ಕಂಪನಿಯಲ್ಲಿ ಸುಮಾರು 6 ವರ್ಷದಿಂದ ಕಸ್ಟೋಡಿಯನ್ ಕೆಲಸ ಮಾಡುತ್ತಿದ್ದ ಕಿಶೋರ್ (28) ಎಂಬಾತ ತನ್ನ ಸ್ನೇಹಿತ ರಾಕೇಶ್ (37) ಎಂಬಾತನೊಂದಿಗೆ ಎಟಿಎಂ ರಿಪೇರಿ ಮಾಡುವ ನೆಪದಲ್ಲಿ ಐಸಿಐಸಿಐ ಬ್ಯಾಂಕ್ ಎಟಿಎಂನಿಂದ 47.38 ಲಕ್ಷ ರೂ. ಹಾಗೂ ಆರ್.ಬಿ.ಎಲ್ ಎಟಿಎಂನಿಂದ 51.30 ಲಕ್ಷ ರೂ ನಗದು ಸೇರಿ ಒಟ್ಟು 99,13,000 ರೂ. ಹಣ ಕಳ್ಳತನ ಮಾಡಿದ್ದ ಎಂದು ಆಯುಕ್ತರು ತಿಳಿಸಿದರು. ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಇಶಾ ಪಂತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಮಡಿವಾಳ ಉಪವಿಭಾಗದ ಎಸಿಪಿ ಜಿ.ಯು.ಸೋಮೇಗೌಡ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ಬೊಮ್ಮನಹಳ್ಳಿಯ ಕಿಶೋರ್ ಮನೆಯಿಂದ 47,83,000 ರೂ. ನಗದು ಹಾಗೂ ಬೇಗೂರಿನ ರಾಕೇಶ್ ಮನೆಯಿಂದ 17,17,000 ರೂ. ನಗದು ಸೇರಿ ಒಟ್ಟು 95 ಲಕ್ಷ ರೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ರಾಕೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ವಾಹನ ಖರೀದಿಗಾಗಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೇ ಆತ ಸಂಕಷ್ಟಕ್ಕೆ ಸಿಲುಕಿದ್ದು, ಕಿಶೋರ್ ಆತನಿಗೆ ಸಹಾಯ ಮಾಡುವ ಭರವಸೆ ನೀಡಿದ್ದ. ಇಬ್ಬರೂ ಯೋಜನೆ ರೂಪಿಸಿ ಎಟಿಎಂ ಕಳ್ಳತನಕ್ಕೆ ಇಳಿದಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا