Urdu   /   English   /   Nawayathi

20 ವರ್ಷಗಳ ಬಳಿಕ ಪೊಲೀಸರ ವಶಕ್ಕೆ ಮರಗಳ್ಳ ’ತೆಲಂಗಾಣದ ವೀರಪ್ಪನ್‌’

share with us

ಹೈದರಾಬಾದ್‌: 13 ಮೇ (ಫಿಕ್ರೋಖಬರ್ ಸುದ್ದಿ) ಮರ ಕಳ್ಳತನದಿಂದ ‘ತೆಲಂಗಾಣದ ವೀರಪ್ಪನ್‌’ ಎಂದೇ ಕುಖ್ಯಾತನಾಗಿರುವ ಯೆಡ್ಲ ಶ್ರೀನಿವಾಸ ಅಲಿಯಾಸ್‌ ಶ್ರೀನು ಪೊಲೀಸರ ಬಲೆಗೆ ಬಿದ್ದಿದ್ದಾನೆ. ರಾಜ್ಯದಲ್ಲಿ ಮರಗಳ ಕಡಿಯುವಿಕೆ ಅವ್ಯಾಹತವಾಗಿ ನಡೆಯುತ್ತಿರುವುದನ್ನು ತೆಲಂಗಾಣ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ತಂಡ ಕಟ್ಟಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಶ್ರೀನಿವಾಸ, ನಿರಂತರವಾಗಿ ಮರಗಳ ಕಳ್ಳ ಸಾಗಾಣಿಕೆ ನಡೆಸುತ್ತಿದ್ದ. ಸುಮಾರು 20 ವರ್ಷಗಳಿಂದ ತೆಲಂಗಾಣ, ಆಂಧ್ರ ‍ಪ್ರದೇಶ, ಚತ್ತೀಸ್‌ಗಢ ಹಾಗೂ ಮಹಾರಾಷ್ಟ್ರದ ಕಾಡುಗಳಲ್ಲಿ ಮರಗಳನ್ನು ಕಡಿದು ಸಾಗಿಸುತ್ತಿದ್ದ. ಕಾಡಿನ ಮರಗಳನ್ನು ಬರಿದು ಮಾಡುವ ಮೂಲಕ ತೆಲಂಗಾಣದ ವೀರಪ್ಪನ್‌ ಎಂದು ಕರೆಸಿಕೊಂಡ ಶ್ರೀನಿವಾಸನನ್ನು ಪೆಡಪಲ್ಲಿ ಜಿಲ್ಲೆಯ ರಾಮಗುಂಡಂನಲ್ಲಿ ಬಂಧಿಸಲಾಗಿದೆ. ’ಮರಗಳ ನಾಶ ತಡೆಯಲು ಅತಿ ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ, ಮರ ಕಳ್ಳತನ ತಡೆಗೆ ಶೀಘ್ರ ಗಮನ ಹರಿಸಬೇಕು ಹಾಗೂ ರಾಜಕೀಯ ಪ್ರಭಾವವಿದ್ದರೂ ಸೂಕ್ತ ಕ್ರಮವಹಿಸುವಂತೆ ಪೊಲೀಸರು, ಅರಣ್ಯ ಇಲಾಖೆಗೆ ಸೂಚಿಸಿತ್ತು’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೆಡ್ಲ ಶ್ರೀನು ಮತ್ತು ಆತನ ಇಬ್ಬರು ಪ್ರಮುಖ ಸಹಚರರನ್ನು ಬಂಧಿಸಿರುವುದಾಗಿ ರಾಮಗುಂಡಂ ಪೊಲೀಸ್‌ ಕಮಿಷನರ್‌ ಸತ್ಯನಾರಾಯಣ ಹೇಳಿದ್ದಾರೆ. ಈ ಬಗ್ಗೆ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. 

ತೆಲಂಗಾಣ ಒಂದರಲ್ಲಿಯೇ ಶ್ರೀನು ಮೇಲೆ ಕನಿಷ್ಠ 20 ಪ್ರಕರಣಗಳು ದಾಖಲಾಗಿವೆ. ಮರಗಳ ಸಾಗಣೆಗೆ ಹಲವು ಬಾರಿ ಎತ್ತಿನ ಬಂಡಿಗಳನ್ನೂ ಬಳಸಿರುವ ಆತ ಇಪ್ಪತ್ತು ವರ್ಷಗಳಿಂದ ಪೊಲೀಸರಿಗೆ ಸಿಗದಂತೆ ಮರಗಳ ಕಳ್ಳ ಸಾಗಣೆ ನಡೆಸುತ್ತಿದ್ದ. ಬಹಳಷ್ಟು ಸಂದರ್ಭಗಳಲ್ಲಿ ಪೊಲೀಸರು ಎತ್ತಿನ ಗಾಡಿಗಳನ್ನು ಪರಿಶೀಲಿಸದೆಯೇ ಕಳಿಸಿದ್ದಿದೆ ಹಾಗೂ ಸ್ಥಳೀಯ ರೈತರು, ಕುರಿಗಾಹಿಗಳು ಮತ್ತು ದನ ಮೇಯಿಸುವವರನ್ನು ಬೆದರಿಸಿರುವ ಶ್ರೀನು ಮರ ಕಡಿಯುವ ಬಗ್ಗೆ ಸುಳಿವು ಹೊರ ಹೋಗದಂತೆ ನೋಡಿಕೊಂಡಿದ್ದಾನೆ. ಈವರೆಗೂ ಆತ ಮರಗಳಿಂದ ಗಳಿಸಿಕೊಂಡಿರುವ ಹಣದ ಲೆಕ್ಕ ಇನ್ನಷ್ಟೇ ಸಿಗಬೇಕಿದೆ. ಚುನಾವಣೆ ಸಂದರ್ಭಗಳಲ್ಲಿ ಆತ ಅಭ್ಯರ್ಥಿ ಪರ ಅಥವಾ ಒಂದು ರಾಜಕೀಯ ಪಕ್ಷದ ಪರವಾಗಿ ಗ್ರಾಮಗಳಲ್ಲಿ ಹಣ ಹಂಚಿಕೆ ಮಾಡುತ್ತಿದ್ದ ಎಂದು ಸತ್ಯನಾರಾಯಣ ಹೇಳಿದ್ದಾರೆ. ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮರ ಕೊಯ್ಯುವ ಕಾರ್ಖಾನೆಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆತ, ಕಾಡು ತೇಗ ಮರಗಳ ಪೂರೈಕೆ ಮಾಡುತ್ತಿದ್ದ. ಶ್ರೀನು ದಂಧೆಗೆ ಕೈಜೋಡಿಸಿರುವ ಆ ಕಾರ್ಖಾನೆಗಳ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا