Urdu   /   English   /   Nawayathi

ಫೋನಿ ಪೀಡಿತ ಒಡಿಶಾಗೆ ಪ್ರಧಾನಿಯಿಂದ 1 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ

share with us

ಭುವನೇಶ್ವ: 06 ಮೇ (ಫಿಕ್ರೋಖಬರ್ ಸುದ್ದಿ) ಫೋನಿ ಚಂಡಮಾರುತದಿಂದ ತೀವ್ರವಾಗಿ ನಲುಗಿರುವ ಒಡಿಶಾ ರಾಜ್ಯಕ್ಕೆ 1,000 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲಿಯೇ ಕೇಂದ್ರದ ತಂಡವೊಂದು ರಾಜ್ಯಕ್ಕೆ ಆಗಮಿಸಿ ಒಟ್ಟಾರೆ ಪರಿಸ್ಥಿತಿಯನ್ನು ಪರಾಮರ್ಶಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ. ಪೋನಿ ಚಂಡಮಾರುತದಿಂದ ಉಂಟಾಗುವ ಭಾರಿ ಪ್ರಮಾಣದ  ಹಾನಿಯನ್ನು ತಡೆಯಲು ರಾಜ್ಯ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಹಾಗೂ ಪೂರ್ವ ಸಿದ್ಧತೆಗಾಗಿ ಪ್ರಧಾನಿ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರನ್ನು ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಹವನ ಉತ್ತಮಮಟ್ಟದಲ್ಲಿತ್ತು. ತಾವು ಕೂಡಾ ರಾಜ್ಯದ ಪರಿಸ್ಥಿತಿಯ ಮೇಲೆ ಸತತ ನಿಗಾ ಇರಿಸಿದ್ದಾಗಿ, ಸರ್ಕಾರದ ಪ್ರತಿಯೊಂದು ಸೂಚನೆಯನ್ನು ಒಡಿಶಾ ಜನರು ಕಟ್ಟುನಿಟ್ಟಾಗಿ ಪಾಲಿಸಿರುವುದು ಅಭಿನಂದನಾರ್ಹ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಡಿಶಾದಲ್ಲಿ  ಬಿರುಸಿನ ಚುನಾವಣಾ ಪ್ರಚಾರದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಅವರ ನಡುವಣ ಮೊದಲ ಭೇಟಿ ಇದಾಗಿದೆ. ಕಳೆದ 43 ವರ್ಷಗಳಲ್ಲಿ ಮೊದಲ ಬಾರಿಗೆ ಸಂಭವಿಸಿರುವ ಅಪರೂಪದಲ್ಲಿ ಅಪರೂಪದ ಬೇಸಿಗೆ ಫೋನಿ ಚಂಡಮಾರುತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದ್ದು. ವಿದ್ಯುತ್, ದೂರಸಂಪರ್ಕ ಹಾಗೂ ಕುಡಿಯುವ ನೀರು ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಚಂಡಮಾರುತದಿಂದ ನಲುಗಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಲು ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭುವನೇಶ್ವರಕ್ಕೆ ಭೇಟಿ ನೀಡಿದ್ದರು. ಪುರಿ, ಖರ್ದಾ, ಕಟಕ್, ಜಗತ್ ಸಿಂಗ ಪುರ್, ಜೈಪುರ್, ಕೇಂದ್ರಪಾರಾ, ಭದ್ರಕ್ ಹಾಗೂ ಬಾಲ್ ಸೋರ್ ಜಿಲ್ಲೆಗಳಲ್ಲಿ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್, ಕೇಂದ್ರ ಸಚಿವವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಿದರು. ವಿಮಾನ ನಿಲ್ದಾಣದಲ್ಲಿ ಅವರು, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಪರಿಹಾರ ಹಾಗೂ ಪುನರ್ ನಿರ್ಮಾಣ ಕಾರ್ಯಗಳ ಪ್ರಗತಿಯ ಬಗ್ಗೆ ಪರಾಮರ್ಶೆ ನಡೆಸಿದರು. ಇಂಟರ್ ನೆಟ್ ಕಡಿತಗೊಂಡಿರುವ ಕಾರಣ ಬ್ಯಾಂಕಿಂಗ್ ಸೇವೆ ಸಂಪೂರ್ಣ ಆಯೋಮಯ ಸ್ಥಿತಿ ತಲುಪಿದೆ. ಎಲ್ಲ ಎಟಿಎಂಗಳು ಬಂದ್ ಆಗಿವೆ. ಫೋನಿ ಚಂಡಮಾರುತದಿಂದ ಕರಾವಳಿ ಪ್ರದೇಶ ಭಾಗಗಳು ನಲುಗಿದ್ದು, ಸುಮಾರು 1 ಕೋಟಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ 10 ಸಾವಿರ ಗ್ರಾಮಗಳು ಹಾಗೂ 52 ಪಟ್ಟಣ ಪ್ರದೇಶಗಳಲ್ಲಿ  ವ್ಯಾಪಕ  ಪರಿಹಾರ ಹಾಗೂ  ಪುನರ್ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದೆ. ಕಳೆದ 43 ವರ್ಷಗಳಲ್ಲಿ ಅಪರೂಪದಲ್ಲಿ ಅಪರೂಪದ್ದಾದ ಬೇಸಿಗೆ ಚಂಡಮಾರುತ ಒಡಿಶಾದಲ್ಲಿ ಬೀಸಿದ್ದು, ಕಳೆದ 150 ವರ್ಷಗಳಲ್ಲಿ ಮೂರನೇ ಬೇಸಿಗೆ ಚಂಡಮಾರುತವಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಹೇಳಿದ್ದಾರೆ. ಸುಮಾರು 1.2 ದಶಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಅತಿದೊಡ್ಡ ಐತಿಹಾಸಿಕ  ಸವಾಲನ್ನು ಒಡಿಶಾ ಸರ್ಕಾರ ಎದುರಿಸಬೇಕಾಯಿತು ಎಂದು ಹೇಳಿದರು. ಚಂಡಮಾರುತದಿಂದ ನಾಶವಾಗಿರುವ ಮನೆಗಳನ್ನು ವಸತಿ ಯೋಜನೆಯಡಿ ನಿರ್ಮಿಸಿಕೊಡಲಾಗುವುದು. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಹಾನಿ ಹಾಗೂ ಜಾನುವಾರು, ಮಿನುಗಾರಿಕೆ ಸಂಪನ್ಮೂಲದ ನಷ್ಟವನ್ನು  ಅಂದಾಜು ಮಾಡಿ ಅದರಂತೆ ಪರಿಹಾರ ಕಲ್ಪಿಸಲಾಗುವುದು. ಪರಿಹಾರ ಹಾಗೂ ಪುನರ್ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರ ಯುದ್ಧೋಪಾದಿಯಲ್ಲಿ ಅರಣ್ಯ ಬೆಳಸುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا