Urdu   /   English   /   Nawayathi

ಕಾರಿನ ಸ್ಟೆಪ್ನಿಯಲ್ಲಿದ್ದ 2.3 ಕೋಟಿ ಅಪ್ಪಾಜಿಗೌಡರ ಹಣ

share with us

ಬೆಂಗಳೂರು/ಶಿವಮೊಗ್ಗ: 23 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಕಾರಿನ ಸ್ಟೆಪ್ನಿಯಲ್ಲಿ ಬೆಂಗಳೂರಿನಿಂದ ಸಾಗಿಸುತ್ತಿದ್ದ 2.3 ಕೋಟಿ ಹಣ ಭದ್ರಾವತಿಯ ಜೆಡಿಎಸ್‌ ಮುಖಂಡ ಎಂ.ಜೆ.ಅಪ್ಪಾಜಿಗೌಡರಿಗೆ ಸೇರಿದ್ದಾಗಿ ದೃಢಪಟ್ಟಿದ್ದು, ಐ.ಟಿ ಅಧಿಕಾರಿಗಳು ಅವರನ್ನು ಸೋಮವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಶನಿವಾರ ಕಾರು ಬೆಂಗಳೂರಿನಿಂದ ಹೊರಡುತ್ತಿದ್ದಂತೆ ಐ.ಟಿ ಅಧಿಕಾರಿಗಳು ಸಿನಿಮಾ ಶೈಲಿಯಲ್ಲಿ ಹಿಂದಿನಿಂದ ಹಿಂಬಾಲಿಸಿದರು. ಭಾರಿ ವೇಗದಲ್ಲಿದ್ದ ಕಾರನ್ನು ನೆಲಮಂಗಲ ಬಳಿ ಅಡ್ಡಗಟ್ಟಲಾಯಿತು. ತಪಾಸಣೆ ಮಾಡಿದಾಗ ಸ್ಟೆಪ್ನಿಯಲ್ಲಿ 2 ಸಾವಿರ ಮುಖಬೆಲೆಯ 2.3 ಕೋಟಿ ಪತ್ತೆಯಾಯಿತು ಎಂದು ಮೂಲಗಳು ಹೇಳಿವೆ. ‘ಕಾರಿನ ಮಾದರಿ, ಸಂಖ್ಯೆ ಹಾಗೂ ಬಣ್ಣ ಕುರಿತು ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಿ ಮೂರ್ನಾಲ್ಕು ಕಾರುಗಳಲ್ಲಿ ಹಿಂಬಾಲಿಸಿತ್ತು’ ಎಂದೂ ಮೂಲಗಳು ತಿಳಿಸಿವೆ. ಆನಂತರ, ಪಂಕ್ಚರ್‌ ಹಾಕುವ ಮೆಕಾನಿಕ್‌ಗಳನ್ನು ಕರೆತಂದು ಟೈರ್‌ ಮೇಲ್ಭಾಗವನ್ನು ಕತ್ತರಿಸಿ ನೋಟಿನ ಕಂತೆಗಳನ್ನು ಹೊರ ತೆಗೆಯಲಾಯಿತು. ಕಾರಿನ ಚಾಲಕ ಮತ್ತು ಆತನ ಜೊತೆಯಲ್ಲಿದ್ದವರನ್ನು ಪ್ರಶ್ನಿಸಲಾಯಿತು. ಅವರ ಮಾಹಿತಿ ಆಧರಿಸಿ ಈ ಹಣ ಅಪ್ಪಾಜಿಗೌಡರಿಗೆ ಸೇರಿದ್ದು ಎಂಬ ತೀರ್ಮಾನಕ್ಕೆ ಐ.ಟಿ ಇಲಾಖೆ ಬಂದಿದೆ. ಟೈರ್‌ ಕೊಯ್ಯುವಾಗ ನಡೆಸಿದ ವಿಚಾರಣೆ ವೇಳೆ ಮಾಯಿ, ಶರಣ್‌, ಇಮ್ರಾನ್‌ ಮತ್ತು ರಾಧಾಕೃಷ್ಣ ಹೆಸರುಗಳು ಪ್ರಸ್ತಾಪವಾಗಿವೆ. ಇವರಿಗೂ ವಿಚಾರಣೆಗೆ ಬರುವಂತೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಅಪ್ಪಾಜಿಗೌಡರ ವಿಚಾರಣೆ: ಈ ಮಧ್ಯೆ, ಅಪ್ಪಾಜಿಗೌಡರನ್ನು ಸೋಮವಾರ ಮೂರೂವರೆ ತಾಸು ವಿಚಾರಣೆ ನಡೆಸಲಾಯಿತು. ಹಣ ಸಾಗಿಸುತ್ತಿದ್ದ ಕಾರಿನಲ್ಲಿದ್ದ ಗಿರೀಶ್ ಎಂಬುವರು ನೀಡಿದ ಮಾಹಿತಿ ಆಧರಿಸಿ ಶಿವಮೊಗ್ಗ ಐ.ಟಿ ಕಚೇರಿಗೆ ಅವರನ್ನು ಕರೆಸಲಾಗಿತ್ತು. ಶಿವಮೊಗ್ಗ ಗೋಪಾಲಗೌಡ ಬಡಾವಣೆ ಮುಖ್ಯರಸ್ತೆಯ ಆದಾಯ ತೆರಿಗೆ ಭವನಕ್ಕೆ ಮಧ್ಯಾಹ್ನ 12.20ಕ್ಕೆ ಬಂದ ಅಪ್ಪಾಜಿಗೌಡ ಅವರನ್ನು ಅಧಿಕಾರಿಗಳು ಹಲವು ಸುತ್ತು ವಿಚಾರಣೆ ನಡೆಸಿದರು. ಮಧ್ಯಾಹ್ನ ಊಟಕ್ಕೂ ಬಿಡುವು ನೀಡದೆ ಮಾಹಿತಿ ಕಲೆಹಾಕಿದರು.

ಕಾರ್ಯಕರ್ತರ ಆಕ್ರೋಶ: ಚುನಾವಣೆ ಮುನ್ನಾ ದಿನ ತಮ್ಮ ನಾಯಕರನ್ನು ವಿಚಾರಣೆ ನೆಪದಲ್ಲಿ ಕರೆಸಿಕೊಂಡ ಐಟಿ ಅಧಿಕಾರಿಗಳ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಮತದಾನ ನಡೆಯುವ ಹಿಂದಿನ ದಿನ ಬಹು ಮಹತ್ವದ್ದು. ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಬಾರದು ಎಂದೇ ಬಿಜೆಪಿ ಇಂತಹ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಚಿಕ್ಕೋಡಿಯಲ್ಲಿ ದಾಳಿ: ಬೆಳಗಾವಿಯ ಬಿಜೆಪಿ ಸಂಸದ ಸುರೇಶ ಅಂಗಡಿ ಆಪ್ತರು, ಸಂಬಂಧಿಕರ ಮನೆಗಳ ಮೇಲೆ ಐ.ಟಿ. ದಾಳಿ ನಡೆದಿದೆ.

*
ಹಣ ನನಗೇ ಸೇರಿದ್ದು. ಬೆಂಗಳೂರಿನ ಎಚ್‌ಬಿಆರ್‌ ಬಡಾವಣೆಯಲ್ಲಿದ್ದ ನಿವೇಶನ ಮಾರಿದ್ದೆ. ಹತ್ತು ತಿಂಗಳ ಹಿಂದೆ ವ್ಯವಹಾರ ನಡೆದಿತ್ತು. ಆ ಹಣವನ್ನು ಈಗ ತರಲಾಗುತಿತ್ತು.
-ಅಪ್ಪಾಜಿಗೌಡ, ಜೆಡಿಎಸ್‌ ಮಾಜಿ ಶಾಸಕ

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا