Urdu   /   English   /   Nawayathi

ಮೋದಿ ಮರು ಆಯ್ಕೆ ಬಯಸಿದ ಪಾಕ್‌ ಪ್ರಧಾನಿಗೆ ಒವೈಸಿ ತಿರುಗೇಟು

share with us

ಹೈದ್ರಾಬಾದ್‌: 11 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಲೋಕಸಭಾ ಚುನಾವಣೆಗಳ ಬಳಿಕ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮರು ಆಯ್ಕೆಯಾದರೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿ ಮಾತುಕತೆ ಪುನರಾರಂಭಗೊಳ್ಳಬಹುದು ಹಾಗೂ ಈ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯಬಹುದು ಎಂದು ಹೇಳಿಕೆ ನೀಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಎ.ಐ.ಎಂ.ಐ.ಎಂ. ಪಕ್ಷದ ಮುಖಂಡ ಹಾಗೂ ಹೈದ್ರಾಬಾದ್‌ ಕ್ಷೇತ್ರದ ಸಂಸದ ಅಸಾದುದ್ದೀನ್‌ ಒವೈಸಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೈದ್ರಾಬಾದಿನಲ್ಲಿ ಇಂದು ಮತ ಚಲಾಯಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ‘ಇಮ್ರಾನ್‌ ಖಾನ್‌ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಭಾರತದಂತಹ ಭವ್ಯ ಪ್ರಜಾಪ್ರಭುತ್ವ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲು ನಿಮಗೆ ಯಾವುದೇ ಹಕ್ಕಿಲ್ಲ. ನನ್ನ ದೇಶದಲ್ಲಿ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಯುತ್ತದೆ ಆದರೆ ನಿಮ್ಮ ಪಾಕಿಸ್ಥಾನದಲ್ಲಿ ಸೇನೆ ಹಾಗೂ ಗುಪ್ತಚರ ಏಜೆನ್ಸಿ ಚುನಾವಣಾ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ ಎಂದೂ ನಮಗೆ ತಿಳಿದಿದೆ. ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಿ ಮರು ಆಯ್ಕೆ ಆದ್ರೆ ಕಾಶ್ಮೀರ ಸಮಸ್ಯೆ ಪರಿಹಾರ ಕಾಣಬಹುದು ಎಂದು ಹೇಳಿರುವುದು ತಪ್ಪು. ಕಾಶ್ಮೀರ ಯಾರೊಬ್ಬರ ಖಾಸಗಿ ಆಸ್ತಿಯೂ ಅಲ್ಲ ಎಂದು ನಿಮಗೆ ನಾನು ನೆನಪಿಸಲು ಬಯಸುತ್ತೇನೆ…’ ಎಂದು ಹೇಳುವ ಮೂಲಕ ಇಮ್ರಾನ್‌ ಖಾನ್‌ ಹೇಳಿಕೆಗೆ ಒವೈಸಿ ತಿರುಗೇಟು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಒವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ಟೀಕಾಪ್ರಹಾರವನ್ನು ನಡೆಸಿದ್ದಾರೆ. ಮೋದಿ ಅವರು ಪ್ರತೀ ಬಾರಿಯೂ ತಾನು ವಿರೋಧ ಪಕ್ಷಗಳು ಹಾಗೂ ಪಾಕಿಸ್ಥಾನದಿಂದ ಕಿರುಕುಳ ಅನುಭವಿಸುತ್ತಿದ್ದೇನೆ ಎಂದೇ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ.ಕಾಶ್ಮೀರ ಭಾರತದ ಹೃದಯ, ಅಲ್ಲಿ ಬಹಳಷ್ಟು ಆಗಬೇಕಾಗಿದೆ ಆದರೆ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ವಿಫ‌ಲರಾಗಿದ್ದಾರೆ ಎಂದು ಒವೈಸಿ ಹೇಳಿದರು. ಇದೀಗ ಮೋದಿ ಮರು ಆಯ್ಕೆ ಆಗಬೇಕೆಂದು ಐ.ಎಸ್‌.ಐ. ಬಯಸುತ್ತಿದೆ ಎಂಬರ್ಥದಲ್ಲಿ ಪಾಕ್‌ ಪ್ರಧಾನಿ ಮಾತನಾಡುತ್ತಿದ್ದಾರೆ. ಆದರೆ ಪಾಕ್‌ ಪ್ರಧಾನಿಯ ಈ ಬಯಕೆ ಈಡೇರದಂತೆ ಮಾಡುವುದು ಈ ದೇಶದ ಮತದಾರರ ಕೈಯಲ್ಲಿದೆ. ಹಾಗಾಗಿ ನೀವೆಲ್ಲರೂ ಈ ಬಾರಿ ಮತದಾನ ಮಾಡಿ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕರನ್ನೇ ಆಯ್ಕೆ ಮಾಡಬೇಕು ಎಂದು ಒವೈಸಿ ಮತದಾರರಿಗೆ ಕರೆ ನೀಡಿದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا