Urdu   /   English   /   Nawayathi

CRPF ಯೋಧರಿಗಿನ್ನು ಸ್ಫೋಟಕ-ನಿರೋಧಕ ವಾಹನ, ಬುಲೆಟ್-ಪ್ರೂಫ್ ಬಸ್

share with us

ಹೊಸದಿಲ್ಲಿ: 27 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ರಣಹೇಡಿ ಪಾಕಿಸ್ತಾನಿ ಉಗ್ರಗಾಮಿಗಳು ದಾಳಿ ನಡೆಸಿದ ದುರಂತದ ಹಿನ್ನೆಲೆಯಲ್ಲಿ, ಇದೀಗ ಕಾಶ್ಮೀರದಲ್ಲಿ ದೇಶ ಕಾಯುವ ಕಾರ್ಯದಲ್ಲಿ ನಿರತರಾಗಿರುವ ಜವಾನರ ಗಸ್ತಿಗಾಗಿ ಸಿಡಿಮದ್ದು ನಿರೋಧಕ ವಾಹನಗಳು ಹಾಗೂ 30 ಸೀಟುಗಳುಳ್ಳ ಬಸ್ಸುಗಳನ್ನು ಸಿಆರ್‌ಪಿಎಫ್ ಖರೀದಿಸಲಿದೆ. ಅಲ್ಲದೆ, ತನ್ನ ಕಾಶ್ಮೀರದಲ್ಲಿ ಕಾನೂನು ಪಾಲನೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ 65 ಬಟಾಲಿಯನ್‌ಗಳಲ್ಲಿ ಬಾಂಬ್ ಪತ್ತೆ ಮತ್ತು ವಿಲೇವಾರಿ ತಂಡ (ಬಿಡಿಡಿಎಸ್) ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಲು ಪ್ಯಾರಾಮಿಲಿಟರಿ ಪಡೆಯಾಗಿರುವ ಸಿಆರ್‌ಪಿಎಫ್ ನಿರ್ಧರಿಸಿದೆ. ಫೆಬ್ರವರಿ 14ರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರೆಲ್ಲರೂ ಗಸ್ತು ವಾಹನದಲ್ಲಿ ಜಮ್ಮುವಿನಿಂದ ಶ್ರೀನಗರದತ್ತ ತೆರಳುತ್ತಿದ್ದರು. ಸುಧಾರಿತ ಸ್ಫೋಟಕ ಸಾಧನ (ಐಇಡಿ) ತುಂಬಿದ್ದ ವಾಹನದಲ್ಲಿ ಬಂದ ಆತ್ಮಹತ್ಯಾ ದಾಳಿಕೋರ, ಈ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ, ಮುಗ್ಧ ಯೋಧರು ಬಲಿದಾನವಾಗಿದ್ದರು. "ಐಇಡಿ-ನಿರೋಧಕ ಸಾಮರ್ಥ್ಯಕ್ಕೆ ಪ್ರತಿಯಾಗಿ ನಾವು ಸುಧಾರಣೆ ಮಾಡಿಕೊಳ್ಳುತ್ತಿದ್ದೇವೆ. ಮತ್ತಷ್ಟು ಸ್ಫೋಟಕ-ನಿರೋಧಕ ವಾಹನಗಳನ್ನು ಖರೀದಿಸಿ ಅಲ್ಲಿಗೆ ರವಾನಿಸುತ್ತೇವೆ ಮತ್ತು ಇರುವ ಬಸ್ಸುಗಳಿಗೆ ಬುಲೆಟ್ ಪ್ರೂಫ್ ವ್ಯವಸ್ಥೆ ಅಳವಡಿಸುತ್ತೇವೆ. ದೊಡ್ಡ ಬಸ್ಸುಗಳಿಗೆ ಬುಲೆಟ್-ನಿರೋಧಕತೆ ಸೇರಿದಂತೆ ಸುರಕ್ಷತಾ ವ್ಯವಸ್ಥೆ ಅಳವಡಿಸುವುದು ಕಷ್ಟವಾಗಿರುವುದರಿಂದ, 30 ಸೀಟುಗಳ ಬಸ್‌ಗಳ ಖರೀದಿಗೆ ಮುಂದಾಗಿದ್ದೇವೆ" ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ಹೇಳಿದ್ದಾರೆ. 

ಪುಲ್ವಾಮಾದಲ್ಲಿ ದಾಳಿಗೀಡಾಗಿದ್ದು ದೊಡ್ಡ ಬಸ್ಸು. ಇದರಲ್ಲಿ ಬುಲೆಟ್-ಪ್ರೂಫ್ ಮತ್ತಿತರ ಲೋಹದ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಿದಾಗ ತೂಕ ಹೆಚ್ಚಾಗುವುದರಿಂದ ಅದರ ವೇಗ ಹಾಗೂ ಎಂಜಿನ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬಾಂಬ್ ನಿರೋಧಕ ವಾಹನಗಳನ್ನು (ಎಂಪಿವಿ) ನಕ್ಸಲ್-ವಿರೋಧಿ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿದ್ದು, ಕೆಲವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಬಳಸಲಾಗುತ್ತದೆ. ಈ ಚತುಷ್ಚಕ್ರ ವಾಹನದಲ್ಲಿ ಆರು ಸಿಬ್ಬಂದಿ ಪ್ರಯಾಣಿಸಬಹುದು. ಬುಲೆಟ್-ಪ್ರೂಫ್ ಬಸ್ಸುಗಳು ಉಗ್ರಗಾಮಿಗಳ ಗುಂಡಿನ ದಾಳಿಯನ್ನಷ್ಟೇ ತಡೆದುಕೊಳ್ಳಬಹುದು. ಆದರೆ, ಪುಲ್ವಾಮಾದಲ್ಲಿ ನಡೆದಂತೆ ಸ್ಫೋಟಕಗಳಿಂದ ಅದಕ್ಕೆ ಯಾವುದೇ ರಕ್ಷಣೆ ಸಿಗುವುದಿಲ್ಲ. ಪುಲ್ವಾಮಾದಂತಹಾ ದಾಳಿಗಳಿಗೆ ಪ್ರತಿಯಾಗಿ ಪಡೆಗಳ ಚಲನವಲನದ ವಿಧಾನಗಳನ್ನು ಬದಲಾಯಿಸಲಾಗಿದ್ದು, ಹೆಚ್ಚುವರಿ ಸುರಕ್ಷತಾ ಕ್ರಮಗಳ ಬಗ್ಗೆಯೂ ತರಬೇತಿ ನೀಡಲಾಗಿದೆ. ಕಾಶ್ಮೀರದಂತಹಾ ಸೂಕ್ಷ್ಮ ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಬಸ್ಸುಗಳಲ್ಲಿ ಯೋಧರು ಸಂಚರಿಸುವುದರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್ ಜವಾನರು ಮತ್ತು ಅಧಿಕಾರಿಗಳು ಕರ್ತವ್ಯಕ್ಕೆ ಸೇರಲು ಅಥವಾ ಪ್ರವಾಸಕ್ಕೆ ಅಥವಾ ರಜೆಯಲ್ಲಿ ತೆರಳುವಾಗ ವಿಮಾನದಲ್ಲಿ ಪ್ರಯಾಣಿಸುವ ಸೌಲಭ್ಯವನ್ನು ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಘೋಷಣೆ ಮಾಡಿತ್ತು. ಫೆ.14ರಂದು ದಾಳಿಗೆ ಈಡಾದ ಸಿಆರ್‌ಪಿಎಫ್ ಯೋಧರ ದಳದಲ್ಲಿ 78 ವಾಹನಗಳಿದ್ದು, ದುರದೃಷ್ಟದ ಬಸ್ಸು ಆ ಸಾಲಿನಲ್ಲಿ 5ನೆಯದಾಗಿತ್ತು. 

ವಿ, ಕ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا