Urdu   /   English   /   Nawayathi

ಕ್ವಾಟ್ರಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೇದೆ ಮಗಳು ಬಲಿ... ಅಳಲು ತೋಡಿಕೊಂಡ ತಂದೆ

share with us

ಬೆಂಗಳೂರು: 25 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪೊಲೀಸ್ ಕ್ವಾಟ್ರಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೊಲೀಸ್ ಪೇದೆಯ ಮಗಳು ಸಾವನ್ನಪ್ಪಿರುವ ಘಟನೆ ಶಿವಾಜಿನಗರ ಪೊಲೀಸ್ ಕ್ವಾಟ್ರಸ್​ನಲ್ಲಿ ನಡೆದಿದೆ. ಸದ್ಯ ತನ್ನ ಮಗಳ ಸಾವಿಗೆ ನ್ಯಾಯ ಕೊಡುವಂತೆ ತಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಹರ್ಷಾಲಿ(4) ಮೃತ ಕಂದಮ್ಮ. ಇದೇ ತಿಂಗಳು 5ನೇ ತಾರೀಕು ಶಿವಾಜಿನಗರ ಕ್ವಾಟ್ರಸ್​ನಲ್ಲಿ ಸಂಜೆ ವೇಳೆ ಒಣಗಿದ್ದ ಮರಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಹರ್ಷಾಲಿ ಬೆಂಕಿಗೆ ಬಿದ್ದಿದ್ದಳು. ಬೆಂಕಿಗೆ ಬಿದ್ದ ಹರ್ಷಾಲಿಯನ್ನ ತಕ್ಷಣ ಸಾರ್ವಜನಿಕರು ಕಾಪಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಅವೈಜ್ಞಾನಿಕವಾಗಿ ಹಾಕಿದ್ದ ಬೆಂಕಿಗೆ ಬಿದ್ದ ನಾಲ್ಕು ವರ್ಷದ ಮಗು ಚಿಕಿತ್ಸೆ ಫಲಿಸದೇ ಒಂದು ವಾರದ ನಂತರ ಸಾವನ್ನಪ್ಪಿದ್ದಾಳೆ. ಇದೀಗ ಮಗಳನ್ನ ಕಳೆದುಕೊಂಡ ತಂದೆ ತನ್ನ ಅಳಲ್ಲನ್ನ ವಾಟ್ಸ್​​ಆ್ಯಪ್​ ಮೂಲಕ ತೋಡಿಕೊಂಡಿದ್ದಾರೆ.

ತಂದೆಯ ಅಳಲೇನು...!

ನಾನು ಲೋಕೇಶಪ್ಪ. 2005ನೇ ಬ್ಯಾಚ್​ನ ಪೊಲೀಸ್. ಸದ್ಯ ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ ನೋವಿನ ಕಥೆ ನಿಮ್ಮ ಹತ್ತಿರ ಹೇಳಿಕೊಳ್ಳಬೇಕು ಎಂದು ನನ್ನ ಮನಸ್ಸು ಹೇಳುತ್ತಿದೆ. ನನಗೆ ಬಂದಂತಹ ದುಃಖ ನಿಮಗೆ ಬಾರದಿರಲಿ. ಇದು ಎಲ್ಲರಿಗೂ ಎಚ್ಚರಿಕೆಯ ಪಾಠವಾಗಲಿ. ನನ್ನ ಮಗಳ ಸಾವು ಸದಾ ನನ್ನನ್ನು ಕಾಡುತ್ತಿರುತ್ತದೆ. ಈ ಸಾವಿಗೆ ಯಾರು ಹೊಣೆ? ಆ ದೇವರಾ? ಅಥವಾ ಪೊಲೀಸ್ ಇಲಾಖೆಯ ಕ್ವಾಟ್ರಸ್​ನ ಅವ್ಯವಸ್ಥೆಯಾ? ಅಥವಾ ನಮ್ಮ ದೌರ್ಬಲ್ಯವಾ? ಗೊತ್ತಾಗುತ್ತಿಲ್ಲ. ದಿನಾಂಕ 05.03 2019 ರಂದು ನಾನು ವಿಧಾನಸೌಧದ ಹತ್ತಿರ AGS ಜಂಕ್ಷನ್ ಹತ್ತಿರ B ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಆ ದಿನ ಸಂಜೆ ಸುಮಾರು 5-30 ಕ್ಕೆ ಶಿವಾಜಿನಗರ ಪೋಲಿಸ್ ವಸತಿ ಗೃಹದ ಎರಡನೇ ರಸ್ತೆಯಲ್ಲಿ ಮೂರು ದಿನಗಳಿಂದ ಬಿದ್ದಿರುವ ಮರದ ರೆಂಬೆಗಳಿಗೆ ಬೆಂಕಿ ಹಾಕಿದ್ದಾರೆ. ಇದೇ ವೇಳೆ ಆಟವಾಡುತ್ತಿದ್ದ ಮಗು ಬೆಂಕಿಯ ಒಳಗಡೆ ಬಿದ್ದಿದ್ದಾಳೆ. ಇದರಿಂದ ಮೈ-ಕೈ, ಎದೆ ಹಾಗೂ ಬೆನ್ನಿನ ಹಿಂಭಾಗ ಸಂಪೂರ್ಣ ಸುಟ್ಟು ಹೋಗಿದೆ. ಕೆಲವರ ಸಹಾಯದಿಂದ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೌರಿಂಗ್ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ,ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ನಂತರ ನಾವು ನಮ್ಮ ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದೇವೆ. ನಂತ್ರ ಶಿವಾಜಿನಗರ ಪೋಲಿಸ್ ಠಾಣೆಗೆ ವಿಷಯ ತಿಳಿಸಿದರು. ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ, ಸೌಜನ್ಯಕ್ಕಾದರೂ ಆಸ್ಪತ್ರೆಗೆ ಬಂದು ನೋಡಿ, ಹೇಳಿಕೆ ಪಡೆಯಲು ಬರಲಿಲ್ಲ. ಇದೇ 13ನೇ ತಾರೀಕು ಬೆಳಗ್ಗೆ 8-10 ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗಳು ಮರಣ ಹೊಂದಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾರೆ.

fire incident

9 ದಿನ ನಾವು, ನಮ್ಮ ಮಗಳನ್ನು ಉಳಿಸಿಕೊಳ್ಳಲು ಆಸ್ಪತ್ರೆಯಲ್ಲಿ ಪಯತ್ನ ಮಾಡುತ್ತಿದ್ದರೂ ಪೋಲಿಸ್ ಇಲಾಖೆಯ ಯಾವ ಒಬ್ಬ ಅಧಿಕಾರಿಗಳು, ಕ್ವಾಟ್ರಸ್ ಮೇಲ್ವಿಚಾರಕರೂ ಅಲ್ಲಿ ಬರಲಿಲ್ಲ ಯಾಕೇ? ಅವರಿಗೆ ವಿಷಯ ಗೊತ್ತಿರಲಿಲ್ಲವೇ? ಇಡೀ ಕ್ವಾಟ್ರಸ್​ನಲ್ಲಿ ಗೊತ್ತಿದ್ದ ಈ ವಿಷಯ ಶಿವಾಜಿನಗರ ಠಾಣೆಗೆ, ಅಲ್ಲಿಯ ಅಧಿಕಾರಿಗಳಿಗೆ ಗೊತ್ತಾಗಲಿಲ್ಲವೇ? ಈ ವಿಷಯ ಏಕೆ ಹೇಳುತ್ತಿದ್ದೇನೆ ಅಂದರೆ, ನಮಗೆ ಬಂದಂತಹ ದುರ್ಗತಿ ಬೇರೆ ಮಕ್ಕಳಿಗೆ ಬರಬಾರದು. ಇಂದು ಪೊಲೀಸ್ ವಸತಿ ಗೃಹಗಳು ಹೇಗಿವೆ ಅಂದರೆ, ಅಲ್ಲಿಯ ಅವ್ಯವಸ್ಥೆ ಕೇಳೋರು ಇಲ್ಲ. ಹೇಳೋರು ಇಲ್ಲ. ವಸತಿ ಗೃಹದ ಮೇಲ್ವಿಚಾರಕರು ಸರಿಯಾಗಿ ಅಲ್ಲಿಯ ಸಮಸ್ಯೆಗಳನ್ನು ನೋಡುತ್ತಿಲ್ಲ. ಮೂರು ದಿನಗಳಿಂದ ಕ್ವಾಟ್ರಸ್​ನಲ್ಲಿ ಬೆಂಕಿ ಹಾಕಿದ್ದರು ಸಹ, ಅದನ್ನು ನಂದಿಸದೇ ಇರೋದು, ಚಿಕ್ಕ ಮಕ್ಕಳು ಆಟ ಆಡುವಾಗ ಅವರಿಗೇನು ಗೊತ್ತಿರುತ್ತದೆ. ಅವರು ಆಟ ಆಡುವಲ್ಲಿ ಮಗ್ನರಾಗಿರುತ್ತಾರೆ. ಕ್ವಾಟ್ರಸ್ ಸ್ಥಿತಿಗತಿ, ಸ್ವಚ್ಛತೆ, ಅಲ್ಲಿಯ ಆಗು-ಹೋಗುಗಳಿಗೆ ಮೇಲ್ವಿಚಾರಕರೇ ಹೊಣೆಯಾಗುತ್ತಾರೆ. ಬೆಂಕಿಯಿಂದ ಸತ್ತು ಹೋದ ನನ್ನ ಕಂದ ಮತ್ತೆ ವಾಪಸ್​ ಬರುವುದಿಲ್ಲ. ಆದರೆ ಕ್ವಾಟ್ರಸ್​ನಲ್ಲಿರುವ ಬೇರೆ ಯಾವುದೇ ಮಕ್ಕಳಿಗೆ ಈ ಗತಿ ಬಾರದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬುದೇ ನನ್ನ ಮನವಿ ಎಂದು ಅಳಲು ತೊಡಿಕೊಂಡಿದ್ದಾರೆ.

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا