Urdu   /   English   /   Nawayathi

ಗೋವಾಕ್ಕೆ ಹೋದವರು ಬಾರದ ಲೋಕಕ್ಕೆ ತೆರಳಿದರು: ಒಬ್ಬೊಬ್ಬರದ್ದೂ ಕಣ್ಣೀರ ಕಥೆ

share with us

ಕಲಬುರಗಿ: 23 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಗೋವಾದಲ್ಲಿ ಹೋಳಿ ಹಬ್ಬ ಆಚರಿಸಿ ಹಿಂದಿರುಗುವಾಗ ವಿಜಯಪುರ ಜಿಲ್ಲೆ ಚಿಕ್ಕಸಿಂದಗಿ ಬಳಿ ನಡೆದ ಭೀಕರ ಅಪಘಾತದಲ್ಲಿ ಕಲಬುರಗಿ ಜಿಲ್ಲೆಯ 9 ಯುವಕರು ಮೃತಪಟ್ಟಿದ್ದಾರೆ. ಗೋವಾ ಪ್ರವಾಸಕ್ಕೆ ತೆರಳಿದ್ದ ಯುವಕರ ತಂಡ ನಿನ್ನೆ ಕ್ರೂಸರ್ ವಾಹನದಲ್ಲಿ ಚಿತ್ತಾಪುರಕ್ಕೆ ಮರಳುವಾಗ ಚಿಕ್ಕಸಿಂದಗಿ ಬಳಿ ಕ್ಯಾಂಟರ್​ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲೆ 9 ಯುವಕರ ಪ್ರಾಣಪಕ್ಷಿ ಹಾರಿಹೋಗಿದೆ. ಅಪಘಾತದಲ್ಲಿ ಶ್ರೀನಾಥ ನಾಲವಾರ (25), ಸಾಗರ (22), ಮುಜಾವರ್ ಚಾಂದ್ ಪಾಶಾ (26), ಗುರು (32), ಅಜೀಮ್ ರೆಹಮಾನ್​ (26), ಶಾಕಿರ್ ರೆಹಮಾನ್​(24), ಯುನೂಸ್ ಪಟೇಲ್ (28), ಮನ್ಸೂರ್ ಪಟೇಲ್(28), ಅಂಬರೀಷ ದೊರೆ (30) ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಅಪಘಾತದಲ್ಲಿ ಆಕಾಶ ದೊರೆ, ಮಂಜೂರ ಪಟೇಲ್, ಸೈಯದ್ ಸದ್ದಾಂ, ಮಲ್ಲಿಕಾರ್ಜುನ ಜಮಾದಾರ ಎಂಬವವರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ವಿಜಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನವೊಂದನ್ನು ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ ಎನ್ನಲಾಗಿದೆ. 9 ಯುವಕರ ದಾರುಣ ಸಾವಿನ ಸುದ್ದಿ ತಿಳಿಯುತ್ತಲೇ ಚಿತ್ತಾಪುರದ ಜನರಿಗೆ ಸಿಡಿಲು ಬಡಿದಂತಾಗಿದೆ. ಯುವಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಕಣ್ಣೀರು ತರಿಸುವ ಕಥನ

ಅಪಘಾತದಲ್ಲಿ ಮೃತಪಟ್ಟ ಕ್ರೂಸರ್ ಚಾಲಕ ಶ್ರೀನಾಥ ನಾಲವಾರ ಎಂಬುವನಿಗೆ ಮೂರು ತಿಂಗಳ ಹಿಂದೆಯಷ್ಟೆ ಎಂಗೇಜ್​ಮೆಂಟ್ ಆಗಿತ್ತು. ಇದೇ ಏಪ್ರೀಲ್ 10ರಂದು ಮದುವೆ ನಿಶ್ಚಯವಾಗಿತ್ತು. ಆತ್ಮೀಯರಿಗೆ ಮದುವೆ ಇನ್ವಿಟೇಷನ್ ಕೊಟ್ಟು, ಗೋವಾಕ್ಕೆ ತೆರಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮದುವೆಗೆ ಇನ್ನು 18 ದಿನಗಳು ಬಾಕಿ ಇರುವಾಗಲೇ ಶ್ರೀನಾಥ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಸಾವಿನಲ್ಲೂ ಒಂದಾದ ಸಹೋದರರು

ಅಪಘಾತದಲ್ಲಿ ಇಬ್ಬರು ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ. ಒಂದೇ ಕುಟುಂಬದ ಮನ್ಸೂರ್ ಪಟೇಲ್, ಯುನೂಸ್ ಪಟೇಲ್ ಸ್ಥಳದಲ್ಲೆ ಮೃತಪಟ್ಟರೆ, ಮತ್ತೊಬ್ಬ ಸಹೋದರ ಮಂಜೂರ್​ ಪಟೇಲ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಇಬ್ಬರು ಮಕ್ಕಳು ಸಾವನಪ್ಪಿದ್ದು, ದಿಕ್ಕು ಕಾಣದೆ ಕುಟುಂಬವರು ಕಣ್ಣೀರಿಡುವ ದೃಶ್ಯ ಮನಕಲುಕುವಂತಿತ್ತು. ಘಟನೆಯಲ್ಲಿ ಅಜೀಮ್ ಮತ್ತು ಶಾಕೀರ್ ಎಂಬ ಇಬ್ಬರು ಸಹೋದರರು ಸಹ ಮೃತಪಟ್ಟಿದ್ದಾರೆ.

ಮಕ್ಕಳನ್ನು ಅಗಲಿದ ಪ್ರೀತಿಯ ತಂದೆ

ಮೃತಪಟ್ಟ ವ್ಯಕ್ತಿ ಗುರುಲಿಂಗ ಹಕೀಮ್ ಎಂಬಾತನಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಗುರುಲಿಂಗ ಕೂಲಿ ಮಾಡಿ ತರುವ ಹಣದ ಮೇಲೆ ಕುಟುಂಬ ಅವಲಂಬಿತವಾಗಿತ್ತು. ಇದೀಗ ಮನೆ ಯಜಮಾನನ್ನು ಕಳೆದುಕೊಂಡ ಈತನ ಪತ್ನಿ ಆಕ್ರಂದನ ಕಲ್ಲೆದೆಯವನನ್ನೂ ಕರಗಿಸುವಂತಿತ್ತು.

ವಯಸ್ಸಾದ ತಂದೆ-ತಾಯಿ

ಮತ್ತೊರ್ವ ಮೃತ ವ್ಯಕ್ತಿ ಚಾಂದ್​ಪಾಶಾ ಎಂಬಾತನಿಗೆ ಮದುವೆಯಾಗಿಲ್ಲ. ತಂದೆ, ತಾಯಿಗೆ ವಯಸ್ಸಾಗಿದ್ದು, ಅವರ ಜವಾಬ್ದಾರಿ ಚಾಂದ್​​ಪಾಶನ ಮೇಲಿತ್ತು. ದುಡಿದು ಜೀವನ ಸಾಗಿಸುತ್ತಿದ್ದ ಮಗನನ್ನು ಕಳೆದುಕೊಂಡ ಅಪ್ಪ-ಅಮ್ಮನಿಗೆ ಕಣ್ಣೀರು ಹೊರತಾಗಿ ಬೇರೇನೂ ಉಳಿದಿಲ್ಲ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا