Urdu   /   English   /   Nawayathi

ಖಾಸಗಿ ಹೊಟೇಲ್‍ನಲ್ಲಿ ದೋಸ್ತಿಗಳಿಂದ ‘ಲೋಕ’ ಗೆಲ್ಲುವ ತಂತ್ರ..!

share with us

ಬೆಂಗಳೂರು: 19 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಹೊಂದಾಣಿಕೆ ಮೂಡಿಸಲು ಉಭಯ ಪಕ್ಷಗಳ ನಾಯಕರು ಮಧ್ಯ ಪ್ರವೇಶಿಸಲು ತೀರ್ಮಾನಿಸಲಾಗಿದೆ. ಖಾಸಗಿ ಹೊಟೇಲ್‍ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆ ಮಹತ್ವದ ಹಾಗೂ ರಹಸ್ಯ ಮಾತುಕತೆ ನಡೆಸಿದ್ದಾರೆ. ಮಾತುಕತೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಸ್ಥಳೀಯವಾಗಿ ಅಪಸ್ವರ ಉಂಟಾಗದಂತೆ ಉಭಯ ಪಕ್ಷಗಳ ನಾಯಕರು ಗಮನ ಹರಿಸುವಂತೆ ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಉದ್ದೇಶ ಹೊಂದಲಾಗಿದೆ. ಈ ಉದ್ದೇಶ ಈಡೇರಲು ಬಿಜೆಪಿ ಮಣಿಸುವ ಕಡೆ ಗುರಿ ಇರಬೇಕು. ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಮೈಸೂರು, ಮಂಡ್ಯ, ಉಡುಪಿ-ಚಿಕ್ಕಮಗಳೂರು, ರಾಯಚೂರು, ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳ ಹಂಚಿಕೆ ಬಗ್ಗೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಅಸಮಾಧಾನವಿದೆ. ಹೀಗಾಗಿ ಅಧಿಕೃತ ಅಭ್ಯರ್ಥಿ ಪರವಾಗಿ ಉಭಯ ಪಕ್ಷಗಳ ಕಾರ್ಯಕರ್ತರು, ಮುಖಂಡರು ಕಾರ್ಯನಿರ್ವಹಿಸಬೇಕಿದೆ. ಇದು ಸದ್ಯಕ್ಕೆ ಸವಾಲಿನ ಕೆಲಸವಾಗಿದೆ. ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರು ಬ್ಲಾಕ್ ಮಟ್ಟದ ಸಭೆಗಳನ್ನು ನಡೆಸಿ ಚುನಾವಣಾ ಮೈತ್ರಿ ಬಗ್ಗೆ ಅಪಸ್ವರ ಎತ್ತದಂತೆ ತಾಕೀತು ಮಾಡಬೇಕು. 

ಅದೇ ರೀತಿ ಜೆಡಿಎಸ್ ನಾಯಕರು ಸ್ಥಳೀಯ ಕಾರ್ಯಕರ್ತರ ಮನವೊಲಿಸಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಬೇಕು ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಂಟಿ ಪ್ರಚಾರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಈಡೇರಲು ಕಾಂಗ್ರೆಸ್-ಜೆಡಿಎಸ್ ನಾಯಕರು ಜಂಟಿ ಪ್ರಚಾರ ಕೈಗೊಳ್ಳಲಿದ್ದಾರೆ. ಒಂದೇ ವೇದಿಕೆಯಲ್ಲಿ ಉಭಯ ಪಕ್ಷಗಳ ನಾಯಕರು ಪಾಲ್ಗೊಂಡು ಮೈತ್ರಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲು ತೀರ್ಮಾನಿಸಿದ್ದಾರೆ. ಎಲ್ಲೆಲ್ಲಿ ಯಾವ ಯಾವ ನಾಯಕರು ಪ್ರಭಾವಿಯಾಗಿದ್ದಾರೆ ಅಂತಹ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು. ವಿಭಾಗಾವಾರು ಸಮಾವೇಶಗಳನ್ನು ನಡೆಸುವ ಬಗ್ಗೆಯೂ ಉಭಯ ಪಕ್ಷಗಳ ನಾಯಕರ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا