Urdu   /   English   /   Nawayathi

‘ಸೈನಿಕರ ಸಾವಲ್ಲಿ ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ’ : ಗುಂಡೂರಾವ್

share with us

ಬೆಂಗಳೂರು: 02 ಮಾರ್ಚ್ (ಫಿಕ್ರೋಖಬರ್ ಸುದ್ದಿ) ಸೈನಿಕರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ದೇಶವನ್ನು ವಿಭಜನೆ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ 40 ಮಂದಿ ಸೈನಿಕರ ಹತ್ಯೆಗೆ ಭದ್ರತೆಯ ಲೋಪವೇ ಕಾರಣ. ಆದರೆ, ಅದನ್ನು ಮುಚ್ಚಿಟ್ಟುಕೊಳ್ಳಲು ದೇಶಪ್ರೇಮ, ಯುದ್ಧ ಎಂಬೆಲ್ಲಾ ಭಾವನಾತ್ಮಕ ವಿಷಯಗಳನ್ನು ವೈಭವೀಕರಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇಶ ಪ್ರೇಮ ಎಂಬುದು ಬಿಜೆಪಿಯವರ ಹಕ್ಕುಸೌಮ್ಯವಲ್ಲ. ದೇಶಭಕ್ತಿ ಯಾರೊಬ್ಬರ ಸ್ವತ್ತು ಅಲ್ಲ. ಚುನಾವಣೆ ಕಾರಣಕ್ಕಾಗಿ ದೇಶದ ರಕ್ಷಣೆ ವಿಷಯವನ್ನು ಬಳಸಿಕೊಳ್ಳುವುದು ಸರಿಯಲ್ಲ ಎಂದರು. ಸೋಮವಾರ ಸಮನ್ವಯ ಸಮಿತಿ ಸಭೆ: ಸೋಮವಾರ ಬೆಳಗ್ಗೆ ಕಾಂಗ್ರೆಸ್-ಜೆಡಿಎಸ್‍ನ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಕ್ಷೇತ್ರಗಳ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಗುತ್ತದೆ.  ಕ್ಷೇತ್ರಗಳ ಹಂಚಿಕೆಯ ನಂತರ ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಎರಡು ಪಕ್ಷಗಳು ತಮ್ಮ ತಮ್ಮಲ್ಲೇ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದರು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಟಿಕೆಟ್ ಕೇಳುವುದು ಸಾಮಾನ್ಯ. ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಅವರ ಪತಿ ಅಂಬರೀಶ್ ಅವರು ಕಾಂಗ್ರೆಸ್‍ನ ಹಿರಿಯ ನಾಯಕರಾಗಿದ್ದವರು. ಆದರೆ, ಮೈತ್ರಿ ಪಕ್ಷಗಳು ಕ್ಷೇತ್ರಗಳ ಹಂಚಿಕೆ ನಂತರ ಮಂಡ್ಯದಲ್ಲಿ ಯಾರು ಸ್ಪರ್ಧಿಸಬೇಕೆಂಬ ನಿರ್ಧಾರವಾಗುತ್ತದೆ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠರ ನಿರ್ಧಾರವನ್ನು ಸುಮಲತಾ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ತಿಳಿಸಿದರು. ಮಂಡ್ಯದಲ್ಲಿ ನಿಖಿಲ್‍ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಜಿ.ಟಿ.ದೇವೇಗೌಡರು ಒಪ್ಪಿಕೊಳ್ಳಬೇಕು.

ಜೆಡಿಎಸ್‍ನವರು ಕಾಂಗ್ರೆಸ್ ಸಂಸದರಿರುವ ಕೆಲವು ಕ್ಷೇತ್ರಗಳನ್ನು ಕೇಳುತ್ತಿದ್ದಾರೆ. ಅದೇ ರೀತಿ ಜೆಡಿಎಸ್ ಸಂಸದರಿರುವ ಮಂಡ್ಯ ದಂತಹ ಕ್ಷೇತ್ರವನ್ನು ಕಾಂಗ್ರೆಸ್ ಕೇಳುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಚರ್ಚೆಯ ನಂತರ ಎಲ್ಲವೂ ನಿರ್ಧಾರವಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ನೇಕಾರ ಸಮುದಾಯದ ಬೆಳ್ಳಿಚುಕ್ಕಿ ವೀರೇಶ್, ಲಕ್ಷ್ಮೀಕಾಂತ್, ದೇವಿಕಾಬಾನು, ರೂಪಾ, ರಮೇಶ್ ಸೇರಿದಂತೆ 30ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು. ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಜಾರಿಗೆ ತಂದ ಅಭಿವೃದ್ಧಿಯನ್ನು ಬೆಂಬಲಿಸಿ ಹಿಂದುಳಿದ ವರ್ಗಗಳ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.  ಇನ್ನಷ್ಟು ಮಂದಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದರು. ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا