Urdu   /   English   /   Nawayathi

ಯುದ್ಧ ಭೀತಿ: ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ

share with us

ಶ್ರೀನಗರ: 28 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಪಾಕಿಸ್ತಾನದ ಮೇಲಿನ ಭಾರತದ ವೈಮಾನಿಕ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ದೊಡ್ಡದಾಗಿ ರೆಡ್‌ಕ್ರಾಸ್ ಚಿಹ್ನೆಯನ್ನು ಬರೆಯಲಾಗುತ್ತಿದೆ. ಯುದ್ಧ ಸಂತ್ರಸ್ತರ ವೈದ್ಯಕೀಯ ನೆರವಿಗೆ ಹಾಗೂ ಶತ್ರು ಪಡೆಗಳು ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದನ್ನು ತಡೆಯುವ ಸಲುವಾಗಿ,  ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಸಂಕೇತವನ್ನು ಕೆಂಪು ಬಣ್ಣದಲ್ಲಿ ಬರೆಯಲಾಗುತ್ತಿದೆ. ಯುದ್ಧ ಅಥವಾ ಯುದ್ಧ ಭೀತಿಯ ಸಂದರ್ಭಗಳಲ್ಲಿ ರೆಡ್‌ ಕ್ರಾಸ್‌ ಚಿಹ್ನೆ ಬರೆಯುವುದು ಅಂತರರಾಷ್ಟ್ರೀಯ ಶಿಷ್ಟಾಚಾರವಾಗಿದೆ. ಮಂಗಳವಾರ ಶ್ರೀನಗರದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಛಾವಣಿಯ ಮೇಲೆ ರೆಡ್‌ಕ್ರಾಸ್‌ ಚಿಹ್ನೆಯನ್ನು ಬರೆಯಲಾಗಿದೆ. ಇಲ್ಲಿನ ಎಸ್‌ಎಂಎಚ್‌ಎಸ್‌ ಆಸ್ಪತ್ರೆ, ಲಾಲ್‌  ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಅಥವಾ ಎಚ್‌ ಅಕ್ಷರದ ಚಿಹ್ನೆಯನ್ನು ಬರೆಯುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ. ಗಡಿ ಜಿಲ್ಲೆಗಳಾದ ಕುಪ್ವಾರ ಮತ್ತು ಭಾರಾಮುಲ್ಲ ಜಿಲ್ಲೆಯ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ ಬರೆಯುವುದು ಕಷ್ಟ , ಒಂದು ವೇಳೆ ಬರೆದರೂ ಹಿಮದ ಪರಿಣಾಮ ಅದು ಉಳಿಯುವುದಿಲ್ಲ ಎಂದು ಕಾಶ್ಮೀರದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಇಲಾಖೆಯು ಉರಿ, ಕರ್ನಾ ಸೇರಿದಂತೆ ಗಡಿ ಭಾಗದ ಪಟ್ಟಣಗಳಲ್ಲಿರುವ ಪ್ರಮುಖ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ ಬರೆಯುವಂತೆ ಸೂಚಿಸಿದೆ. ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆಯನ್ನು ಬರೆಯಬೇಕು. ಹಾಗೇ ಮಾನಸಿಕ ಚಿಕಿತ್ಸಾ ಆಸ್ಪತ್ರೆಗಳು ಬಿಳಿ ಬಣ್ಣದ ರೆಡ್‌ಕ್ರಾಸ್‌ ಸಂಕೇತ ಬರೆಯಬೇಕು. ಪಶು ವೈದ್ಯಾಲಯಗಳು ನೀಲಿ ಬಣ್ಣದಲ್ಲಿ ರೆಡ್‌ಕ್ರಾಸ್‌ ಸಂಕೇತವನ್ನು ಬರೆಯಬೇಕ ಎಂದು ಅಂತರರಾಷ್ಟ್ರೀಯ ಶಿಷ್ಟಾಚಾರ ಹೇಳುತ್ತದೆ. ‌ಖಾಸಗಿ ಆಸ್ಪತ್ರೆಗಳು ಸಹ ರೆಡ್‌ಕ್ರಾಸ್‌ ಸಂಕೇತಗಳನ್ನು ಬರೆದು ಕೊಳ್ಳಬೇಕು. ಇದಕ್ಕೆ ಸರ್ಕಾರ ಹಣಕಾಸು ನೆರವು ನೀಡುವುದಿಲ್ಲ. ವೈಮಾನಿಕ ವೀಕ್ಷಣೆಯಲ್ಲಿ ಈ ಚಿಹ್ನೆಗಳು ದೊಡ್ಡದಾಗಿ ಕಾಣುವಂತಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا