Urdu   /   English   /   Nawayathi

ಡಿಕೆಶಿ ವಿಚಾರಣೆ ಮುಂದೂಡಿಕೆ ಮನವಿ ಪರಿಗಣಿಸಿ: ಇಡಿಗೆ ಹೈಕೋರ್ಟ್ ನಿರ್ದೇಶನ

share with us

ಬೆಂಗಳೂರು: 07 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ನವದೆಹಲಿಯಲ್ಲಿನ ತಮ್ಮ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ನಿಂದ ವಿನಾಯಿತಿ ಕೋರಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವಂತೆ ಹೈಕೋರ್ಟ್ ಗುರುವಾರ ಇಡಿಗೆ ನಿರ್ದೇಶನ ನೀಡಿದೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಅವರು ರಿಟ್‍ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಇತರೆ ಆರೋಪಿಗಳಾದ ಸಚಿನ್ ನಾರಾಯಣ, ಶರ್ಮಾ ಮತ್ತು ರಾಜೇಂದ್ರ ಕೂಡ ಸಮನ್ಸ್ ರದ್ದು ಕೋರಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ವಿಚಾರಣೆ ಸಂದರ್ಭದಲ್ಲಿ, ಅರ್ಜಿದಾರರು ವಿನಾಯಿತಿ ಕೋರಿ ಮನವಿ ಸಲ್ಲಿಸಿದಲ್ಲಿ ಜಾರಿ ನಿರ್ದೇಶನಾಲಯ ಪರಿಶೀಲಿಸಲಿದೆ ಎಂದು  ಕೇಂದ್ರ ಸರ್ಕಾರದ ಪರ ವಕೀಲರು ಹೇಳಿಕೆ ನೀಡಿದರು. ಇದರ ಆಧಾರದ ಮೇಲೆ ನ್ಯಾಯಮೂರ್ತಿ ಸುನೀಲ್‍ ದತ್ ಯಾದವ್‍ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು. ಡಿ.ಕೆ.ಶಿವಕುಮಾರ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್‍ ಸಿಬಲ್, ಅರ್ಜಿದಾರರು ಯಾವುದೆ ತೆರಿಗೆ ವಂಚನೆ ಮಾಡಿಲ್ಲ. ಕಾಲಕಾಲಕ್ಕೆ ಕಾನೂನುಬದ್ಧವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ತೆರಿಗೆ ಪಾವತಿಸುವ ಅವಧಿ ಪೂರ್ಣಗೊಳ್ಳುವ ಮುನ್ನವೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರಿಗೆ ತೆರಿಗೆ ಪಾವತಿಸದ ದಾಖಲೆಗಳು ದೊರೆತಿದ್ದು, ಅದರ ಆಧಾರದ ಮೇಲೆ ಅರ್ಜಿದಾರರನ್ನು ಬಂಧಿಸುವ ಸಾಧ್ಯತೆಯಿದೆ. ಅಲ್ಲದೆ, ಅವರು ಜನಪ್ರತಿನಿಧಿಯಾಗಿರುವುರಿಂದ  ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅವರ ಹಾಜರಾತಿ ಅತ್ಯಗತ್ಯ.  ಈ ಹಿನ್ನೆಲೆಯಲ್ಲಿ ಅವರಿಗೆ ಜಾರಿ ಮಾಡಿರುವ ಸಮನ್ಸ್ ಅನ್ನು ರದ್ದುಗೊಳಿಸಬೇಕು ಎಂದು ವಾದ ಮಂಡಿಸಿದರು. ನವದೆಹಲಿಯ ಕೆ.ಆರ್.ಪುರಂ ಮನೆ ಹಾಗೂ ಸಫ್ದರ್ ಜಂಗ್ ಎನ್‍ಕ್ಲೇವ್ ಫ್ಲಾಟ್ ಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 8.60 ಕೋಟಿ ರೂ. ವಶಪಡಿಸಿಕೊಂಡಿದ್ದರು. ಈ ಹಣವನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಕಳುಹಿಸಲಾಗಿದೆ ಎಂಬ ಆರೋಪವನ್ನು ಕೂಡ ಡಿ.ಕೆ.ಶಿವಕುಮಾರ್ ಎದುರಿಸುತ್ತಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಹಣಕ್ಕೆ ಕೆ.ಜಿ.ಎಂಬ ಸಂಕೇತಾಕ್ಷರ ಬಳಸಲಾಗಿತ್ತು.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا