Urdu   /   English   /   Nawayathi

‘ಡಿಎನ್‍ಎ ಪರೀಕ್ಷೆ ಮಾಡಿ ಅನಂತ್‍ ಕುಮಾರ್ ಹೆಗಡೆ ಪತ್ನಿಯ ಜಾತಿ ಪತ್ತೆಹಚ್ಚಬೇಕು’

share with us

ಬೆಂಗಳೂರು: 04 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅನ್ಯಧರ್ಮದವರನ್ನು ಮದುವೆಯಾಗಿದ್ದಾರೆ ಎಂದು ಆಕ್ಷೇಪಾರ್ಹವಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಪತ್ನಿ ಯಾವ ಜಾತಿ ಎಂಬುದನ್ನು ಪತ್ತೆಹಚ್ಚಲು ಡಿಎನ್‍ಎ ಪರೀಕ್ಷೆ ಮಾಡಬೇಕಿದೆ ಎಂದು ಕಾಂಗ್ರೆಸ್‍ನ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಿತ ಹೇಳಿಕೆ ನೀಡಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‍ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಹಿಂದು ಹೆಣ್ಣುಮಕ್ಕಳನ್ನು ಮುಟ್ಟಿದವರ ಕೈ ಕಡಿಯಬೇಕು ಎಂದು ಅನಂತ್‍ಕುಮಾರ್ ಹೆಗಡೆ ಹೇಳಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರು ಅತ್ಯಾಚಾರ ಮಾಡಿದ್ದರು. ಇನ್ನು ಕೆಲವು ಸಚಿವರು ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರು. ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರು ಪಬ್‍ದಾಳಿಯಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದ್ದರು. ಅನಂತ್‍ಕುಮಾರ್ ಹೆಗಡೆ ಅವರು ಎಷ್ಟು ಜನರ ಕೈ ಕತ್ತರಿಸಿದ್ದಾರೆ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವರಾಗಿ ಜವಾಬ್ದಾರಿ ಮರೆತು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ನಮಗೂ ನಿಮಗಿಂತ ಕೆಟ್ಟದಾಗಿ ಮಾತನಾಡುವುದು ಗೊತ್ತಿದೆ. ದಿನೇಶ್‍ಗುಂಡೂರಾವ್ ಅವರ ಮದುವೆ ವಿಷಯವನ್ನು ಪ್ರಶ್ನೆ ಮಾಡುವ ನೀವು ನಿಮ್ಮ ಹೆಂಡತಿ ಯಾವ ಜಾತಿಗೆ ಹುಟ್ಟ್ಟಿದವರು ಯಾರು ಎಂದು ಹೇಳುತ್ತೀರಾ ? ಅದನ್ನು ಪತ್ತೆ ಮಾಡಲು ಡಿಎನ್‍ಎ ಪರೀಕ್ಷೆ ಮಾಡಿಸಿ ಎಂದು ತಿರುಗೇಟು ನೀಡಿದರು.  ಮಹಾತ್ಮಗಾಂಧೀಜಿಯವರನ್ನು ಗುಂಡಿಟ್ಟು ಕೊಂದ ಪ್ರಕರಣದ ಮರುಸೃಷ್ಟಿ ಮಾಡಿ ಸಂಘ ಪರಿವಾರದವರು ಅಣಕು ಪ್ರದರ್ಶನ ಮಾಡುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿ ಈಡೇರಿಸದೇ ಇರುವ ಮೋದಿ ಅವರನ್ನು ನೀವು ಗುಂಡಿಟ್ಟು ಕೊಲ್ಲುತ್ತೀರಾ ಎಂದು ಗೋಪಾಲ್‍ಕೃಷ್ಣ ಪ್ರಶ್ನಿಸಿದರು.

ಹಿಂದುತ್ವ ಎಂಬುದನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಕೂಡ ಹಿಂದುಗಳ ಪಕ್ಷ. ನಾವು ಎಲ್ಲಾ ಜಾತಿ, ಧರ್ಮದವರಿಗೂ ಸಮಾನ ಅವಕಾಶ ನೀಡುತ್ತೇವೆ. ಬಾಯಿಗೆ ಬಂದಂತೆ ಮಾತನಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅನಂತ್‍ಕುಮಾರ್ ಹೆಗಡೆ ಅವರು ಇದೇ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅವರ ಬಾಯಿಗೆ ಹುಳ ಬೀಳುತ್ತದೆ. ಇನ್ನು ಮುಂದೆ ನಾವು ಕೂಡ ಅವರಂತೆ ಬಾಯಿಗೆ ಬಂದಂತೆ ಮಾತನಾಡಿ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಎಚ್.ಕೆ.ಪಾಟೀಲ್ ಅವರು, ಗಾಂಧೀಜಿಯವರನ್ನು ಹತ್ಯೆ ಮಾಡಿದಂತೆ ಅಣಕು ಪ್ರದರ್ಶನ ಮಾಡಿದ ಸಂಘ ಪರಿವಾರದ ಪೂಜಾ ಶಕುಲ್‍ಪಾಂಡೆ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳದೆ ಇದ್ದರೆ ದೇಶಾದ್ಯಂತ ಹೋರಾಟ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಗಾಂಧೀಜಿ ಅನುಯಾಯಿಗಳು ಬಿಜೆಪಿ ಮತ್ತು ಅದರ ಬೆಂಬಲಿತ ಸಂಘಟನೆಗಳನ್ನು ಹಳ್ಳಿಹಳ್ಳಿ, ನಗರ ಪ್ರದೇಶಗಳಲ್ಲಿ ಕಾಲಿಡಲು ಅವಕಾಶ ನೀಡದಂತೆ ಪ್ರತಿರೋಧ ವ್ಯಕ್ತಪಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಗಾಂಧೀಜಿಯವರು ಸತ್ಯ, ಅಹಿಂಸೆ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಇಂದು ಗಾಂಧೀಜಿ ಕೊಂದವರನ್ನು ಆರಾಧಿಸಲಾಗುತ್ತಿದೆ. ಒಂದು ಕಡೆ ಪ್ರಧಾನಿ ಮೋದಿ ಅವರು ಹುತಾತ್ಮ ದಿನಾಚರಣೆ ಎಂದು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ.

ಮತ್ತೊಂದು ಕಡೆ ಬಿಜೆಪಿ ಬೆಂಬಲಿತ ಸಂಘಟನೆಗಳು ಗಾಂಧೀಜಿಯನ್ನು ಕೊಂದ ನಾತೂರಾಮ್ ಗೋಡ್ಸೆಯನ್ನು ಆರಾಧಿಸುತ್ತಿದೆ. ಗಾಂಧೀಜಿ ಹತ್ಯೆ ಪ್ರಕರಣವನ್ನು ಮರು ಸೃಷ್ಟಿ ಮಾಡಿ ಗಾಂಧೀಜಿ ಅನುಯಾಯಿಗಳಿಗೆ ಸಂಘ ಪರಿವಾರದವರು ಸವಾಲೊಡ್ಡುತ್ತಿದ್ದಾರೆ. ಅವರನ್ನು ಬಂಧಿಸಿ ಕೂಡಲೇ ಉಗ್ರ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ದೇಶ ದ್ರೋಹಿಗಳನ್ನು ಬೆಂಬಲಿಸಿದ ಬಿಜೆಪಿಯವರನ್ನು ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಕಾಲಿಡಿಸದಂತಹ ಹೋರಾಟಗಳನ್ನು ಜನ ಕೈಗೆತ್ತಿಕೊಳ್ಳುತ್ತಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಮಾತನಾಡಿ, ಗಾಂಧೀಜಿ ಹತ್ಯೆಯ ಮರುಸೃಷ್ಟಿ ಮಾಡಿದವರು ದೇಶ ದ್ರೋಹಿಗಳು. ನಾಲ್ಕು ದಿನಕಳೆದರೂ ಅಂತಹ ದೇಶ ದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಅನಂತ್‍ಕುಮಾರ್ ಹೆಗಡೆ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಇದೇ ವೇಳೆ ಅವರು ಒತ್ತಾಯಿಸಿದರು. ವಿಧಾನಪರಿಷತ್‍ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಶಾಸಕ ನಂಜಯ್ಯಮಠ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ನಂತರ ಕಾಂಗ್ರೆಸ್ ಭವನದಿಂದ ಆನಂದ್‍ರಾವ್ ವೃತ್ತದವರೆಗೂ ಪಾದಯಾತ್ರೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಮಹಿಳಾ ಕಾಂಗ್ರೆಸ್ ವತಿಯಿಂದ ಪೂಜಾಶಕುಲ್‍ಪಾಂಡೆ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಯಿತು.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا