Urdu   /   English   /   Nawayathi

ಪ್ರತಿ ದೀಪಾವಳಿಗೆ 5 ದಿನಗಳು ಕಾಡಿನಲ್ಲಿ ಹೋಗಿ ಇರುತ್ತಿದ್ದೆ: ಪ್ರಧಾನಿ ನರೇಂದ್ರ ಮೋದಿ

share with us

ಮುಂಬೈ: 24 ಜನುವರಿ (ಫಿಕ್ರೋಖಬರ್ ಸುದ್ದಿ) ಪ್ರತಿ ದೀಪಾವಳಿ ಸಮಯದಲ್ಲಿ ನಾನು 5 ದಿನಗಳ ಕಾಲ ಕಾಡಿಗೆ ಹೋಗಿ ಇದ್ದು ನನ್ನನ್ನೇ ನಾನು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೆ. ಈ ಅಭ್ಯಾಸದಿಂದ ನನಗೆ ಜೀವನವನ್ನು ಮತ್ತು ಅಲ್ಲಿ ಸಿಗುವ ಅನೇಕ ಅನುಭವಗಳನ್ನು ನಿಭಾಯಿಸಲು ಶಕ್ತಿ ಸಿಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಹ್ಯೂಮನ್ಸ್ ಆಫ್ ಬಾಂಬೆ' ಫೇಸ್ ಬುಕ್ ಪುಟಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ತಮ್ಮ ಯೌವ್ವನದ ದಿನಗಳನ್ನು ಹಾಗೂ ಜೀವನದಲ್ಲಿ ಉದ್ದೇಶವನ್ನು ಕಂಡುಕೊಳ್ಳಲು ಸಾಗಿದ ಧಾರ್ಮಿಕ ಪಯಣದ ಮೆಲುಕು ಹಾಕಿದರು. ಈ ಬಗ್ಗೆ ಹಲವರಿಗೆ ಗೊತ್ತಿಲ್ಲ. ನಾನು ಯುವಕನಾಗಿದ್ದಾಗ ದೀಪಾವಳಿ ಬಂತೆಂದರೆ ಪ್ರತಿ ವರ್ಷ 5 ದಿನಗಳ ಕಾಲ ಯಾವುದಾದರೂ ಕಾಡಿಗೆ ಹೋಗಿಬಿಡುತ್ತಿದ್ದೆ. ಅಲ್ಲಿ ಜನ ಜಂಗುಳಿಯಿರುವುದಿಲ್ಲ. ಗದ್ದಲವಿಲ್ಲ, ಮಾಲಿನ್ಯವಿಲ್ಲ, ಶುದ್ಧ ನೀರು ಮತ್ತು ವಾತಾವರಣ ಸಿಗುತ್ತದೆ. 5 ದಿನಗಳಿಗೆ ಬೇಕಾಗುವಷ್ಟು ಆಹಾರ ಕಟ್ಟಿಕೊಂಡು ಹೋಗುತ್ತಿದ್ದೆ. ಕಾಡಿನಲ್ಲಿ ಯಾವ ರೇಡಿಯೊ, ಟಿವಿ, ಪತ್ರಿಕೆಗಳು, ಇಂಟರ್ನೆಟ್ ಆ ಕಾಲದಲ್ಲಿ ಸಿಗುತ್ತಿರಲಿಲ್ಲ, ಆದರೆ ಈ ಸಮಯದಲ್ಲಿ ನನಗೆ ನನ್ನನ್ನು ತಿಳಿದುಕೊಳ್ಳಲು, ಆತ್ಮಾವಲೋಕನ ಮಾಡಿಕೊಳ್ಳಲು ಸಹಾಯವಾಗುತ್ತಿತ್ತು. ಅಲ್ಲಿಗೆ ನೀನು ಯಾರನ್ನು ಭೇಟಿ ಮಾಡಲು ಹೋಗುತ್ತೀಯಾ ಎಂದು ಜನ ಕೇಳುತ್ತಿದ್ದರು. ನಾನು ನನ್ನನ್ನೇ ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದು ಉತ್ತರಿಸುತ್ತಿದ್ದೆ ಎಂದು ಪ್ರಧಾನಿ ಹೇಳಿಕೊಂಡಿದ್ದಾರೆ.

ಇಂದಿನ ಸ್ಪರ್ಧಾತ್ಮಕ, ಧಾವಂತದ ಬದುಕಿನಲ್ಲಿ ಯುವಕರು ತಮ್ಮ ಬಗ್ಗೆ ಯೋಚಿಸಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಕೆಲವು ಸಮಯಗಳನ್ನು ಮೀಸಲಿಡಬೇಕು. ಇದರಿಂದ ನಿಮ್ಮ ಗ್ರಹಿಕೆಯ ವಿಧಾನ ಬದಲಾಗಲಿದ್ದು ನಿಮ್ಮ ಬಗ್ಗೆ ನೀವು ಚೆನ್ನಾಗಿ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. ಈ ಪ್ರಪಂಚದಲ್ಲಿ ನಿಜವಾದ ಗ್ರಹಿಕೆಯಲ್ಲಿ ಬದುಕಲು ಸಾಧ್ಯ, ನಿಮ್ಮ ಬಗ್ಗೆ ಬೇರೆಯವರು ಏನು ಹೇಳುತ್ತಾರೆ ಎಂದು ಅರ್ಥೈಸಿಕೊಳ್ಳಲು ಮತ್ತು ಆತ್ಮವಿಶ್ವಾಸ ಮೂಡಲು ಸಹಕಾರಿಯಾಗುತ್ತದೆ. ಭವಿಷ್ಯದಲ್ಲಿ ಇವೆಲ್ಲಾ ಅನುಕೂಲಕ್ಕೆ ಬರುತ್ತದೆ ಎಂದು ಪ್ರಧಾನಿ ಯುವಜನತೆಗೆ ಕಿವಿಮಾತು ಹೇಳಿದ್ದಾರೆ. ತಾವು 17 ವರ್ಷದವರಿದ್ದಾಗ ಹಿಮಾಲಯಕ್ಕೆ ಹೋಗಿ ಅಲ್ಲಿ 2 ವರ್ಷಗಳ ಕಾಲ ಇದ್ದ ನೆನಪನ್ನು ಮೆಲುಕು ಹಾಕಿದರು. ಆ ವಯಸ್ಸಿನಲ್ಲಿ ನನ್ನಲ್ಲಿ ಸ್ಪಷ್ಟತೆಯಿರಲಿಲ್ಲ, ಮಾರ್ಗದರ್ಶನ ಮಾಡುವವರು ಇರಲಿಲ್ಲ, ನಾನು ಏನಾಗಬೇಕು, ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂದು ಸಹ ನನಗೆ ಗೊತ್ತಿರಲಿಲ್ಲ. ಆದರೆ ನಾನು ಏನಾದರು ಸಾಧಿಸಬೇಕು, ಏನಾದರೂ ಮಾಡಬೇಕು ಎಂಬುದು ಗೊತ್ತಿತ್ತು. ದೇವರಿಗೆ ನನ್ನನ್ನು ನಾನು ಅರ್ಪಿಸಿಕೊಂಡೆ, ಹೀಗಾಗಿ 17ನೇ ವಯಸ್ಸಿನಲ್ಲಿ ಹಿಮಾಲಯಕ್ಕೆ ಹೋದೆ, ದೇವರು ನನ್ನನ್ನು ಕರೆಯುತ್ತಿದ್ದಾರೆ ಎನಿಸಿದಾಗಲೆಲ್ಲ ಹಿಮಾಲಯಕ್ಕೆ ಹೋಗಿ ಬರುತ್ತಿದ್ದೆ ಎಂದರು.

ಹಿಮಾಲಯ ಪ್ರವಾಸ ಸಂದರ್ಭದಲ್ಲಿ ಅನೇಕ ಸಾಧು, ಸಂತರನ್ನು ಭೇಟಿ ಮಾಡಿದೆ. ರಾಮಕೃಷ್ಣ ಮಿಷನ್ ನಲ್ಲಿ ಕಳೆದೆ. ಸಂತರ ಜೊತೆ ಇದ್ದು ನನ್ನೊಳಗಿನ ನನ್ನನ್ನು ಅರಿತುಕೊಳ್ಳಲು ಆರಂಭಿಸಿದೆ. ಬಹುದೂರದವರೆಗೆ ಪ್ರಯಾಣಿಸಿದೆ. ಆ ವಯಸ್ಸಿನಲ್ಲಿ ಬೆಳಗಿನ ಬ್ರಾಹ್ಮೀ ಮುಹೂರ್ತ ಅಂದರೆ ನಸುಕಿನ ಜಾವ 3ರಿಂದ 3.45ರ ಮಧ್ಯೆ ಏಳುತ್ತಿದ್ದೆ, ಹಿಮಾಲಯದ ಕೊರೆಯುವ ಚಳಿಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದರೂ ಬೆಚ್ಚನೆಯ ಭಾವ ಮನಸ್ಸಿಗೆ ಉಂಟಾಗುತ್ತಿತ್ತು. ನೀರಿನ ಹರಿಯುವಿಕೆ ಕಿವಿಗೆ ಇಂಪಾಗಿ ಕೇಳಿಸುತ್ತಿತ್ತು. ಅದರ ಮಧ್ಯೆ ಕುಳಿತು ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುತ್ತಿದ್ದೆ. ನನ್ನ ಆಂತರಿಕ ಜೀವನದಲ್ಲಿ ಬದಲಾವಣೆ ಉಂಟಾಗಲು ಆರಂಭವಾಯಿತು. ನಿಮ್ಮೊಳಗಿನ ಸಿಟ್ಟು, ಅಹಂಕಾರವನ್ನು ಶಮನಗೊಳಿಸಿದರೆ ನಿಮ್ಮ ನಿಜವಾದ ಜೀವನ ಆರಂಭವಾಗುತ್ತದೆ ಎನ್ನುತ್ತಾರೆ ಪ್ರಧಾನಿ. ಹಿಮಾಲಯದಲ್ಲಿ 2 ವರ್ಷಗಳ ಕಾಲ ಇದ್ದು ಮನೆಗೆ ಹಿಂತಿರುಗಿದಾಗ ನನ್ನ ಜೀವನದ ಮುಂದಿನ ಹಾದಿ ಬಗ್ಗೆ ಸ್ಪಷ್ಟತೆ ಸಿಕ್ಕಿತು. ನಂತರದ ದಿನಗಳಲ್ಲಿ ರೈಲು ನಿಲ್ದಾಣದಲ್ಲಿ ತಂದೆಯ ಜೊತೆ ಚಹಾ ಮಾರುತ್ತಿದ್ದಾಗ ದೇಶದ ಹಲವು ಭಾಗಗಳ ಜನರ ಪರಿಚಯವಾಯಿತು. ಅವರ ಜೊತೆ ಮಾತನಾಡುತ್ತಾ ಅವರ ಮಾತು, ಅನುಭವ, ಕಥೆಗಳನ್ನು ಕೇಳುತ್ತಾ ಹಿಂದಿ ಭಾಷೆ ಕಲಿತುಕೊಂಡೆ. ಮುಂಬೈಯಿಂದ ಬಂದ ಕೆಲವು ವ್ಯಾಪಾರಿಗಳು ಮಾತನಾಡುತ್ತಿದ್ದುದನ್ನು ನೋಡಿ ಕನಸಿನ ನಗರಿಯನ್ನು ನೋಡಲು ನನಗೆ ಯಾವಾಗ ಸಾಧ್ಯವಾಗುತ್ತದೆ ಎಂದು ಭಾವಿಸುತ್ತಿದ್ದೆ ಎಂದು ತಾವು ಸಾಗಿಬಂದ ಜೀವನದ ಹಾದಿಯನ್ನು ಬಿಚ್ಚಿಟ್ಟರು ಪ್ರಧಾನಿ. ಪ್ರಧಾನಿಯವರ ಸಂದರ್ಶನ 'ಹ್ಯೂಮನ್ಸ್ ಆಫ್ ಬಾಂಬೆ' ಎಂಬ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದು ಅದರ ಒಂದು ಭಾಗ ಪ್ರಧಾನ ಮಂತ್ರಿಗಳ ಟ್ವಿಟ್ಟರ್ ಅಕೌಂಟ್ ನಲ್ಲಿ ಕೂಡ ಪೋಸ್ಟ್ ಮಾಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا